ಪ್ರಜಾಪ್ರಭುತ್ವವೇ ದೇಶದ ಸೌಂದರ್ಯ: ಯು.ಟಿ.ಖಾದರ್

KannadaprabhaNewsNetwork |  
Published : Jan 27, 2024, 01:17 AM IST
ಆಳ್ವಾಸ್‌ | Kannada Prabha

ಸಾರಾಂಶ

ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಆವರಣದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕರಿಂದ ಧ್ವಜಕ್ಕೆ ವಂದನೆ, ತ್ರಿವರ್ಣದಲ್ಲಿ ಬರೆದ ಆಳ್ವಾಸ್, ರಾಷ್ಟ್ರಗೀತೆ ‘ಜನ ಗಣ ಮನ’ ‘ಕೋಟಿ ಕಂಠೋಂಸೇ ನಿಖ್‌ಲೇ...’ ಗಾನಕ್ಕೆ ಸೇರಿದ್ದ ೩೦ ಸಾವಿರಕ್ಕೂ ಅಧಿಕ ಮಂದಿ ಪುಟಾಣಿ ಧ್ವಜಗಳು ಕಾರ್ಯಕ್ರಮದ ವಿಶೇಷತೆಗಳಾಗಿದ್ದವು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಅವರು ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಆವರಣದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂತು. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ದೇಶದ ಏಕತೆಯನ್ನು ಸಂವಿಧಾನ ಉಳಿಸಿದೆ. ಪ್ರತಿ ಭಾರತೀಯನೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಅಂತಹ ದೇಶಭಕ್ತಿಯ ಕೆಲಸವನ್ನು ಮಾಡುತ್ತಿರುವ ಡಾ.ಎಂ. ಮೋಹನ ಆಳ್ವರ ಆಳ್ವಾಸ್ ಅದು ಮಿನಿಭಾರತ ಎಂದವರು ಬಣ್ಣಿಸಿದರು.

ಪ್ರಜಾಪ್ರಭುತ್ವವೇ ದೇಶದ ಸೌಂದರ್ಯ. ನಾವೆಲ್ಲ ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇಶವು ಒಂದನೇ ಸ್ಥಾನಕ್ಕೆ ಏರಲು ಸಾಧ್ಯ. ಅದಕ್ಕಾಗಿ ಸಂವಿಧಾನದ ಆಶಯವನ್ನು ಬದುಕಿನಲ್ಲಿ ಪಾಲಿಸಿ. ಒಂದೇ ಮಕ್ಕಳಂತೆ ಬಾಳಿ ಎಂದರು.

ಮಾತು ದೇಶಕ್ಕೆ ಮಾರಕವಾಗದಿರಲಿ. ಸಂವಿಧಾನ ಆಶಯ ಅರಿತು ಬಾಳಿ. ಮಾನವೀಯತೆ ಮತ್ತು ಕರುಣೆ ಅವಶ್ಯ ಎಂದ ಅವರು, ಸ್ವಾಮಿ ವಿವೇಕಾನಂದರು ಹೇಳಿದಂತೆ ನಮ್ಮನ್ನು ಉಡುಗೆ-ತೊಡುಗೆಯ ಬದಲಾಗಿ ಸಂಸ್ಕೃತಿಯು ‘ಜಂಟಲ್ ಮ್ಯಾನ್’ ಮಾಡಬೇಕು. ನಾವೆಲ್ಲ ಲಾಭಕ್ಕಿಂತ ಮೌಲ್ಯಕ್ಕೆ ಒತ್ತು ನೀಡಿ ಬದುಕಬೇಕು ಎಂದರು.ಮಾಜಿ ಸೈನಿಕರಿಂದ ಧ್ವಜಕ್ಕೆ ವಂದನೆ, ತ್ರಿವರ್ಣದಲ್ಲಿ ಬರೆದ ಆಳ್ವಾಸ್. ಕಣ್ಣು ಹಾಯಿಸಿದಷ್ಟೂ ಕೇಸರಿ, ಬಿಳಿ, ಹಸಿರು ವರ್ಣ, ಸಾಗರದ ಅಲೆಗಳಂತೆ ಹಾರಾಡಿದ ತ್ರಿವರ್ಣ ಧ್ವಜ, ಬಾನೆತ್ತರಕ್ಕೆ ಚಿಮ್ಮಿದ ತ್ರಿವರ್ಣ ರಂಗಿನ ಚಿತ್ತಾರ, ರಾಷ್ಟ್ರಗೀತೆ ‘ಜನ ಗಣ ಮನ’ ‘ಕೋಟಿ ಕಂಠೋಂಸೇ ನಿಖ್‌ಲೇ...’ ಗಾನಕ್ಕೆ ಸೇರಿದ್ದ ೩೦ ಸಾವಿರಕ್ಕೂ ಅಧಿಕ ಮಂದಿ ಪುಟಾಣಿ ಧ್ವಜಗಳನ್ನು ಬೀಸುತ್ತಾ ದನಿಗೂಡಿಸಿದರು.ಗಣ್ಯರಿಗೆ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಇಂದ್ರೇಶ್ ಗೌಡ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಹರ್ಷಾ ರೆಡ್ಡಿ ನೇತೃತ್ವದಲ್ಲಿ ಗೌರವ ವಂದನೆ ನೀಡಲಾಯಿತು. ಸುಡುಮದ್ದು ಸಿಂಚನವು ಗಮನ ಸೆಳೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವರಾದ ಪಿಪಿ.ಜಿ.ಆರ್. ಸಿಂಧ್ಯಾ, ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಸುಮಾರು ೨೫೦ಕ್ಕೂ ಅಧಿಕ ಮಾಜಿ ಸೈನಿಕರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ