ಕನ್ನಡಪ್ರಭ ವಾರ್ತೆ ಮಂಡ್ಯಆಶಾ ಕಾರ್ಯಕರ್ತೆಯರಿಗೆ ೧೫ ಸಾವಿರ ಸಂಬಳ ನೀಡಬೇಕು, ಕೇಂದ್ರದ ಪ್ರೋತ್ಸಾಹಧನ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು ಜಿಲ್ಲಾ ಪಂಚಾಯ್ತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಆಶಾ ಕಾರ್ಯಕರ್ತೆಯರ ಸೇವೆಗೆ ನಿಗದಿಯಾಗಿರುವ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ದೊರಕದೆ ಹಲವು ಚಟುವಟಿಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಂಪೂರ್ಣ ವೇತನ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಸಕಾಲದಲ್ಲಿ ಪ್ರೋತ್ಸಾಹ ಧನ ದೊರಕುವ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರ ನಿಶ್ಚಿತ ಗೌರವಧನ ಹಾಗೂ ಆಶಾ ನಿಧಿ ಪ್ರೋತ್ಸಾಹ ಧನ ಒಟ್ಟುಗೂಡಿಸಿ ಮಾಸಿಕ ೧೫,೦೦೦ ರು. ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಲ್ಲಿ ಪಾವತಿಯಾಗದಿರುವ ಎಎನ್‌ಸಿ, ಪಿಎನ್‌ಸಿ ಎಂಆರ್-೧, ಎಂಆರ್-೨ ಪ್ರೋತ್ಸಾಹ ಧನವನ್ನು ಲೆಕ್ಕಾಚಾರ ಮಾಡಿ ಪಾವತಿ ಮಾಡಬೇಕು. ಕೋವಿಡ್-೧೯ ಸಂದರ್ಭದಲ್ಲಿನ ವಿಶೇಷ ಪ್ರೋತ್ಸಾಹ ಧನ ಹಾಗೂ ಎಂಟಿಎಸ್ ಹಣ ಹಲವರಿಗೆ ನೀಡಲಾಗಿಲ್ಲ,ಈ ಕೂಡಲೇ ಹಣ ಪಾವತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗೌರವಧನ ಕಡಿತ ಮಾಡದೆ ನಿಗದಿತ ಗೌರವಧನ ಪಾವತಿಸಬೇಕು. ತಾಂತ್ರಿಕ ದೋಷದಿಂದ ವೇತನ ದೊರಕದ ಕಾರ್ಯಕರ್ತೆಯರಿಗೆ ವೇತನ ಪಾವತಿಗೆ ಕ್ರಮ ವಹಿಸಬೇಕು. ಗೌರವಧನ ಇಲ್ಲದೆ ಪರೀಕ್ಷೆ ಮತ್ತು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬಾರದು? ಗ್ರಾಮೀಣ ಪ್ರದೇಶದಲ್ಲಿ ದೂರದ ಪ್ರದೇಶಕ್ಕೆ ಕೆಲಸಕ್ಕೆ ನಿಯೋಜಿಸಬಾರದು. ೨,೫೦೦ ಜನಸಂಖ್ಯೆಗೆ ಒಬ್ಬ ಕಾರ್ಯಕರ್ತೆಯ ಕೆಲಸ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಬಿ.ಪುಷ್ಪಾವತಿ, ಕಾರ್ಯದರ್ಶಿ ಜ್ಯೋತಿ, ಸಂಧ್ಯಾ, ರಾಜಮಣಿ, ಯೋಶೋಧರಾ, ದ್ರಾಕ್ಷಾಯಿಣಿ, ಶೋಭ, ಪಲ್ಲವಿ ಭಾಗವಹಿಸಿದ್ದರು.