ಕನ್ನಡಪ್ರಭ ವಾರ್ತೆ ಕಮಲನಗರ
ಪಟ್ಟಣದ ರೈಲು ನಿಲ್ದಾಣದಿಂದ ಹಾದು ಹೋಗುವ ಪ್ರತಿಯೊಂದು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಮಂಗಳವಾರ ದಕ್ಷಿಣ ಮಧ್ಯ ಸಿಕಿಂದ್ರಾಬಾದ್ ವಿಭಾಗದ ಉಪ ರೈಲ್ವೆ ವ್ಯವಸ್ಥಾಪಕರಾದ ಆರ್. ಗೋಪಾಲಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದರು.ವಿಶೇಷ ರೈಲಿನಲ್ಲಿ ಕಮಲನಗರ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಅವರಿಗೆ ಹಿರಿಯ ನಾಗರಿಕರಾದ ಬಸವರಾಜ ಪಾಟೀಲ್ ಮಾತನಾಡಿ, ‘ಕಮಲನಗರ ಕರ್ನಾಟಕದ ಕಿರೀಟವಾಗಿದ್ದು, ತಾಲೂಕಿನ ಗಡಿಭಾಗದ ಏಕೈಕ ರೈಲು ನಿಲ್ದಾಣ ಆಗಿದೆ. ಈ ನಿಲ್ದಾಣದ ಮೂಲಕ ಹಾದು ಹೋಗುವ ಪ್ರತಿ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರತ್ಯೇಕ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ಮಾಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶಿಲಾ ಮಹೇಶ ಸಜ್ಜನ್ ಮಾತನಾಡಿ, ಸಾಯಿ ನಗರ ಶಿರಡಿ ಹಾಗೂ ನಾಂದೇಡ-ಬೆಂಗಳೂರು ಸೆ. 19ರಿಂದ ಈ ರೈಲುಗಳ ನಿಲುಗಡೆ ರದ್ದುಗೊಳಿಸಿದ ದಕ್ಷಿಣ ಮಧ್ಯ ರೈಲ್ವೆ ಹಠಾತ್ ನಿರ್ಧಾರದಿಂದ ಸ್ಥಳೀಯರು ಮತ್ತು ವ್ಯಾಪಾರಿ ವರ್ಗ ಆತಂಕಗೊಂಡಿದೆ. ಅಧಿಕಾರಿಗಳು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಅಮೂಲ ಸೂರ್ಯವಂಶಿ, ಬಾಲಾಜಿ ತೇಲಂಗ್ ಮಾತನಾಡಿ, ಕೂಡಲೇ ನಾಂದೇಡ್-ಬೆಂಗಳೂರು, ಮುಂಬೈ- ಬೀದರ್, ಔರಂಗಾಬಾದ್- ಗುಂಟೂರ್, ಪುಣೆ - ಹೈದ್ರಾಬಾದ್, ಔರಂಗಾಬಾದ್ - ರೆಣಿಗುಂಟಾ, ಲೋಕಮಾನ್ಯ ತಿಲಕ್ - ಮುಂಬೈ ಹಾಗೂ ಸಾಯಿ ನಗರ ಶಿರಡಿಗೆ ಹೋಗುವ ರೈಲುಗಳು ನಿಲುಗಡೆಯಾಗಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಮಧ್ಯ ರೈಲ್ವೆ ಸಿಕಿಂದ್ರಾಬಾದ್ ಸಿಕಿಂದ್ರಾಬಾದ್ ವಿಭಾಗದ ಉಪ ರೈಲ್ವೆ ವ್ಯವಸ್ಥಾಪಕರಾದ ಆರ್. ಗೋಪಾಲ ಕೃಷ್ಣ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಆದಷ್ಟು ಬೇಗ ಈ ರೈಲುಗಳ ನಿಲುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಾನಂದ ವಡ್ಡೆ, ಗೋವಿಂದರಾವ್ ತಾಂದಳೆ, ಸಂತೋಷ ಸೊಲ್ಲಾಪುರೆ, ಗುಂಡಪ್ಪ ದಾನಾ, ಬಾಲಾಜಿ ಕಾಳೇಕರ್, ಎಸ್‌ಎನ್ ಭಾಸ್ಕರ್, ಆರ್‌ವಿ ಸೂರ್ಯವಂಶಿ, ಅಜರ ಬಾಗವಾನ, ಆಯುಬ್ ಖುರೇಶಿ, ಶಬ್ಬಿರ ಖುರೇಶಿ, ಶಾದುಲ್ ಹಾಗೂ ಅನೇಕ ಗ್ರಾಮದ ಗ್ರಾಮಸ್ಥರು ಇದ್ದರು.
ಕನ್ನಡಪ್ರಭ ವಿಶೇಷ ವರದಿಗೆ ಡಿಆರ್‌ಎಂ ಸ್ಪಂದನೆ: ಸೆ. 22ರಂದು ಸೋಮವಾರ ಕನ್ನಡಪ್ರಭ ''''''''ಕಮಲನಗರದಲ್ಲಿ ರೈಲು ನಿಲುಗಡೆ ಹಠಾತ್ ರದ್ದು'''''''' ಎಂಬ ಶೀರ್ಷಿಕೆ ಅಡಿ ಸಮಸ್ಯೆಯ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಈ ಬಗ್ಗೆ ಕಮಲನಗರ ಜನತೆ ಕನ್ನಡಪ್ರಭ ಪತ್ರಿಕೆ ಕಾಳಜಿಯನ್ನು ಶ್ಲಾಘಿಸಿದ್ದಾರೆ.