ಕನ್ನಡಪ್ರಭ ವಾರ್ತೆ ವಿಜಯಪುರ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುನಂದಾ ನಾಯಕ ಮಾತನಾಡಿ, ಮುಂಬರುವ ಬಜೆಟಿನಲ್ಲಿ ಐಸಿಡಿಎಸ್‌ಗೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಿ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ ಐಸಿಡಿಸಿ ಯೋಜನೆ ಬಲಪಡಿಸಿ ಸಾಕಷ್ಟು ಸಂಪನ್ಮೂಲಗಳೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಸಮಯದ ಅಂಗನವಾಡಿಗಳಾಗಿ ಜತೆ ಜತೆಗೆ ಪಾಲನಾ ಕೇಂದ್ರ (ಕ್ರೆಚ್) ಆಗಿ ಅಭಿವೃದ್ಧಿಪಡಿಸಿ, ಅಂಗನವಾಡಿಗಳಲ್ಲಿಯೇ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ / ಶಾಲಾಪೂರ್ವ ಶಿಕ್ಷಣ ಘಟಕಾಂಶಗಳನ್ನು ಬಲಪಡಿಸಬೇಕು. ಶಾಲಾಪೂರ್ವ ಶಿಕ್ಷಣವು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಭಾಗವಾಗಿರಲೇಬಾರದು. ಅಂಗನವಾಡಿ ಕೇಂದ್ರಗಳನ್ನು ನೋಡಲ್ ಏಜೆನ್ಸಿಗಳಾಗಿ ಜಾರಿಗೊಳಿಸುವುದರ ಜೊತೆಗೆ ಇಸಿಸಿಇ ಹಕ್ಕಾಗಬೇಕು. ಗ್ರೇಡ್ III ಮತ್ತು ಗ್ರೇಡ್ Iಗಿ ಸರ್ಕಾರಿ ನೌಕರರಂತೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಕಾಯಂ ಮಾಡಿ, ಕಾಯಂಮಾತಿ ವಿಷಯ, ೪೫ ನೇ Iಐಅ ಶಿಫಾರಸಿನ ಪ್ರಕಾರ ತಿಂಗಳಿಗೆ ಕನಿಷ್ಠ ವೇತನ ₹೨೬೦೦೦ ಮಾಸಿಕ ಪಿಂಚಣಿ ₹೧೦,೦೦೦ ಪಿಎಫ್, ಇಎಸ್‌ಐ ಇತ್ಯಾದಿ ಕೂಡಲೇ ತೀರ್ಮಾನಿಸಿ ಜಾರಿ ಮಾಡಿ, ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಈ ದೇಶವು 3ನೇ ಆರ್ಥಿಕತೆಯಾಗಲು ತೀವ್ರವಾಗಿ ಪ್ರಯತ್ನಿಸುತ್ತಿರುವಾಗ, ಸಮಾಜದಲ್ಲಿನ ಅಸಮಾನತೆಗಳನ್ನೂ ಸಹ ಕಡಿಮೆ ಮಾಡಬೇಕು. ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯ ಆಧಾರದ ಮೇಲೆ ಖಾತ್ರಿಪಡಿಸಬೇಕು. ಮಹಿಳೆಯರು ಮತ್ತು ಮಕ್ಕಳಲ್ಲಿ ಅತೀ ಹೆಚ್ಚು ಅಪೌಷ್ಟಿಕತೆಯ ಸವಾಲನ್ನು ನಮ್ಮ ದೇಶವು ಗಂಭೀರವಾಗಿ ಎದುರಿಸುತ್ತಿದೆ. ರಕ್ತಹೀನತೆಯ ಮಟ್ಟವು ಮಹಿಳೆಯರಲ್ಲಿ ೫೭.೦ ಪ್ರತಿಶತಕ್ಕೂ ಹೆಚ್ಚು. ಹದಿಹರೆಯದ ಅಂದರೆ ಕಿಶೋರಿಯರಲ್ಲಿ ಶೇ.೫೯.೧, ಗರ್ಭಿಣಿಯರಲ್ಲಿ ಶೇ. ೫೨.೨ ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಶೇ.೬೭.೧ ರಷ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ ಆರು ವರ್ಷದೊಳಗಿನ ಸುಮಾರು ೯ ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಪೌಷ್ಟಿಕತೆಯ ಈ ಗಂಭೀರ ಸಮಸ್ಯೆಯನ್ನು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಯಿಂದ ಕೈಗೆತ್ತಿಕೊಳ್ಳಲಾಗಿದ್ದರೂ ಇದನ್ನು ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ ೨.೦ ಎಂದು ಹೆಸರಿಸಿ, ಮಾರ್ಪಡಿಸಲಾಗಿದೆ. ಹೆಚ್ಚುವರಿಯಾಗಿ. ಈ ಐಸಿಡಿಎಸ್ ಯೋಜನೆಯು ಸಮಗ್ರ ಅಭಿವೃದ್ಧಿಯನ್ನು ಅಂದರೆ, ದೇಶದ ಸುಮಾರು ೮ ಕೋಟಿ ಮಕ್ಕಳ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಅಅಇ) ನೋಡಿಕೊಳ್ಳುತ್ತಿದೆ. ಇದು ನಮ್ಮ ಪ್ರಮುಖ ಮುಂಚೂಣಿ ಕಾರ್ಯಕ್ರಮವಾಗಿದೆ ಮತ್ತು ಈ ರೀತಿಯ ಯೋಜನೆಗಳ ಪೈಕಿ ವಿಶ್ವದಲ್ಲಿಯೇ ಅತಿ ದೊಡ್ಡದಾಗಿದೆ ಎಂದರು.ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ಕಳೆದ ಐದು ದಶಕಗಳಿಂದಲೂ ನಿಸ್ವಾರ್ಥವಾಗಿ ದುಡಿಯುತ್ತಿರುವ ಸುಮಾರು ೨೬ ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಇನ್ನೂ ಕಾರ್ಮಿಕರನ್ನಾಗಿ ಗುರುತಿಸಲು ನಿಮ್ಮ ಸರ್ಕಾರ ಸಿದ್ಧವಿಲ್ಲದಿರುವುದು ರಾಷ್ಟ್ರೀಯ ನಾಚಿಕೆಗೇಡಿನ ಸಂಗತಿಗಳಲ್ಲೊಂದು. ಈ ಯೋಜನೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.ಸುವರ್ಣಾ ಹಲಗಣಿ, ಜಯಶ್ರೀ ಪೂಜಾರಿ, ಶಬಾನಾ ಪರವೀನ, ಶೈಲಾ ಕಟ್ಟಿ, ರಾಜೇಶ್ವರಿ ಸಂಕದ, ಗೀತಾ ನಾಯಕ, ಪ್ರೇಮಾ ಚೌಧರಿ, ಗೀತಾ ಭಜಂತ್ರಿ, ಸೈರಾಬಾನು ಜಮಾದಾರ, ಶ್ರೀದೇವಿ ವಗ್ಗೆನ್ನವರ, ಸವಿತಾ, ಸಿದ್ದಮ್ಮ, ಯಮುನಾ, ಅಮೃತಾ, ಚೆನ್ನಮ್ಮಾ, ಸುರೇಖಾ, ಸೇರಿದಂತೆ ಮುಂತಾದವರು ಉಪಸ್ಥಿತದ್ದರು.