ಬಳ್ಳಾರಿ: ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ಕಾರ್ಮಿಕರ ವಿವಿಧ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ನಿಗದಿಯಾದ ಕನಿಷ್ಠ ವೇತನ 4- 5 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಇದರಿಂದ ಕಾರ್ಮಿಕರು ಅತ್ಯಂತ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. 2023ರ ಏಪ್ರಿಲ್‌ನಲ್ಲಿ ವೇತನ ಪರಿಷ್ಕೃತಗೊಂಡಿದ್ದು, ಅಲ್ಲಿಂದ ಆಗಸ್ಟ್ 2023ರ ವರೆಗೆ ಹಿಂಬಾಕಿ ಕೂಡ ಬರಬೇಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ಪ್ರಮೋದ್ ಮಾತನಾಡಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪಿಎಫ್ ಹಣ ಸರಿಯಾಗಿ ಗುತ್ತಿಗೆದಾರರು ಸರಿಯಾಗಿ ಹಾಕುತ್ತಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಪಿಎಫ್ ಹಣ ಸಂದಾಯವಾದ ಮೆಸೇಜ್‌ಗಳ ಕೂಡ ಬರುತ್ತಿಲ್ಲ. ಈ ಹಿಂದೆ ಇದ್ದ ಗುತ್ತಿಗೆದಾರರು ರಂಗನಾಥ ಏಜೆನ್ಸಿಯ ತಪ್ಪು ಕ್ರಮಗಳಿಂದಾಗಿ ಕಾರ್ಮಿಕರು ಕಷ್ಟಪಟ್ಟು ದುಡಿದ ತಮ್ಮ ಪಿಎಫ್ ಹಣವನ್ನು ಬಿಡಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಗುತ್ತಿಗೆದಾರರು ಪೇಮೆಂಟ್ ಸ್ಲಿಪ್, ರಜಾ ಸೌಲಭ್ಯ, ನೇಮಕಾತಿ ಆದೇಶ ಇವು ಸರಿಯಾಗಿ ನೀಡುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಸರ್ಕಾರಗಳು ಹೊರಗುತ್ತಿಗೆ ಪದ್ಧತಿಯ ಮೂಲಕ ಕಾರ್ಮಿಕರ ಶೋಷಣೆಗೆ ಪುಷ್ಟಿ ನೀಡುತ್ತಿವೆ. ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ಗುತ್ತಿಗೆದಾರರ ಮೇಲೆ ಯಾವುದೇ ಕಠಿಣ ಕ್ರಮವಿಲ್ಲ. ಕಾಯಂ ಸ್ವರೂಪದ ಕೆಲಸಗಳಲ್ಲೂ ಹೊರಗುತ್ತಿಗೆ ಪದ್ಧತಿ ಅತ್ಯಂತ ಕಾರ್ಮಿಕ ವಿರೋಧಿಯಾಗಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್ ತಿಳಿಸಿದರು.ವಸತಿನಿಲಯ ಕಾರ್ಮಿಕ ಸಂಘದ ಕಾರ್ಯದರ್ಶಿ ಸುರೇಶ್ ಜಿ., ಲಕ್ಷ್ಮಿ, ಮುರಳಿಕೃಷ್ಣ, ಈಶ್ವರಮ್ಮ, ಜಯರಾಂ, ಮಲ್ಲಯ್ಯ, ಸುರೇಶ್ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಪಂ ಸಿಇಒ ಶರಣಪ್ಪ ರಾಹುಲ್ ಸಂಕನೂರು ಮನವಿಪತ್ರ ಸ್ವೀಕರಿಸಿದರು.