ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮರು ಸ್ಥಾಪನೆಗೆ ಆಗ್ರಹ

KannadaprabhaNewsNetwork |  
Published : Aug 23, 2024, 01:06 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ನಾಗರಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಯಥಾಸ್ಥಿತಿಯಾಗಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಳಪಡಿಸಲು ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮಾಜಿ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ನಾಗರಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಯಥಾಸ್ಥಿತಿಯಾಗಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಳಪಡಿಸಲು ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮಾಜಿ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸದಸ್ಯ ಎಂ.ಎಸ್‌. ಶಿವಾನಂದ, ಅಂದಾಜು 15 ಸಾವಿರ ಜನಸಂಖ್ಯೆ ಒಳಗೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಪುರಸಭೆಗೆ ಸೇರ್ಪಡೆಗೊಳಿಸಿ ಸುಮಾರು ಎರಡು ವರ್ಷಗಳು ಕಳೆದಿವೆ. ಗ್ರಾಮದ ಅಭಿವೃದ್ಧಿ ಚಿಂತನೆ ನಡೆಸಿ ಮಾಜಿ ಶಾಸಕರ ಸೂಚನೆಯಂತೆ 23 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಅಧಿಕಾರ ತ್ಯಾಗ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಖ್ಯಾತಿ ಹೊಂದಿರುವ ಮುಳ್ಳುಸೋಗೆ ಗ್ರಾಮ ಜನತೆ ಇದೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.ಗ್ರಾಮದಲ್ಲಿ ಶಾಸಕರ ಕಚೇರಿ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸ್ಥಾಪನೆ ಆಗಿದೆ ಹೊರತು ಇನ್ನು ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ತಕ್ಷಣ ಕುಶಾಲನಗರ ಪುರಸಭೆ ಚುನಾವಣೆ ನಡೆಸಬೇಕು. ಇಲ್ಲದಲ್ಲಿ ಮತ್ತೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸದಸ್ಯ ಎಂ.ಎಸ್‌. ರಾಜೇಶ್ ಮಾತನಾಡಿ, ಚುನಾವಣೆ ಮೂಲಕ ಐದು ವರ್ಷಗಳ ಅವಧಿಯ ಅಧಿಕಾರ ಪಡೆದಿರುವ ಸದಸ್ಯರು ಕೇವಲ ಒಂದೂವರೆ ವರ್ಷಗಳ ಅವಧಿಯಲ್ಲಿ ತಮ್ಮ ಅಧಿಕಾರದಿಂದ ವಂಚಿತರಾಗಿದ್ದಾರೆ. ಪುರಸಭೆ ಮೇಲ್ದರ್ಜೆಗೇರಿಸಿರುವ ಹೆಸರಿನಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗುತ್ತಿದೆ ಎಂದು ಆಕ್ಷೇಪಿಸಿದರು.

ಈ ಎಲ್ಲಾ ಬೆಳವಣಿಗೆ ನಡುವೆ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಅಸ್ತಿತ್ವ ಉಳಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.

ಸದಸ್ಯ ಸಿ.ಎಂ.ಆಸೀಫ್‌ ಮಾತನಾಡಿ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವಿಷಯದಲ್ಲಿ ಶಾಸಕರು ಪಕ್ಷದ ಪರ ಏಕಮುಖಿಯಾಗಿ ಕೆಲಸ ಮಾಡುವಂತೆ ಕಂಡು ಬಂದಿದೆ. ಮಾಜಿ ಸದಸ್ಯರಿಗೆ ಮತ್ತು ನಾಗರಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸಲಿದ್ದಲ್ಲಿ ಮಾಜಿ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಸ್ಥಳೀಯ ಶಾಸಕರ ಕಚೇರಿ, ಪಟ್ಟಣ ಪಂಚಾಯಿತಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ.

ಇನ್ನು 15 ದಿನಗಳ ಒಳಗಾಗಿ ಪಟ್ಟಣ ಪಂಚಾಯಿತಿಯ ಎರಡನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವುದಾಗಿ ಹೇಳಿಕೆ ನೀಡಿರುವ ಕ್ಷೇತ್ರ ಶಾಸಕರ ಹೇಳಿಕೆಯನ್ನು ಮಾಜಿ ಸದಸ್ಯರು ಖಂಡಿಸಿದರು.

ಮುಳ್ಳುಸೋಗೆ ಗ್ರಾಮಸ್ಥರಾದ ಎಂ.ಎಸ್‌.ಕುಮಾರ್‌, ಪ್ರದೀಪ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ