ಕನ್ನಡಪ್ರಭ ವಾರ್ತೆ ಮೈಸೂರು
ಬರಗಾಲದಿಂದ ಸಂಕಷ್ಟ ಪಡುತ್ತಿರುವ ರೈತರ ನೆರವಿಗೆ ಧಾವಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ರೈತರ ನಿಯೋಗದೊಂದಿಗೆ ಬರಗಾಲದ ಸಂಕಷ್ಟದ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿ, ಶುಕ್ರವಾರ ಬರಗಾಲಕ್ಕೆ ಸಂಬಂಧಪಟ್ಟಂತೆ ಎಲ್ಲಾ ಇಲಾಖೆ ಅಧಿಕಾರಿಗಳ ಮುಖ್ಯಸ್ಥರ ಸಭೆ ನಡೆಸಿ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿ, ಹಳ್ಳಿಗಳಲ್ಲಿ ವೀಕ್ಷಣೆ ಮಾಡಿ, ಸ್ಥಳದಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆ ಇರುವ ಕಡೆ ಗೋಶಾಲೆ ಆರಂಭಿಸಿ, ಮೇವು ಬ್ಯಾಂಕ್, ಕುಡಿಯಲು ನೀರು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ರೈತರ ಒತ್ತಾಯ:ಮೈಸೂರು ಜಿಲ್ಲೆ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಪಡುತ್ತಿದ್ದಾರೆ. ಕಬಿನಿ, ಕಾವೇರಿ ನೀರನ್ನು ಅಚ್ಚುಕಟ್ಟು ರೈತರಿಗೆ ಬೆಳೆ ಬೆಳೆಯಲು ನೀಡದೆ ತಮಿಳುನಾಡಿಗೆ ಹರಿಸಿದ ಕಾರಣ ಸುಮಾರು 2 ವರ್ಷಗಳಿಂದ ಸಣ್ಣ ಸಣ್ಣ ರೈತರು ಯಾವುದೇ ಬೆಳೆ ಬೆಳೆಯದೆ ತೀವ್ರ ಸಂಕಷ್ಟ ಪಡುತ್ತಿದ್ದಾರೆ. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರ ಕೇವಲ 2000 ಪರಿಹಾರ ನೀಡಿದೆ. ಇದರಿಂದ ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ. ಜಿಲ್ಲೆಯ ಬಹುತೇಕ ಕಡೆ ಕೊಳವೆಬಾವಿಗಳಲ್ಲಿ ನೀರು ಹಿಂಗಿ ಹೋಗಿದೆ. 6- 7 ತಿಂಗಳು ಬೆಳೆದಿರುವ ಕಬ್ಬು, ತೆಂಗು, ಬಾಳೆ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದೆ. ಇದರಿಂದ ರೈತರು ಮತ್ತಷ್ಟು ಕಂಗಲಾಗಿದ್ದಾರೆ. ಇಂತಹ ರೈತರಿಗೆ ಕೂಡಲೇ ಬರ ನಷ್ಟ ಪರಿಹಾರ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ದನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕಬಿನಿ, ಕಾವೇರಿ ಅಚ್ಚು ಕಟ್ಟು ಭಾಗದ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರು ಹರಿಸಬೇಕು. ವಿದ್ಯುತ್ ಸಮಸ್ಯೆಯಿಂದ ಕುಡಿಯು ನೀರಿಗೂ ತೊಂದರೆಯಾಗುತ್ತಿದೆ. ಕೃಷಿ ಪಂಪ್ ಸೆಟ್ ಗಳಿಗೆ 3- 4 ಗಂಟೆಗಳ ವಿದ್ಯುತ್ ಸಹ ಸಿಗುತ್ತಿಲ್ಲ. ಬರಗಾಲದ ಸಂಕಷ್ಟದಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಕೆಲವು ಬ್ಯಾಂಕುಗಳು ಸಾಲ ವಸುಲಾತಿಗಾಗಿ ನೋಟಿಸ್ ನೀಡಿ ರೈತರಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಜಾನುವಾರುಗಳಿಗೆ ಮೇವಿನ ಕೊರತೆಯಾಗಿ ಕಬ್ಬಿನ ಬೆಳೆಯನ್ನೇ ಕಡಿದು ಮೇವಿಗಾಗಿ ಉಪಯೋಗಿಸುತ್ತಿದ್ದಾರೆ. ಕೆರೆ ಕಟ್ಟೆಗಳು ಒಣಗಿ ಹೋಗಿವೆ. ಯಾವುದೇ ಸಮಸ್ಯೆಗೂ ಸರ್ಕಾರಿ ಕಚೇರಿಗಳಿಗೆ ಹೋದರೆ ಚುನಾವಣೆ ಕೆಲಸದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ನಾವು ಗೆಲ್ಲಿಸಿದ ಶಾಸಕರು, ಸಚಿವರು ಚುನಾವಣೆ ಕಾರ್ಯದಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರ ರಕ್ಷಣೆಗೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.
ಚುನಾವಣಾ ಕಾರ್ಯಕ್ಕೆ ನೇಮಿಸಿರುವ ಅಧಿಕಾರಿಗಳ ತಂಡದ ರೀತಿಯಲ್ಲಿ ಬರಗಾಲದ ಸಮಸ್ಯೆಗಳಿಗೆ ತುರ್ತು ಪರಿಹಾರದ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಿ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಅವರು ಒತ್ತಾಯಿಸಿದರು.ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಾದೇವಸ್ವಾಮಿ, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಮಾರ್ಬಳ್ಳಿ ಬಸವರಾಜ್, ರಾಮಚಂದ್ರ, ಸೋಮಣ್ಣ ಮೊದಲಾದವರು ಇದ್ದರು.