ದೇಶದ್ರೋಹಿ ಘೋಷಣೆ ಹಿನ್ನೆಲೆ ಆರೋಪಿಗಳ ಗಡಿಪಾರು ಮಾಡಲು ಆಗ್ರಹ

KannadaprabhaNewsNetwork | Published : Mar 6, 2024 2:22 AM

ಸಾರಾಂಶ

ವಿಶ್ವಹಿಂದೂ ಪರಿಷತ್ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಿಂದ ಸರ್ಕಾರಕ್ಕೆ ಮನವಿ

ವಕಾಲತ್ತು ವಹಿಸದಂತೆ ರಾಜ್ಯ ವಕೀಲರ ಪರಿಷತ್‌ಗೂ ಮನವಿ

ಕನ್ನಡಪ್ರಭ ವಾರ್ತೆ ಬ್ಯಾಡಗಿ

‘ಪಾಕಿಸ್ತಾನ ಜಿಂದಾಬಾದ್’ ದೇಶದ್ರೋಹಿ ಘೋಷಣೆ ಆರೋಪದ ಮೇಲೆ ಬಂಧಿತರಾಗಿರುವ ಸ್ಥಳೀಯ ಮೆಣಸಿನಕಾಯಿ ವರ್ತಕ ಮಹ್ಮದ್ ಶಫಿ ನಾಶಿಪುಡಿ ವಿರುದ್ಧ ಎನ್‌ಐಎ ತನಿಖೆ ನಡೆಸಿ ಪಾಕಿಸ್ತಾನಿ ಮನಸ್ಥಿತಿಯುಳ್ಳವರನ್ನು ಗಡಿಪಾರು ಮಾಡುವಂತೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜೊತೆಗೆ ನ್ಯಾಯವಾದಿಗಳ ಸಂಘಕ್ಕೂ ಮನವಿ ಸಲ್ಲಿಸಿ ಆತನ ಪರವಾಗಿ ವಕಾಲತ್ತು ನಡೆಸದಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಹಿಂದೂ ಪರಿಷತ್ ಮುಖಂಡ ವಿಷ್ಣುಕಾಂತ ಬೆನ್ನೂರ, ದೇಶದ್ರೋಹದ ಘೋಷಣೆ ಕೂಗಿದ ಶಫಿ ನಾಶಿಪುಡಿ, ಮೆಣಸಿನಕಾಯಿಗೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬ್ಯಾಡಗಿ ಪಟ್ಟಣದ ಹೆಸರಿಗೆ ಮಸಿ ಬಳಿದಿದ್ದಾನೆ. ಹೀಗಾಗಿ ಈತನ ಕೃತ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರಬೇಕಿದ್ದು, ಕೂಡಲೇ ಪ್ರಕರಣವನ್ನ ಎನ್‌ಐಎ ಒಪ್ಪಿಸುವಂತೆ ಆಗ್ರಹಿಸಿದರು.

ಮುಖಂಡ ವಿಜಯ ಮಾಳಗಿ ಮಾತನಾಡಿ, ಇಂತಹ ಆರೋಪಿತರು ಮಾರುಕಟ್ಟೆಯೊಳಗೆ ಇದ್ದಷ್ಟು ದಿವಸ ಇಲ್ಲಿನ ವ್ಯಾಪಾರಸ್ಥರಿಗೆ ಆತಂಕ ತಪ್ಪಿದ್ದಲ್ಲ. ಕೂಡಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಧ್ಯ ಪ್ರವೇಶಿಸಿ ದೇಶದ್ರೋಹದಡಿ ಬಂಧನವಾಗಿರುವ ಮಹ್ಮದ್ ಶಫಿ ನಾಶಿಪುಡಿ ಹಾಗೂ ಆತನಿಗೆ ಸಂಬಂಧಿಸಿದ ಎಲ್ಲಾ ಲೈಸನ್ಸ್‌ಗಳನ್ನು ಅಮಾನತ್ತಿನಲ್ಲಿಟ್ಟು ದಲಾಲರ ನೆರವಿಗೆ ಬರುವಂತೆ ಒತ್ತಾಯಿಸಿದರು.

ಮುಖಂಡ ಪ್ರದೀಪ್ ಜಾಧವ ಮಾತನಾಡಿ, ಹಿಂದೂ-ಮುಸ್ಲಿಂ ಸಮುದಾಯದ ಜನರು ಪಟ್ಟಣದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂಬ ದೇಶದ್ರೋಹಿ ಘೋಷಣೆಯಿಂದ ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಸ್ಥಳೀಯ ಅಂಜುಮನ್-ಏ-ಇಸ್ಲಾಂ ಸಮಿತಿ ಸ್ವಯಂಪ್ರೇರಿತವಾಗಿ ಆತನ ಸದಸ್ಯತ್ವವನ್ನು ರದ್ದುಗೊಳಿಸಿ ಹಿಂದೂ- ಮುಸ್ಲಿಂ ಜನರು ಸಾಮರಸ್ಯದಿಂದ ಬದುಕಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.

ಮತ್ತೊಬ್ಬ ಮುಖಂಡ ವಿನಾಯಕ ಕಂಬಳಿ ಮಾತನಾಡಿ, ದೇಶದ್ರೋಹದ ಹೇಳಿಕೆ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ನಾಶಿಪುಡಿ ಬ್ಯಾಡಗಿ ಮೆಣಸಿನಕಾಯಿ ವರ್ತಕರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಈ ಕೂಡಲೇ ಪಾವತಿಸಿ ಇಂತಹ ವ್ಯಕ್ತಿಯನ್ನ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರದೀಪ ಜಾಧವ, ಸುಭಾಸ್ ಮಾಳಗಿ, ನಂದೀಶ ವೀರನಗೌಡ್ರ, ಬಸವರಾಜ, ಮನೋಜ ಮಹೇಶ ಗಿರಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಕಾಲತ್ತು ವಹಿಸಬೇಡಿ:

ಪಾಕಿಸ್ತಾನ ಜಿಂದಾಬಾದ್ ದೇಶದ್ರೋಹಿ ಘೋಷಣೆ ಆರೋಪದ ಮೇಲೆ ಬಂಧಿತರಾದ ಸ್ಥಳೀಯ ಮೆಣಸಿನಕಾಯಿ ವರ್ತಕ ಮಹ್ಮದ ಶಫಿ ನಾಶಿಪುಡಿ ಪರವಾಗಿ ನ್ಯಾಯವಾದಿಗಳು ಕಾನೂನು ಸಲಹೆ ಸೇವೆ, ವಕಾಲತ್ತು ವಹಿಸದಂತೆ ಸ್ಥಳೀಯ ನ್ಯಾಯವಾದಿಗಳ ಸಂಘದ ಮೂಲಕ ರಾಜ್ಯ ವಕೀಲರ ಪರಿಷತ್ ಮನವಿ ಸಲ್ಲಿಸಲಾಯಿತು.

Share this article