ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ

KannadaprabhaNewsNetwork | Published : Mar 17, 2024 1:49 AM

ಸಾರಾಂಶ

ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೋರಿ ಬಂದಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸುಗ್ಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ಕೋರಿ ಬಂದಿರುವ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸುಗ್ಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೆರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಸುಗ್ಗನಹಳ್ಳಿ ಗ್ರಾಮದ ಸರ್ವೆ ನಂ.71 ಮತ್ತು 74ರಲ್ಲಿ ಕಲ್ಲು ಗಣಿಗಾರಿಕೆ ಅನುಮತಿ ಕೋರಿ ಜಯಶ್ರೀ ಮತ್ತು ಡಿ.ಸಿ.ಕುಮಾರ್ ಅರ್ಜಿ ಸಲ್ಲಿಸಿದ್ದರು. ಜಯಶ್ರೀ ಅವರು ಬಮೂಲ್ ನಿರ್ದೇಶಕ, ಕಾಂಗ್ರೆಸ್ ಮುಖಂಡ ಮಾಯಗಾನಹಳ್ಳಿ ಪಿ.ನಾಗರಾಜು ಅವರ ಪತ್ನಿಯಾಗಿದ್ದು ರಾಜಕೀಯ ಹಿತಾಶಕ್ತಿಯಿಂದ ಇವರ ಅರ್ಜಿಗೆ ರಾಜಸ್ವ ನಿರೀಕ್ಷ ಮತ್ತು ಗ್ರಾಮಲೆಕ್ಕಾಧಿಕಾರಿ ಗ್ರಾಮಸ್ಥರನ್ನು, ಗ್ರಾಪಂ ಅನ್ನು ಸಂಪರ್ಕಿಸದೆ ಮಾಹಿತಿ ಪಡೆಯದೆ, ಗಣಿಗಾರಿಕೆಗೆ ಅನುಮತಿಸಿದ್ದಾರೆ. ಸ್ಥಳದಲ್ಲಿ ಅರಣ್ಯ ಪ್ರದೇಶ, ವಾಸದ ಮನೆಗಳಿದ್ದರೂ ಅವೆಲ್ಲವನ್ನೂ ಮರೆಮಾಚಿ ಗಣಿಗಾರಿಕೆಗೆ ಪೂರಕವಾಗುವಂತೆ ವರದಿಯನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ ಎಂದು ದೂರಿದರು.

ಕಲ್ಲುಗಣಿಗಾರಿಕೆ ಅನುಮತಿಗೆ ಮಾನ್ಯತೆ ನೀಡಬಾರದು. ಸುಗ್ಗನಹಳ್ಳಿ ಹಸಿರು ಪ್ರದೇಶ ಫಲವತ್ತಾದ ಕೃಷಿ ಭೂಮಿ ಜೊತೆಗೆ ಅರಣ್ಯ ಪ್ರದೇಶ ಕಾಡು ಪ್ರಾಣಿಗಳು ವಾಸವಿರುವ ಸ್ಥಳ, ಸನಿಹದಲ್ಲೇ ಚೆಕ್ ಡ್ಯಾಂ ಇದ್ದು ಸುಮಾರು 12 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಇದೆ. ಇಲ್ಲಿ ಗಣಿಗಾರಿಕೆ ನಡೆದರೆ ಚೆಕ್‌ಡ್ಯಾಂಗೆ ಅಪಾಯ, ರೇಷ್ಮೆ, ಮಾವು, ಹೈನುಗಾರಿಕೆಗೆ ಹೊಡೆತ ಬೀಳುತ್ತದೆ. ಹಸಿರು ಮೇವು ಧೂಳುಮಯವಾಗಿ ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿ ಪಾಲಾಗುತ್ತದೆ. ನೂರಾರು ಎಕರೆ ಪ್ರದೇಶದಲ್ಲಿರುವ ತೆಂಗು, ಅಡಿಕೆ, ಸೇರಿದಂತೆ ತೋಟದ ಬೆಳೆಗಳನ್ನು ಕಳೆದುಕೊಂಡು ಇಡೀ ಸುತ್ತಮುತ್ತಲ ಗ್ರಾಮಗಳು ಕಲ್ಲಿನ ಧೂಳಿನಿಂದ ಆವೃತ್ತವಾಗಿ ಜನ ಜಾನುವಾರುಗಳು ರೋಗ ರುಜಿನ ಬಂದು ಆರೋಗ್ಯ ಸಮಸ್ಯೆಯಿಂದ ನಲುಗಬೇಕಾಗುತ್ತದೆ ಎಂದು ಆಕ್ಷೇಪಿಸಿದರು.

ಕೂಡಲೇ ಜಿಲ್ಲಾಡಳಿತ ತಾಲ್ಲೂಕು ಆಡಳಿತ ಗಣಿಗಾರಿಕೆಗೆ ಅನುಮತಿ ನೀಡಬಾರದು. ಹಾಗೇನಾದರೂ ರಾಜಕೀಯ ಪ್ರಭಾವ ಬಳಸಿ ಮಾನ್ಯತೆ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ತಹಸೀಲ್ದಾರ್‌ ತೇಜಸ್ವಿನಿ ಜಯಂತ್ ಹಾಗೂ ತಹಸೀಲ್ದಾರ್ ತೇಜಸ್ವಿನಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಸ್.ಜಿ.ಆರ್. ರವಿ, ಲೋಕೇಶ್, ಎಸ್.ಆರ್. ರಾಮಕೃಷ್ಣಯ್ಯ, ಜಯಕುಮಾರ್ , ಎಸ್.ಜಿ.ಆರ್. ರವಿ, ಲೋಕೇಶ್, ಆರ್. ಸುರೇಶ್, ಮುತ್ತು, ಚಿಕ್ಕಸ್ವಾಮಿ, ರೇಣುಕಪ್ಪ, ಮುತ್ತು ಭೈರಯ್ಯ, ಸುರೇಶ್, ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.16ಕೆಆರ್ ಎಂಎನ್ 13.ಜೆಪಿಜಿ

ರಾಮನಗರ ತಾಲೂಕು ಆಡಳಿತ ಸೌಧದ ಎದುರು ಸುಗ್ಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.

Share this article