ಹೊನ್ನಾವರ: ವಸತಿ, ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡವರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟಿಗೆ ಈ ತಿಂಗಳ ಅವಧಿಯಲ್ಲಾದರೂ ರಾಜ್ಯ, ಕೇಂದ್ರ ಸರ್ಕಾರಗಳು ಅಗತ್ಯ ಅಫೀಡವಿಟ್ ಸಲ್ಲಿಸಲು ಮದ್ಯಪ್ರವೇಶ ಮಾಡಬೇಕೆಂದು ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ದಿಶೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯ ಲಕ್ಷಾಂತರ ಬಡ ಅರಣ್ಯ ಭೂಮಿ ಸಾಗುವಳಿದಾರರ ಬದುಕು ಬೀದಿಗೇ ಬರುವ ಅಪಾಯ ಇದೆ ಎಂದು ಅವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಈ ದಿಶೆಯಲ್ಲಿ ಜಿಲ್ಲೆಯ ಜನಪ್ರತಿನಿಗಳು ಮತ್ತು ಸಂಸದರಿಗೆ ಪತ್ರ ಬರೆದು ಗಮನ ಸೆಳೆದಿರುವುದಾಗಿ ತಿಳಿಸಿದ ಅವರು, ತಿರಸ್ಕರಿಸಲ್ಪಟ್ಟ ಅರಣ್ಯ ಹಕ್ಕು ಕ್ಲೇಮುಗಳ ಅರ್ಜಿದಾರರನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ವಿವಿಧ ಪರಿಸರ ಸಂಘಟನೆಯವರು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದಾರೆ.ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯ ಭೂಮಿಸಾಗುವಳಿದಾರರ ಪರ ನಿಲ್ಲುವ ಅಗತ್ಯವಿದೆ. ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದು ಅವರಲ್ಲಿ ಸುಮಾರು ₹75,000ಕ್ಕೂ ಹೆಚ್ಚು ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ.
1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ 1978ರ ಪೂರ್ವದ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮೋದನೆ ನೀಡಿತಾದರೂ ಅಂದು ನಡೆದ ಸಕ್ರಮ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಹೆಚ್ಚು ಪಾರದರ್ಶಕವಾಗಿ ಜರುಗದೇ ಅಂದು ಹಲವು ಸಾವಿರ ಅರ್ಹ ಪ್ರಕರಣಗಳು ಸಕ್ರಮ ಯಾದಿಯಿಂದ ಬಿಟ್ಟುಹೋಗಿರುವ ಬಗ್ಗೆ ರಾಜ್ಯ ಸರ್ಕಾರದ ನಡವಳಿಯಲ್ಲಿಯೇ ಉಲ್ಲೇಖಗಳಿವೆ.ಅಂದು ರಾಜ್ಯ ಸರ್ಕಾರದ ಬಿಟ್ಟುಹೋಗಿರುವ ಅರ್ಹ ಪ್ರಕರಣಗಳನ್ನು ಪುನರ್ ಪರಿಶೀಲಿಸಿ, ಮಂಜೂರಿಗೆ ಶಿಫಾರಸು ಮಾಡಲು ಆದೇಶಿಸಿತ್ತು. ಆದರೆ ಸರ್ಕಾರದ ಅಂದಿನ ಆದೇಶ ಈ ವರೆಗೂ ಅನುಷ್ಠಾನಕ್ಕೆ ಬಾರದೇ ಇರುವುದು ದುರದೃಷ್ಟಕರ. ಇಂತಹ ಸ್ಥಿತಿಯು ವಿವಿದ ರಾಜ್ಯಗಳಲ್ಲೂ ನಿರ್ಮಾಣವಾದುದರಿಂದ ಕೇಂದ್ರ ಸರ್ಕಾರ ದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ಆಳುವವರ ಇಚ್ಛಾಶಕ್ತಿಯ ಕೊರತೆ ಮತ್ತು ಕಾಯ್ದೆಯಲ್ಲಿನ ಇತರ ಪಾರಂಪರಿಕ ಅರಣ್ಯವಾಸಿಯ ವ್ಯಾಖ್ಯೆಯ ಬಗೆಗೆ ಅಧಿಕಾರಿಗಳಲ್ಲಿ ಇರುವ ದ್ವಂದ್ವ ಮತ್ತು ಗೊಂದಲದಿಂದಾಗಿ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳು ಸಾರಾ ಸಗಟು ತಿರಸ್ಕ್ರತಗೊಂಡಿವೆ. ಇನ್ನು ಅರಣ್ಯ ವಾಸಿ,ಮತ್ತು ಅರಣ್ಯ ಭೂಮಿ ವ್ಯಾಖ್ಯೆಗೆ ವಿಸ್ತೃತ ವ್ಯಾಪ್ತಿ-ಅರ್ಥಗಳಿವೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯು ಕಾಡು ಮತ್ತು-ನಾಡು ಎರಡನ್ನೂ, ಎರಡರಲ್ಲೂ ಒಳಗೊಂಡಿದೆ.
ಹಲವು ದಶಕಗಳಿಂದ ಜನರು ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿದ್ದಾರೆ. ಇಂತಹ ಎತ್ತರದ ಸುರಕ್ಷಿತ ಪ್ರದೇಶಗಳಲ್ಲಿ ಜಿಲ್ಲೆಯಾದ್ಯಂತ ನದಿಪಾತ್ರದ ಜನರಿಗೆ ಅರಣ್ಯ ಭೂಮಿಯಲ್ಲಿ ಸರ್ಕಾರವೇ ಪುನರ್ವಸತಿ ಕಲ್ಪಿಸಿದೆ.ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಈ ಜ್ವಲಂತ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಾದರೂ ಆದಷ್ಟು ಶೀಘ್ರ ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದ್ಯಪ್ರವೇಶ ಮಾಡಬೇಕೆಂದು ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.