ಕನ್ನಡಪ್ರಭ ವಾರ್ತೆ ಹಾವೇರಿ
ಸಮೀಪದ ಗಾಂಧಿಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳ ಬಸ್ ಪಾಸ್‌ಗಳನ್ನು ಹಾವೇರಿ ನಗರದವರೆಗೂ ವಿಸ್ತರಿಸುವಂತೆ ಒತ್ತಾಯಿಸಿ ಹಾಗೂ ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ವಿದ್ಯಾರ್ಥಿಗಳು ನಾಲ್ಕು ಗಂಟೆ ಕಾಲ ರಸ್ತೆತಡೆ ಮಾಡಿ ಗಾಂಧಿಪುರ ಕಾಲೇಜ್ ಎದುರು ಪ್ರತಿಭಟನೆ ನಡೆಸಿದರು.ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಜಿಲ್ಲಾ ಕೇಂದ್ರದಿಂದ ದೂರವಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಅಭ್ಯಾಸಕ್ಕಾಗಿ ಗ್ರಾಮೀಣ ಭಾಗದ ೨೮೯೦ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ೨೦೨೧-೨೨ನೇ ಸಾಲಿನವರೆಗೂ ವಿದ್ಯಾರ್ಥಿಗಳ ತಮ್ಮ ಹಳ್ಳಿಯಿಂದ ಹಾವೇರಿ ವರೆಗೆ ಮಾರ್ಗ ಬದಲಾವಣೆ ಕಾಲೇಜಿನ ಹೆಸರು ಹಾಕಿ ಬಸ್ ಪಾಸ್ ವಿತರಣೆ ಮಾಡುವ ಪದ್ದತಿ ಇತ್ತು. ಆದರೆ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಸಾರಿಗೆ ಇಲಾಖೆ ವಿದ್ಯಾರ್ಥಿ ವಿರೋಧಿ ನಿಯಮ ಜಾರಿ ಮಾಡಿ ಕೇವಲ ವಿದ್ಯಾರ್ಥಿಯ ಹಳ್ಳಿಯಿಂದ ಕಾಲೇಜಿನವರೆಗೆ ಮಾತ್ರ ಬಸ್ ಪಾಸ್ ವಿತರಣೆ ಮಾಡಿದ್ದು ನಗರಕ್ಕೆ ಹೋಗಲು ಟಿಕೆಟ್ ತೆಗೆದುಕೊಂಡೆ ಹೋಗಬೇಕು ಎಂದು ಹೇಳುತ್ತಾರೆ. ಬಸ್ ಪಾಸ್ ಪಡೆಯಲು ಕೂಡ ನಗರದಲ್ಲಿರುವ ಕಂಪ್ಯೂಟರ್ ಸೆಂಟರ್‌ಗೆ ಹೋಗಲೇಬೇಕು. ಇನ್ನೂ ಹಾಸ್ಟೆಲ್, ಸ್ಕಾಲರ್‌ಶಿಪ್, ಪುಸ್ತಕ ಖರೀದಿ, ಟ್ಯೂಶನ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್ ಸೇರಿದಂತೆ ಇತರ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಇರುತ್ತದೆ. ಆದರಿಂದ ಈ ನೀತಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದನ್ನು ಹಿಂಪಡೆದು ಹಾವೇರಿ ನಗರದವರೆಗೂ ಬಸ್‌ಪಾಸ್ ವಿತರಣೆ ಮಾಡಬೇಕು ಒಂದು ವೇಳೆ ಈ ಬೇಡಿಕೆ ಈಡೇರಿಸದಿದ್ದರೆ ಕೆಎಸ್‌ಆರ್‌ಟಿಸಿ ಡಿಪೋಗೆ ಮುತ್ತಿಗೆ ಹಾಕಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡ ವಿವೇಕ್ ಫನಾಸೆ ಮಾತನಾಡಿ, ನಮ್ಮ ಹಳ್ಳಿಯಿಂದ ಗಾಂಧಿಪುರದವರಿಗೆ ಮಾತ್ರ ಬಸ್ ಪಾಸ್ ಕೊಟ್ಟಿದ್ದಾರೆ. ಯಾವುದೇ ಒಂದು ಸಣ್ಣ ವಸ್ತು ತೆಗೆದುಕೊಳ್ಳಬೇಕಾದರು, ಅರ್ಜಿಗಳನ್ನು ಸಲ್ಲಿಸಬೇಕೆಂದರೆ, ಯಾವುದೇ ಮೇಲಧಿಕಾರಿಗಳನ್ನು ಭೇಟಿ ಮಾಡಬೇಕೆಂದರು ಹಾವೇರಿಗೆ ಹೋಗಲು ಬಸ್ ಚಾರ್ಜ್ ಕೊಡಬೇಕು. ಹಾಗಾಗಿ ನಮ್ಮ ಬಸ್‌ಪಾಸ್ ಅನ್ನು ಹಾವೇರಿವರೆಗೆ ವಿಸ್ತರಣೆ ಮಾಡಲೇಬೇಕು. ಹಳ್ಳಿಗಳಿಗೆ ಹೋಗಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲ. ಆದ್ದರಿಂದ ಸರಿಯಾಗಿ ತರಗತಿಗೆ ಹೋಗಲು ಆಗುತ್ತಿಲ್ಲ, ಎಷ್ಟೋ ಬಸ್ಸುಗಳು ಗಾಂಧಿಪುರದಲ್ಲಿ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸದೆ ಹೋಗುತ್ತವೆ. ಈ ವ್ಯವಸ್ಥೆಯಿಂದ ಹೆಣ್ಣು ಮಕ್ಕಳಿಗೂ ಸಹ ತುಂಬಾ ತೊಂದರೆಯಾಗುತ್ತಿದೆ. ಈಗಿರುವ ಬಸ್‌ಪಾಸ್ ಅನ್ನು ನಗರದವರೆಗೂ ವಿಸ್ತರಿಸಬೇಕು. ಇಲ್ಲವಾದಲ್ಲಿ ಇಲ್ಲಿರುವ ಕಾಲೇಜನ್ನು ಹಾವೇರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಕಾಲೇಜ್ ಘಟಕದ ಅಧ್ಯಕ್ಷೆ ಪ್ರೇಮಾ ಅಳ್ಳಳ್ಳಿ ಮಾತನಾಡಿದರು.ಮನವಿ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಕೆಂಪಣ್ಣ ಹಂಬಣಿಗೆ ಮಾತನಾಡಿ, ವಿದ್ಯಾರ್ಥಿಗಳ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅವಕಾಶ ಸಿಕ್ಕರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾಗುವುದು ಹಾಗೂ ಅನೇಕ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಪೋಲಿಸ್ ಠಾಣೆ ಎಸ್‌ಐ ರವಿಕುಮಾರ್, ಕಾಲೇಜ್ ಘಟಕದ ಅಧ್ಯಕ್ಷ ಅಭಿಷೇಕ್ ಹಿರೇಮಠ, ಸಹಕಾರ್ಯದರ್ಶಿ ದಿಳ್ಳೆಪ್ಪ ಗಾಳೆಮ್ಮನವರ, ಹಾಸ್ಟೆಲ್ ಘಟಕದ ಅಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಕೃಷ್ಣ, ಹನುಮಂತ ಎಚ್., ಕುಶಾಲ್ ಲಮಾಣಿ, ರೇಣುಕಾ, ಐಶ್ವರ್ಯ, ಶ್ವೇತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.