ಕನ್ನಡಪ್ರಭ ವಾರ್ತೆ ಸುರಪುರ
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳ ನಿಯಮವನ್ನು ಸಡಿಲಿಕೆ ಮಾಡಿ ಮಾಸಿಕ ಐದು ಸಾವಿರ ರು.ಗಳ ಹೆಚ್ಚಿಸಿ ಅಶಕ್ತರನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಗಾಂಧಿವಾದಿ ಜನಪರ ಚಳವಳಿ ಸಮಿತಿ ಸದಸ್ಯರು ಶುಕ್ರವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಯ್ಯಾಳಪ್ಪ ಗಾಂಧಿವಾದಿ, ಸಾಮಾಜಿಕ ಭದ್ರತೆ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಮತ್ತು ಅಂಗವಿಕಲ ವೇತನ ಹಾಗೂ ಮನಸ್ವಿನಿ ವೇತನ ಯೋಜನೆಗಳು ಸಂಪೂರ್ಣ ಸಾರ್ವಜನಿಕರಿಗೆ ವಿರುದ್ಧವಾದ ನಿಯಮಗಳಿಗೆ ಒಳಪಟ್ಟಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪದಂತಾಗಿವೆ. ಯೋಜನೆಗಳು ಉಳ್ಳವರ ಪಾಲಾಗಿದ್ದು, ಸಂಪೂರ್ಣ ಹಳ್ಳ ಹಿಡಿದಿದೆ ಎಂದು ದೂರಿದರು.
ವೃದ್ಧಾಪ್ಯ ವೇತನ, ವಯಸ್ಸು 65 ನಿಗದಿಪಡಿಸಿರುವುದು ಅಸಮಂಜಸವಾಗಿದೆ. ಯಾಕೆಂದರೆ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ನಮ್ಮ ನಾಗರಿಕರು 55 ವರ್ಷದಲ್ಲಿಯೇ ದುಡಿಯುವ ಶಕ್ತಿ ಕಳೆದುಕೊಂಡಿರುತ್ತಾರೆ. ಆದಕಾರಣ ಇದನ್ನು 55ಕ್ಕೆ ಇಳಿಸುವುದು ಸೂಕ್ತ ಮತ್ತು ನ್ಯಾಯ ಸಮ್ಮತವಾಗಿದೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ಗಂಡು ಮಕ್ಕಳು ಇರಬಾರದೆಂದು ನಿಯಮವಿದೆ. ಆದರೆ ಈ ಭಾಗದಲ್ಲಿ ಗಂಡು ಮಕ್ಕಳು ಇದ್ದರೂ ಯಾರು ಆರೈಕೆ ಮಾಡುತ್ತಿಲ್ಲ. ತಮ್ಮ ಕುಟುಂಬದ ನಿರ್ವಹಣೆಗಾಗಿ ಗುಳೆ ಹೊರಟಿರುತ್ತಾರೆ. ಅವರಿಗೆ ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಹಾಗಾಗಿ ಈ ನಿಯಮವನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು.ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಕೋರ್ಟಿನಿಂದ ವಿಚ್ಛೇದನಾ ಪ್ರಮಾಣ ಪತ್ರ ಅವಶ್ಯಕತೆ ಇದ್ದು, ಈ ಭಾಗದ ಮಹಿಳೆಯರು ಗಂಡನ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಲು ಶಕ್ತಿ ಇಲ್ಲದ ಕಾರಣ ಅವರು ಒಂಟಿಯಾಗಿ ಬದುಕುತ್ತಿದ್ದಾರೆ. ಇಂತವರಿಗೆ ಮಕ್ಕಳನ್ನು ಪಾಲನೆ, ಪೋಷಣೆ ಮಾಡಲು ತುಂಬಾ ಕಷ್ಟಪಡುತ್ತಿದ್ದಾರೆ. ಈ ನಿಯಮವನ್ನು ಸಡಿಲಿಸಿ ಅವರ ಹೇಳಿಕೆ ಮೇರೆಗೆ ಯೋಜನೆಯನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.
ಅಂಗವಿಕಲರ ಯೋಜನೆಗೆ ಶೇ.75 ಅಂಗವಿಕಲತೆ ಅವಶ್ಯಕತೆ ಇದ್ದು, ಇದು ಎಷ್ಟೋ ಜನರು ಬೋಗಸ್ ಕೊಟ್ಟು ಕಾಗದವನ್ನು ಸೃಷ್ಟಿಸಿ ಹಣ ಪಡೆಯುತ್ತಿದ್ದಾರೆ. ನಿಜವಾದ ಫಲಾನುಭವಿಗಳು ಹಣ ಇಲ್ಲದ ಕಾರಣ ಅವರಿಗೆ ಅವರಿಗೆ ಅಧಿಕಾರಿಗಳು ಕಾಗದ ನೀಡಿರುವುದಿಲ್ಲ. ಈ ನಿಯಮವನ್ನು ಸಡಿಲಿಸಿ ಶೇ.50 ಪರಿಗಣಿಸಬೇಕು.ಈ ಕೂಡಲೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಅವೈಜ್ಞಾನಿಕ ನಿಯಮಗಳನ್ನು ಕೈ ಬಿಡದಿದ್ದರೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿ, ಸಂಘದ ಸದಸ್ಯರು ಗ್ರೇಡ್-2 ಉಪ ತಹಸೀಲ್ದಾರ್ ಮಲ್ಲು ದಂಡು ಅವರಿಗೆ ಮನವಿ ಸಲ್ಲಿಸಿದರು.
ಭಾಗಪ್ಪ, ಮಲ್ಲಮ್ಮ, ಭೀಮಪ್ಪ, ಶೇಖಮ್ಮ, ವೀರಭದ್ರಪ್ಪ, ಹೈಯಾಳಪ್ಪ, ಮರೆಮ್ಮ, ಅಮತೆಮ್ಮ, ಹಣಮಂತಿ, ಯಲ್ಲಮ್ಮ, ಭೀಮಪ್ಪ ಆಂಜನಮ್ಮ, ಮುತ್ತಮ್ಮ, ಮಲ್ಲಮ್ಮ, ಭೀಮಪ್ಪ, ಮಾನಪ್ಪ, ಬಸಲಿಂಗಮ್ಮ, ಮರೆಮ್ಮ ಭೀಮಪ್ಪ, ಭೀಮಪ್ಪ, ಯಲ್ಲಮ್ಮ, ರಾಮಣ್ಣ ಸೇರಿದಂತೆ ಇತರರು ಇದ್ದರು.