ನೇಹಾ ಹಿರೇಮಠ್ ಕೊಲೆ ಪ್ರಕರಣ ಸಿಬಿಐಗೆವಹಿಸಲು ಆಗ್ರಹ

KannadaprabhaNewsNetwork | Published : Apr 23, 2024 12:46 AM

ಸಾರಾಂಶ

ಹುಬ್ಬಳ್ಳಿಯಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಗೆ ಚಾಕುವಿನಿಂದ ಹಿರಿದು ಭೀಕರವಾಗಿ ಹತ್ಯೆಗೈದ ಪ್ರಕರಣವನ್ನು ಸಿಬಿಐಗೆವಹಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ: ಹುಬ್ಬಳ್ಳಿಯಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಗೆ ಚಾಕುವಿನಿಂದ ಹಿರಿದು ಭೀಕರವಾಗಿ ಹತ್ಯೆಗೈದ ಪ್ರಕರಣವನ್ನು ಸಿಬಿಐಗೆವಹಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿ ನಂತರ ಮನವಿ ಸಲ್ಲಿಸಿದರು. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜಘಾತುಕ ಶಕ್ತಿಗಳು ಬೀದಿಗಿಳಿದು ಅಶಾಂತಿ ಸೃಷ್ಟಿಸುತ್ತವೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಇರಿದು ಕೊಂದಿರುವುದು ಇದಕ್ಕೆ ಸಾಕ್ಷಿ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಭಯೋತ್ಪಾದಕರು, ಉಗ್ರಗಾಮಿಗಳು, ಗೂಂಡಾಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿರಿಯಾನಿ ತಿನ್ನಿಸಿ ಸಾಕಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಿದ್ದರೂ ಕ್ರಮಕೈಗೊಳ್ಳಲು ಆಗದ ಹೇಡಿ ಸರ್ಕಾರಕ್ಕೆ ಜನರೆ ತಕ್ಕ ಬುದ್ಧಿ ಕಲಿಸುತ್ತಾರೆ. ಮುಸಲ್ಮಾನರನ್ನು ತುಷ್ಟಿಕರಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೇಕಿಲ್ಲ. ರಾಜ್ಯಾದ್ಯಂತ ಜೈಶ್ರೀರಾಮ್ ಎನ್ನುವ ಘೋಷಣೆ ಕೂಗುತ್ತೇವೆ. ಅದೆಷ್ಟು ಜನರನ್ನು ಜೈಲಿಗೆ ಹಾಕುತ್ತಾರೋ ಹಾಕಲಿ. ಎಂಜಲು ವೋಟಿಗಾಗಿ ಹಿಂದೂ ಮಹಿಳೆಯರನ್ನು ಕಾಂಗ್ರೆಸ್ ಬಲಿ ಕೊಡುತ್ತಿದೆ. ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಫಯಾಜ್‍ಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ನಾಲಾಯಕ್ ಗೃಹಮಂತ್ರಿಯಿರುವುದರಿಂದ ಹಿಂದೂ ಮಹಿಳೆಯರು, ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲದಂತಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಹಾಗಾಗಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆಯಾಗಿದೆ. ಜೈಶ್ರೀರಾಮ್ ಘೋಷಣೆ ಕೂಗುವವರು, ಹನುಮಾನ್ ಚಾಲಿಸ್ ಹಾಕುವವರ ಮೇಲೆ ಹಲ್ಲೆಯಾಗುತ್ತಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳ ಮೇಲೆ ಕ್ರಮಕೈಗೊಳ್ಳಲು ಆಗದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರಿಂದ ಹಿಂದೂಗಳಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಮತಾಂತರ ಶಕ್ತಿಗಳು ಅಟ್ಟಹಾಸದಿಂದ ಮೆರಯುತ್ತಿದ್ದಾರೆ. ಮುಸಲ್ಮಾನರನ್ನು ಓಲೈಸಲು ಜೈಶ್ರೀರಾಮ್ ಎಂದು ಕೂಗುವವರನ್ನು ಥಳಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಹಿರೇಮಠ್ ಕುಟುಂಬಕ್ಕೆ ರಕ್ಷಣೆ ನೀಡುವ ಬದಲು ಹಂತಕ ಫಯಾಜ್‍ಗೆ ಉಪಚಾರ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್‍ ಸಿದ್ದಾಪುರ, ಯುವ ಮುಖಂಡ ಹನುಮಂತೆಗೌಡ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾರೆಡ್ಡಿ, ಮಾಜಿ ಸಚಿವ ಬೆಳ್ಳುಬ್ಬಿ, ಡಾ.ಸಿದ್ದಾರ್ಥ, ಸಂಪತ್, ಭಾರತಿ, ಕವನ, ಮಂಜುಳ, ಬಸಮ್ಮ, ಪೂರ್ಣಿಮ, ನಗರಸಭೆ ಸದಸ್ಯರುಗಳಾದ ವೆಂಕಟೇಶ್, ಹರೀಶ್, ಭಾಸ್ಕರ್, ಸುರೇಶ್, ತಿಪ್ಪಮ್ಮ ವೆಂಕಟೇಶ್, ತಾರಕೇಶ್ವರಿ, ಅನುರಾಧ ರವಿಕುಮಾರ್, ಭಾಗ್ಯಮ್ಮ, ನಗರ ಮೋರ್ಚಾ ಅಧ್ಯಕ್ಷೆ ಶೀಲ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article