ಕನ್ನಡಪ್ರಭ ವಾರ್ತೆ ಬೆಳಗಾವಿ
ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.ಗ್ರಾಮಸ್ಥ ಬಾಬು ಪಾಟೀಲ ಮಾತನಾಡಿ, ತಿಗಡಿ, ನಾವಲಗಟ್ಟಿ, ಪುಲಾರಕೊಪ್ಪ, ಶಿಗೀಹಳ್ಳಿ ಹಾಗೂ ಮರೀಕಟ್ಟಿ ಗ್ರಾಮಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ವೃದ್ಧರು, ಮಹಿಳೆಯರು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಬಸ್ ಬರದಿರುವುದರಿಂದ ವಿದ್ಯಾರ್ಥಿಗಳು, ನೌಕರರು, ತರಗತಿಗೆ ಹಾಗೂ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಸ್ ಸಂಚಾರ ಕಡಿತಗೊಳಿಸಿರುವುದರಿಂದ ಒಂದೇ ಬಸ್‌ನಲ್ಲಿ ಹೆಚ್ಚಿನ ಪ್ರಯಾಣಕರು ತುಂಬಿರುವುದರಿಂದ ವಿದ್ಯಾರ್ಥಿಗಳು ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ತಿಗಡಿಯಿಂದ ತಿಗಡಿ ಕ್ರಾಸ್‌ವರೆಗೆ ಸುಮಾರು ಮೂರು ಕಿ.ಮೀ ದೂರ ನಡೆದುಕೊಂಡು ಹೋಗಿ, ಅಲ್ಲಿಂದ ಬೇರೆ ಬಸ್ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿಕೊಂಡಿದ್ದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.ಕೆಲವು ಗಂಟೆಗಳ ಕಾಲ ಗ್ರಾಮದಲ್ಲೆ ಬಸ್ ತಡೆಹಿಡಿದಿದ್ದರಿಂದ ಸ್ಥಳಕ್ಕೆ ದೌಡಾಯಿಸಿದ ಸಾರಿಗೆ ಅಧಿಕಾರಿಗಳು, ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಸಾರಿಗೆ ಅಧಿಕಾರಿಗಳ ಭರವಸೆ ನೀಡುತ್ತಿದ್ದಂತೆ ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಹಾಗೂ ಪ್ರತಿಭಟನಾಕಾರರು ಈಗಾಗಲೇ ಹಲವು ಭಾರಿ ತಮ್ಮ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ನಿಮ್ಮ ಬೇಜವಾಬ್ದಾರಿಯಿಂದ ಬಸ್ ಬಾಗಿಲಿಗೆ ಜೋತು ಬಿದ್ದು, ಜೀವ ಪಣಕ್ಕಿಟ್ಟು ಪ್ರಯಾಣಿಸಬೇಕಾಗಿದೆ ಎಂದು ತೀವ್ರ ತರಾಟಗೆ ತೆಗೆದುಕೊಂಡರು. ಬಳಿಕ ಶೀಘ್ರವೇ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.