ಗದಗ: ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 75ನೇ ಜಯಂತಿಯನ್ನು ಭಾವೈಕ್ಯತಾ ದಿನ ಎಂದು ಆಚರಿಸುತ್ತಿರುವುದು ಶಿರಹಟ್ಟಿ ಫಕೀರಸ್ವಾಮಿ ಮಠದ ಪರಂಪರೆಯನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ, ತೋಂಟದಾರ್ಯ ಮಠವು ಫೆ. 21ರಂದು ಲಿಂ. ಡಾ. ತೋಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಅನ್ವಯಿಸಿ ಅವರ 75ನೇ ಜಯಂತಿ ದಿನವನ್ನು ಭಾವೈಕ್ಯತೆಯ ದಿನವನ್ನು ಆಚರಿಸುವುದಾಗಿ, ಜೊತೆಗೆ ಭಾವೈಕ್ಯತೆಯ ಹರಿಹಾರ ಎಂಬುದಾಗಿ ತಿಳಿಸಿದೆ. ಇದನ್ನು ತಕ್ಷಣವೇ ಕೈ ಬಿಡಬೇಕು ಎಂದರು.ಸುಮಾರು 500 ವರ್ಷಗಳ ಭಾವೈಕ್ಯತಾ ಪರಂಪರೆ ಇತಿಹಾಸವನ್ನು ಹೊಂದಿರುವ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷ ಪದವನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಬಳಸುತ್ತಿರುವುದು ಖಂಡನಾರ್ಹ. ಅವರ ಜಯಂತಿ ಆಚರಿಸಿದರೆ ನಮ್ಮದೇನು ಅಭ್ಯಂತರವಿಲ್ಲ. ಭಾವೈಕ್ಯತೆಯ ದಿನ ಎಂದು ಪ್ರಕಟಿಸಿರುವುದು ಶಿರಹಟ್ಟಿ ಮಠದ ಭಕ್ತ ವೃಂದಕ್ಕೆ ಅಪಾರ ನೋವನ್ನುಂಟು ಮಾಡಿದೆ ಎಂದರು.ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೇ ತಮ್ಮ ಜೀವಿತಾವಧಿಯ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠವೇ ನಿಜವಾದ ಭಾವೈಕ್ಯತೆಯ ಮಠ ಎಂದು ಸಾವಿರಾರು ಬಾರಿ ಹೇಳಿದ್ದರು. ಆದರೆ ಅವರು ತೀರಿ ಹೋದ ನಂತರ ಈಗಿರುವ ಸ್ವಾಮೀಜಿಗಳು ಹಾಗೂ ಆಡಳಿತಾಧಿಕಾರಿಗಳು ಸೇರಿ ಭಾವೈಕ್ಯತೆ ಎನ್ನುವುದನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪ್ರಾತಿನಿಧ್ಯ ಹೊಂದಿರುವ ಹಾಗೂ ವಿರಕ್ತಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವೀರಶೈವ ಲಿಂಗಾಯತ ಧರ್ಮವನ್ನು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಹೋರಾಟದ ಮುಂದಾಳತ್ವ ವಹಿಸಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಡೆಯನ್ನು 560ಕ್ಕೂ ಹೆಚ್ಚು ಮಠಾಧೀಶರು ಖಂಡಿಸಿದ್ದರು ಎಂದರು.