ಮುಮ್ಮಿಗಟ್ಟಿಯಲ್ಲಿ ಉಲ್ಬಣಿಸಿದ ಡೆಂಘೀ

KannadaprabhaNewsNetwork | Published : Jun 14, 2024 1:03 AM

ಸಾರಾಂಶ

ಡೆಂಘೀ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇಷ್ಟಾಗಿಯೂ ಮುಮ್ಮಿಗಟ್ಟಿಯಲ್ಲಿ ಡೆಂಘೀ ಸ್ಫೋಟಗೊಂಡಿದ್ದು 40ಕ್ಕೂ ಹೆಚ್ಚು ಜನರಿಗೆ ಡೆಂಘೀ ಲಕ್ಷಣಗಳಿಂದ ಆಸ್ಪತ್ರೆ ಸೇರಿದ್ದಾರೆ.

ಧಾರವಾಡ:

ಜಿಲ್ಲೆಯಲ್ಲಿ ಮುಂಗಾರು ಮಳೆ ಶುರುವಾದಂತೆ ಡೆಂಘೀಯೂ ಉಲ್ಬಣಗೊಂಡಿದೆ. ಮುಮ್ಮಿಗಟ್ಟಿಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಬುಧವಾರ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು ಆತಂಕ ಶುರುವಾಗಿದೆ.

ಡೆಂಘೀ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇಷ್ಟಾಗಿಯೂ ಮುಮ್ಮಿಗಟ್ಟಿಯಲ್ಲಿ ಡೆಂಘೀ ಸ್ಫೋಟಗೊಂಡಿದ್ದು 40ಕ್ಕೂ ಹೆಚ್ಚು ಜನರಿಗೆ ಡೆಂಘೀ ಲಕ್ಷಣಗಳಿಂದ ಆಸ್ಪತ್ರೆ ಸೇರಿದ್ದಾರೆ. ಈ ರೋಗದ ಗಂಭೀರತೆ ಅರಿತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಗುರುವಾರ ಗ್ರಾಮಕ್ಕೆ ಭೇಟಿ ಅಲ್ಲಿ ಸ್ಥಿತಿಗತಿ ಅರಿತರು. ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.

ಡಿಎಚ್‌ಒ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ ನೇತೃತ್ವದ ಆಶಾ ಕಾರ್ಯಕರ್ತೆಯರ ತಂಡ ಗ್ರಾಮದಲ್ಲಿ ಹೆಚ್ಚು ಜ್ವರ ಪೀಡತರ ಓಣಿಗಳಿಗೆ ಭೇಟಿ ನೀಡಿ, ಮನೆಯಲ್ಲಿನ ಕುಟುಂಬದವರ ಅಭಿಪ್ರಾಯ ಸಂಗ್ರಹಿಸಿತು. ಸುಮಾರು 21 ಆಶಾ ಕಾರ್ಯಕರ್ತೆರು ಗ್ರಾಮದ ಪ್ರತಿ ಮನೆಗೆ ಹೋಗಿ ಆರೋಗ್ಯ ಸಮೀಕ್ಷೆ ಮಾಡಿ, ಡೆಂಘೀ, ಚಿಕನ್‍ಗೂನ್ಯಾ ಬಗ್ಗೆ ಜಾಗೃತಿ ಮೂಡಿಸಿದೆ. ಈ ವೇಳೆ ಮುಮ್ಮಿಗಟ್ಟಿ ಗ್ರಾಪಂ ಅಧ್ಯಕ್ಷೆ ಸುವರ್ಣಾ ಕೊಟ್ರಿ, ಉಪಾಧ್ಯಕ್ಷ ವಿಠ್ಠಲ ಬಟ್ಟಂಗಿ, ಪಿಡಿಒ ಪರಶುರಾಮ ಕವಲೂರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಇದ್ದರು.

ಈ ತಂಡ ಗ್ರಾಮಕ್ಕೆ ಭೇಟಿಯಾದ ವೇಳೆ ಕೆಲ ಗ್ರಾಮಸ್ಥರು ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿದರು. ಗ್ರಾಮದಲ್ಲಿರುವ ಸಚಿವ ಸಂತೋಷ ಲಾಡ್‌ ಅವರ ಆಪ್ತ ಸಹಾಯಕರೊಬ್ಬರು ತಮ್ಮ ಮನೆ ಸುತ್ತಲು ಮಾತ್ರ ಫಾಗಿಂಗ್‌ ಮಾಡಿಸಿದ್ದು, ಗ್ರಾಮದ ಉಳಿದ ಪ್ರದೇಶದಲ್ಲಿ ಏತಕ್ಕೆ ಫಾಗಿಂಗ್‌ ಮಾಡಿಸಿಲ್ಲ. ಅಧಿಕಾರಿಗಳು ಸಹ ಗ್ರಾಮದ ಸ್ವಚ್ಛತೆ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಬಂದಾಗ ಸಂಗ್ರಹವಾಗುವ ಅಥವಾ ಮನೆಯಲ್ಲಿಯೇ ಇರುವ ಶುದ್ಧ ನೀರಿನಲ್ಲಿ ಡೆಂಘೀ ರೋಗ ಹರಡುವ ಸೊಳ್ಳೆಗಳು ಜನಿಸುತ್ತವೆ. ಹೂವಿನ ಕುಂಡ, ಏರಕೂಲರ್‌, ತೆಂಗಿನ ಚಿಪ್ಪು, ಟೈಯರ್‌, ನೀರು ತೊಟ್ಟಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಅಥವಾ ಮುಚ್ಚಿಡಬೇಕು. ಗ್ರಾಮಸ್ಥರು ತಮ್ಮ ಮನೆ, ಓಣಿಯ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಇಂತಹ ರೋಗಗಳಿಂದ ಮುಕ್ತವಾಗಬಹುದು. ಈ ಕುರಿತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ರೋಗ ನಿಯಂತ್ರಣಕ್ಕೆ ಬೇಕಾದ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಳೆದ ಜನವರಿ ತಿಂಗಳಿಂದ ಈ ವರೆಗೆ ಜಿಲ್ಲೆಯಲ್ಲಿ 437 ಶಂಕಿತ ಡೆಂಘೀ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 161 ಜನರಿಗೆ ಡೆಂಘೀ ದೃಢಪಟ್ಟಿದೆ. ಹತ್ತು ದಿನಗಳ ಅಂತರದಲ್ಲಿ 41 ಡಂಘೀ ಪ್ರಕರಣಗಳು ಪತ್ತೆಯಾಗಿದ್ದು ಹೆಚ್ಚಿನವು ಮುಮ್ಮಿಗಟ್ಟಿ ಪ್ರದೇಶದಲ್ಲಾಗಿವೆ. ಗ್ರಾಮದ ನಾಲ್ಕು ವರ್ಷದ ಸಮೃದ್ಧಿ ಪಾಟೀಲ ಎಂಬ ಮಗು ಮೃತಪಟ್ಟಿದೆ.

Share this article