ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಿಪ್ಪೇಸ್ವಾಮಿ ಬೆಂಬಲಿಗರು ಶನಿವಾರ ಚಿತ್ರದುರ್ಗದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದರು.
ನಗರದ ಪ್ರವಾಸಿ ಮಂದಿರದಿಂದ ಬಂದ ಕಾರ್ಯಕರ್ತರು ತಿಪ್ಪೇಸ್ವಾಮಿ ಪರ ಘೋಷಣೆ ಕೂಗಿದರು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಹೊರಗಿನಿಂದ ಬಂದವರಿಗೆ ಯಾವುದೇ ಕಾರಣದಿಂದ ಟಿಕೆಟ್ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಅವರಿಗೆ ಮನವಿ ಸಲ್ಲಿಸಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ತಿಪ್ಪೇಸ್ವಾಮಿ ಭಾವ ಚಿತ್ರ ಕೈಲಿಡಿದು ಬಂದಿದ್ದ ಪ್ರತಿಭಟನಾಕಾರರು ಒಂದು ಹಂತದಲ್ಲಿ ಯಾವುದೇ ಕಾರಣದಿಂದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ನೀಡಬಾರದೆಂದು ಆಗ್ರಹಿಸಿದರು. ರಾಜ್ಯದಿಂದ ಕೇಂದ್ರಕ್ಕೆ ಚಂದ್ರಪ್ಪ ಅವರ ಒಂದೇ ಹೆಸರು ಹೋಗಿದ್ದು ಕೆಲವರು ಕಿತಾಪತಿ ಮಾಡಿದ್ದಾರೆ. ಜಿಲ್ಲೆಯ ಯಾವ ಶಾಸಕರ ಬೆಂಬಲವೂ ಚಂದ್ರಪ್ಪಗೆ ಇಲ್ಲ. ತಿಪ್ಪೇಸ್ವಾಮಿ ಅವರಿಗೆ ನೀಡುವಂತೆ ಪತ್ರ ನೀಡಿದ್ದಾರೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜೆಜೆ ಹಟ್ಟಿ ತಿಪ್ಪೇಸ್ವಾಮಿ ಸ್ಥಳೀಯರಾಗಿದ್ದು, ಹಿಂದೊಮ್ಮೆ 2009ರಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಎರಡುವರೆ ಲಕ್ಷ ಮತ ಪಡೆದಿದ್ದರು. ಈ ಬಾರಿ ಎಲ್ಲೆಡೆ ಸ್ಥಳೀಯರು ಎಂಬ ಕೂಗು ಎದ್ದಿದೆ. ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಸ್ಥಳೀಯರು ಎಂಬ ಮನೋಭಾವ ನೆಲೆಯೂರಿದ್ದು, ತಿಪ್ಪೇಸ್ವಾಮಿ ಪರ ದನಿ ಎತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಯ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.ಕಳೆದ 10 ವರ್ಷಗಳಿಂದ ಹೊರ ಜಿಲ್ಲೆಯವರಿಗೆ ಪಕ್ಷ ಟಿಕೆಟ್ ನೀಡಿದ್ದು ಈ ಬಾರಿ ಸ್ಥಳೀಯ ಸ್ಪರ್ಧಾ ಆಕಾಂಕ್ಷಿಯಾದ ಡಾ. ಬಿ ತಿಪ್ಪೇಸ್ವಾಮಿ ಜೆಜೆ ಹಟ್ಟಿ ಅವರಿಗೆ ಟಿಕೆಟ್ ಕೊಡಿಸಲು ಜಿಲ್ಲಾ ಅಧ್ಯಕ್ಷರು ಜಿಲ್ಲೆಯ ಜನರ ಪರವಾಗಿ ವಿಶೇಷ ಗಮನ ಹರಿಸಿ ಹೈ ಕಮಾಂಡ್ ಗೆ ನಮ್ಮ ಮನವಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೇಕ ಜನಪರ ಹೋರಾಟ ಮಾಡಿ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ತಾಲೂಕಿನ ಪ್ರತಿಯೊಂದು ಗ್ರಾಮ ಹೋಬಳಿ ಹಾಗೂ ನಗರ ಮಟ್ಟದಲ್ಲಿ ಸಭೆ ಸಮಾರಂಭ ಕಾರ್ಯಕ್ರಮಗಳನ್ನು ಮಾಡಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಮತದಾರರು ಸ್ಥಳೀಯ ನಾಯಕರ ಆಯ್ಕೆಯಲ್ಲಿ ಬಹಳ ನಿರೀಕ್ಷೆ ಇಟ್ಟಿದ್ದು ಅವರ ಆಶಯಗಳಿಗೆ ಮಾನ್ಯತೆ ನೀಡಿ ಸ್ಥಳೀಯರಿಗೆ ಟಿಕೆಟ್ ಕೊಡಿಸಬೇಕು. ಕಳೆದ ಅನೇಕ ವರ್ಷಗಳಿಂದ ಸ್ಥಳೀಯ ನಾಯಕತ್ವಕ್ಕೆ ಜನಾಂದೋಲನ ನಡೆಯುತ್ತಿದ್ದು ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಟ್ಟು ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳವುತ್ತ ಗಮನ ಹರಿಸಬೇಕೆಂದ ತಾಜ್ ಫೀರ್ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.