ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿದ 18 ಎಕರೆ ಜಮೀನು ಉಳಿಸಲು ಆಗ್ರಹ

KannadaprabhaNewsNetwork | Published : Jul 2, 2025 12:20 AM
1ಕೆಎಂಎನ್ ಡಿ19,20 | Kannada Prabha

ಸಾರಾಂಶ

ಮೈಸೂರು ಮಹಾರಾಜರು ಆಡಳಿತ, ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಜಮೀನುಗಳನ್ನು ಅಂದೇ ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದರು. ಖಾಲಿ ಜಾಗದಲ್ಲಿ ತಮಿಳರು ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡ ತೊಡಗಿದರು. ಅಂದು ಆಸ್ಪತ್ರೆಗೆ ಹೆಚ್ಚಿನ ಜಾಗದ ಅಗತ್ಯವಿರಲಿಲ್ಲ. ಆದರೆ, ಇಂದು ಜನಸಂಖ್ಯೆ ಹೆಚ್ಚಾದಂತೆ ಜಾಗದ ಅವಶ್ಯಕತೆಯೂ ಹೆಚ್ಚಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ಕಾಲೇಜಿನ 18 ಎಕರೆ ಜಮೀನು ಉಳಿಸುವಂತೆ ಆಗ್ರಹಿಸಿ, ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್‍ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೇರಿದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರ ಸಮಿತಿ, ಕರುನಾಡ ಸೇವಕರು ಸಂಘಟನೆ ಕಾರ್ಯಕರ್ತರ ಬೈಕ್ ರ್‍ಯಾಲಿ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಿಮ್ಸ್ ಆಸ್ಪತ್ರಗೆ ರಾಮನಗರ, ಚನ್ನಪಟ್ಟಣ, ಕುಣಿಗಲ್, ಟಿ.ನರಸೀಪುರ ಸೇರಿದಂತೆ ವಿವಿಧಡೆ ನಗರ ಮತ್ತು ಪಟ್ಟಣ ಪ್ರದೇಶಗಳ 30 ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಮುಖ ಆಸ್ಪತ್ರೆಯಾಗಿದೆ ಎಂದರು.

ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 400 ಹಾಸಿಗೆಗಳ ಆಸ್ಪತ್ರೆಯನ್ನು 1 ಸಾವಿರ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಜಾಗದ ಕೊರತೆ ಎದ್ದು ಕಾಣುತ್ತಿದೆ ಎಂದರು.

ಮೈಸೂರು ಮಹಾರಾಜರು ಆಡಳಿತ, ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಜಮೀನುಗಳನ್ನು ಅಂದೇ ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದರು. ಖಾಲಿ ಜಾಗದಲ್ಲಿ ತಮಿಳರು ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡ ತೊಡಗಿದರು. ಅಂದು ಆಸ್ಪತ್ರೆಗೆ ಹೆಚ್ಚಿನ ಜಾಗದ ಅಗತ್ಯವಿರಲಿಲ್ಲ. ಆದರೆ, ಇಂದು ಜನಸಂಖ್ಯೆ ಹೆಚ್ಚಾದಂತೆ ಜಾಗದ ಅವಶ್ಯಕತೆಯೂ ಹೆಚ್ಚಿದೆ. ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಆಸ್ಪತ್ರೆ ಜಾಗದಲ್ಲಿ ಉನ್ನತ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ತಮಿಳು ನಿವಾಸಿಗಳಿಗೆ ಕಟ್ಟಿರುವ ಮನೆಗಳಿಗೆ ಸ್ಥಳಾಂತರವಾಗುವುದು ಅತ್ಯವಶ್ಯಕ ಎಂದು ಒತ್ತಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಆಸ್ಪತ್ರೆಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ತಮಿಳು ನಿವಾಸಿಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಮೂರ್‍ನಾಲ್ಕು ಬಾರಿ ಪ್ರಯತ್ನ ಮಾಡಿದ್ದರೂ ಅಲ್ಲಿನ ಕೆಲವೇ ಕೆಲವು ಮಂದಿ ಇದಕ್ಕೆ ಅವಕಾಶ ಕೊಡದಿರುವುದು ವಿಷಾದನೀಯ. ಇನ್ನಾದರೂ ಆಸ್ಪತ್ರೆ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ಅವರಿಗಾಗಿ ನಿರ್ಮಿಸಿರುವ ಚಿಕ್ಕ ಮಂಡ್ಯಕ್ಕೆ ಹೊಂದಿಕೊಂಡಿರುವ ಕೆರೆಯಂಗಳದ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.

ನ್ಯಾಯಾಲಯ ಮಿಮ್ಸ್ ಪರವಾಗಿ ತೀರ್ಪು ನೀಡಿದ್ದರೂ ಅಲ್ಲಿನ ನಿರ್ದೇಶಕರು, ಆಡಳಿತಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇಂತಹ ಗೊಂದಲ ನಿರ್ಮಾಣಕ್ಕೆ ಕಾರಣವಾಗಿದೆ. ಅಲ್ಲದೇ, ಆಸ್ಪತ್ರೆ ಅಭಿವೃದ್ಧಿಗೂ ಕಂಠಕಪ್ರಾಯರಾಗಿದ್ದಾರೆ ಎಂದು ಕಿಡಿಕಾರಿದರು.

ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಆಸ್ಪತ್ರೆ ಆವರಣದಲ್ಲಿ ಟ್ರಾಮಾಕೇರ್, ಹೃದ್ರೋಗ ಚಿಕಿತ್ಸಾ ಘಟಕ ಸೇರಿದಂತೆ ಉನ್ನತ ಚಿಕಿತ್ಸಾ ಕೇಂದ್ರಗಳು ಬರಬೇಕಿದೆ. ಇವೆಲ್ಲವನ್ನೂ ಮಾಡಬೇಕಾದರೆ ಹೆಚ್ಚಿನ ಜಾಗದ ಅಗತ್ಯತೆ ಇದೆ. ಆಸ್ಪತ್ರೆಗೆ ಸೇರಿದ 18 ಎಕರೆ ಜಮೀನು ಮಿಮ್ಸ್ ಆಸ್ಪತ್ರೆ ವಶಕ್ಕೆ ನೀಡುವಂತೆ ನ್ಯಾಯಾಲಯವೂ ಆದೇಶ ನೀಡಿದೆ. ಆದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮಿಳು ನಿವಾಸಿಗಳನ್ನು ದಿಕ್ಕು ತಪ್ಪಿಸಿ ಸ್ಥಳಾಂತರವಾಗುವುದನ್ನು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹಲವು ಕೊರತೆಗಳ ನಡುವೆ ಮಂಡ್ಯ ವೈದ್ಯಕೀಯ ಕಾಲೇಜು ಕೆಲಸ ನಿರ್ವಹಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದ ಸಮೀಪದಲ್ಲಿ ನಿರ್ಮಾಣವಾಗಬೇಕಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಾಗದ ಕೊರತೆಯಿಂದಾಗಿ ನಗರದಿಂದ ಸುಮಾರು 12 ಕಿ.ಮೀ. ದೂರದ ಬಿ. ಹೊಸೂರು ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಅಲ್ಲಿ ರೋಗಿಗಳಿಲ್ಲದೆ ಬಿಕೋ ಎನ್ನುತ್ತಿದೆ ಎಂದು ದೂರಿದರು.

ಬೈಕ್ ರ್‍ಯಾಲಿ ಮೂಲಕ ನಗರದ ಮೈಸೂರು-ಬೆಂಗಳೂರು ಹೆದ್ದಾರಿ, ಗುತ್ತಲು ರಸ್ತೆ, ಆಸ್ಪತ್ರೆ ರಸ್ತೆ, ವಿವಿ. ರಸ್ತೆ, ಆರ್.ಪಿ. ರಸ್ತೆ, ನೂರಡಿ ರಸ್ತೆ, ವಿನೋಭ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ, ರಾಜ್ಯ ಉಪಾಧ್ಯಕ್ಷ ಲೋಕೇಶ್, ಮುಖಂಡರಾದ ಮುದ್ದೇಗೌಡ, ಬೋರ್‌ವೆಲ್ ನಾರಾಯಣ್, ಆಟೋ ವೆಂಕಟೇಶ್, ಮಂಜುಳಾ, ಶೋಭಾ, ಕೆ.ಆರ್.ಎಸ್. ಸಂಘಟನೆಯ ರಮೇಶ್, ಶಿವಳ್ಳಿ ಚಂದ್ರಶೇಖರ್, ಇಂಡುವಾಳು ಸಿದ್ದೇಗೌಡ, ರೈತ ಸಂಘದ ಅಣ್ಣಯ್ಯ, ಕರುನಾಡ ವಿಜಯಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭವಾನಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

PREV