ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿಯಲ್ಲಿ ಡ್ರೋನ್ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ರಾಷ್ಟ್ರೀಯ ಹವಾಮಾನ ಸ್ಥಿತಿಸ್ಥಾಪಕ ಯೋಜನೆಯಡಿ (ನಿಕ್ರಾ) ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಯೋಜನೆಯಡಿ ಹಸಿಕಡಲೆ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ ಅನುಷ್ಠಾನಗೊಳಿಸಿದ ತಾಕುಗಳಲ್ಲಿ ಇಫ್ಕೊ ಸಂಸ್ಥೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಲಘು ಪೋಷಕಾಂಶಗಳ ಮಿಶ್ರಣದ ಸಿಂಪಡಣೆ ಕುರಿತು ಪ್ರಾತ್ಯಕ್ಷಿಕೆ ನಿದರ್ಶಿಸಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಮತ್ತು ನಿಕ್ರಾ ಯೋಜನೆಯ ನೋಡಲ್ ಅಧಿಕಾರಿ ಡಾ.ಶ್ರುತಿ ಎಂ.ಕೆ, ಇತ್ತೀಚಿನ ದಿನಗಳಲ್ಲಿ ಕೂಲಿಕಾರ್ಮಿಕರ ಸಮಸ್ಯೆ ಇದ್ದು ಈ ಸಮಸ್ಯೆಯನ್ನು ಸರಿದೂಗಿಸಲು ಡ್ರೋನ್ ಮೂಲಕ ಸಿಂಪಡಣೆ ಮಾಡುವುದು ಒಂದು ಪರ್ಯಾಯ ತಂತ್ರಜ್ಞಾನ. ಡ್ರೋನ್ ಮೂಲಕ ಸಿಂಪಡಣೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಿಂತ ಗಣನೀಯವಾಗಿ ಕಡಿಮೆ ನೀರಿನ ಪ್ರಮಾಣ ಬೇಕಾಗಿರುವುದರಿಂದ ಮಳೆಯಾಶ್ರಯ ಪ್ರದೇಶಗಳಲ್ಲಿ ಇದರ ಬಳಕೆ ಬಹಳ ಉಪಯುಕ್ತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಂಪಡಣೆಗೆ ಬೇಕಾಗುವ ಸಮಯದ ಉಳಿತಾಯ ಆಗಿ ದಕ್ಷತೆಯು ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಲಘು ಪೋಷಕಾಂಶಗಳನ್ನು ಹಸಿಕಡಲೆ ಬೆಳೆಗೆ ಒದಗಿಸುವುದರಿಂದ ಬೆಳೆವಣಿಗೆ ಮತ್ತು ಇಳುವರಿ ಮೇಲೆ ಆಗುವ ಅನುಕೂಲತೆಗಳ ಬಗ್ಗೆ ವಿವರಣೆ ನೀಡಿದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ಸಿಂಪಡಣೆಯ ಕೌಶಲ್ಯ ಅಗತ್ಯವಿದ್ದು ರಾಸಾಯನಿಕಗಳ ಸಿಂಪಡಣೆಯ ವೇಳೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ, ಡ್ರೋನ್ ಬಳಸುವುದರಿಂದ ರಾಸಾಯನಿಕ ಸಿಂಪಡಣೆಯ ವೇಳೆ ಉಂಟಾಗುವ ಅಡ್ಡ ಪರಿಣಾಮಗಳನ್ನು ನಿಯಂತ್ರಿಸಿ ನಿಖರ ಸಿಂಪಡಣೆ ಸಾಧ್ಯ ಎಂದರು. ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನಂದಿನಿ ಮಾತನಾಡಿ, ಡ್ರೋನ್ ತಂತ್ರಜ್ಞಾನ ಬಳಕೆಯಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಸಿಂಪಡಣೆ ಸಾಧ್ಯ, ರೈತರಿಗೆ ಸಮಯ ಮತ್ತು ಕಾರ್ಮಿಕರ ಉಳಿತಾಯವಾಗಿ ಅನುಕೂಲಕರವಾಗಿದೆ ಎಂದು ತಿಳಿಸಿದರು.ನಿಕ್ರಾ ಯೋಜನೆಯ ಹಿರಿಯ ಸಂಶೋಧನಾ ಸಹಾಯಕ ಮೋಹನ್‌ಕುಮಾರ್ ಯೋಜನೆಯಲ್ಲಿ ಡ್ರೋನ್ ಮೂಲಕ ಸಿಂಪಡಣೆಯ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸಲಾಗುತ್ತಿದ್ದು, ರೈತರು ಈ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹವಾಮಾನ ವೈಪರೀತ್ಯ ಪರಿಣಾಮಗಳನ್ನು ನಿರ್ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಫ್ಕೊ ಸಂಸ್ಥೆಯ ಕ್ಷೇತ್ರ ಅಧಿಕಾರಿ ಭಗತ್ ಉಪಸ್ಥಿತರಿದ್ದರು. ತಮ್ಮ ಸಂಸ್ಥೆಯ ಮೂಲಕ ಈ ತಂತ್ರಜ್ಞಾನವನ್ನು ಪ್ರಚಾರಗೊಳಿಸುತ್ತಿದ್ದು, ದ್ರಾವಣ ರೂಪದ ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ರೈತರು ಇವುಗಳನ್ನು ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಹಾಗೂ ಹೊಲಗದ್ದೆ ಬೆಳೆಗಳ ಬೇಸಾಯದಲ್ಲಿ ಮೇಲುಗೊಬ್ಬರವಾಗಿ ಬಳಕೆ ಮಾಡಿಕೊಳ್ಳಲು ಕರೆ ನೀಡಿದರು. ಗ್ರಾಮದ ಪ್ರಗತಿಪರ ರೈತರಾದ ಶಿವರಾಮು, ಮಹೇಶ್, ಮಂಜುನಾಥ, ಶಿವಕುಮಾರ್ ಮತ್ತು ಇತರ ರೈತರು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.