ಮರಿಯಮ್ಮನಹಳ್ಳಿ: ಪಟ್ಟಣದ 14ನೇ ವಾರ್ಡಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ತಕ್ಷಣವೇ ಕುಡಿಯುವ ನೀರು ಸರಬರಾಜು ಮಾಡುವಂತೆ ಸ್ಥಳೀಯ ನಿವಾಸಿಗಳು ಶನಿವಾರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ 4- 5 ತಿಂಗಳಿಂದ ವಾರ್ಡಿನ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಕುಡಿಯುವ ನೀರು ಸರಬರಾಜು ಮಾಡುವಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಅದಿಕಾರಿಗಳಿಗೆ ಮೌಖಿಕವಾಗಿ ಅನೇಕ ಬಾರಿ ಒತ್ತಾಯಿಸಿದರುಸ್ಪಂದಿಸದ ಹಿನ್ನೆಲೆಯಲ್ಲಿ ಶನಿವಾರ ಕಚೇರಿಗೆ ಧಾವಿಸಿ ಮನವಿ ನೀಡಲಾಗಿದೆ. ವಾರ್ಡಿನ ನಿವಾಸಿಗಳಿಗೆ ತಕ್ಷಣವೇ ಕುಡಿಯುವ ನೀರು ಸರಬರಾಜು ಆಗದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದರು.ಇಷ್ಟು ದಿನ ಬೇಸಿಗೆಯಲ್ಲಂತೂ ವಾರ್ಡಿನ ನಿವಾಸಿಗಳು ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಖರೀದಿಸಿಕೊಳ್ಳುತ್ತಿದ್ದರು. ಈಗ ಮಳೆಗಾಲದಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ ಎಂದರೆ ಹೇಗೆ? ಮಳೆಗಾಲದಲ್ಲೂ ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ತಿಂಗಳಿಗೆ ಒಂದು ಬಾರಿಯೂ ವಾರ್ಡಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ವಾರ್ಡಿನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಪಪಂ ಮುಖ್ಯಾಧಿಕಾರಿ ಎಂ. ಖಾಜಾ ಮನವಿ ಸ್ವೀಕರಿಸಿ, ಒಂದೆರೆಡು ದಿನಗಳಲ್ಲಿ 14ನೇ ವಾರ್ಡಿನ ನೀರಿನ ಸಮಸ್ಯೆ ಪರಿಹರಿಸುವೆ ಎಂದು ಭರವಸೆ ನೀಡಿದರು.
ಪಪಂ ಸದಸ್ಯ ಬಿ.ಎಂ.ಎಸ್. ರಾಜೀವ, ಸ್ಥಳೀಯ ಮುಖಂಡರಾದ ಎಂ. ಪರ್ವತರಾಜ್ ಶೆಟ್ಟಿ, ಎಂ. ಬದ್ರಿನಾಥ ಶೆಟ್ಟಿ, ಹೋಟೆಲ್ ದೇವೇಂದ್ರಪ್ಪ, ಬಿ.ಎಂ.ಎಸ್. ಸಂಜಯ್ಯ ಕುಮಾರ್, ನಜೀರ್ ಸಾಹೇಬ್, ಎಂ.ಶಾಮ್ ಸಾಹೇಬ್, ಚಿದ್ರಿ ಲಕ್ಷ್ಮೀನಾರಾಯಣ ಶೆಟ್ಟಿ, ಬಿ.ಎಂ.ಎಸ್. ಸಂಜಯ್ಯ ಕುಮಾರ್, ಎಂ. ಸಂತೋಷ್ ಜೈನ್, ಬಾಬು ಜೈನ್, ವಿಜಯಲಕ್ಷ್ಮೀ, ಸವಿತಾ, ಲತಾ, ರೇಣುಕಮ್ಮ, ಭಾಗ್ಯಮ್ಮ, ಮಾನಸ, ಶೈಲಶ್ರೀ, ಅನ್ನಪೂರ್ಣಮ್ಮ, ಹನುಮಂತಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.