ಕೆಲಗೇರಿಯಲ್ಲಿ ಡೆಂಘೀ ಜಾಗೃತಿ

KannadaprabhaNewsNetwork |  
Published : Jul 06, 2024, 12:51 AM IST
ದಿವ್ಯಪ್ರಭು | Kannada Prabha

ಸಾರಾಂಶ

ಕೆಲಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಡೆಂಘೀ ಜಾಗೃತಿ ಕರಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಘೀ ರೋಗ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಜನಜಾಗೃತಿ ಮತ್ತು ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನವಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ.

ನಗರದ ಕೆಲಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಡೆಂಘೀ ಜಾಗೃತಿ ಕರಪತ್ರ ವಿತರಿಸುವ ಮತ್ತು ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಾಥಾ ನಡಿಗೆಗೆ ಮತ್ತು ನೀರಿನ ತೊಟ್ಟಿಗೆ ಲಾರ್ವಾ ಸೊಳ್ಳೆಯ ಮರಿ ಮತ್ತು ತತ್ತಿಗಳನ್ನು ತಿನ್ನುವ ಗಪ್ಪಿ ಮೀನು ಬಿಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಹಲವು ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಜನಜಾಗೃತಿಗೆ ಮೊದಲ ಆದ್ಯತೆ ನೀಡಲಾಗಿದೆ. ಮಹಿಳೆ ಮತ್ತು ಮಕ್ಕಳು ಡೆಂಘೀ ಬಗ್ಗೆ ತಿಳಿವಳಿಕೆ ಹೊಂದುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಡೆಂಘೀ ನಿಯಂತ್ರಿಸಿ, ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕಳೆದ ಜನವರಿಯಿಂದ ಈ ವರೆಗೆ 253 ಜನರಲ್ಲಿ ಡೆಂಘೀ ದೃಢಪಟ್ಟಿದ್ದು, ಅಗತ್ಯ ಔಷಧಿ, ಚಿಕಿತ್ಸೆ ಪಡೆದು ಅವರೆಲ್ಲರೂ ಗುಣಮುಖರಾಗಿದ್ದಾರೆ. ಈಗ 21 ಶಂಕಿತರಿದ್ದು, ಇದರಲ್ಲಿ ಮೂವರು ಆಸ್ಪತ್ರೆಯಲ್ಲಿ ಮತ್ತು 18 ಜನ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ

ಡೆಂಘೀ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲಾಗಿದೆ. ಅಗತ್ಯ ಔಷಧಿಯೂ ದಾಸ್ತಾನಿದೆ. ಆರೋಗ್ಯ ಇಲಾಖೆಯೊಂದಿಗೆ ಕಂದಾಯ, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಇಲಾಖೆ, ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಕೈ ಜೋಡಿಸಿವೆ. ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಬಳಿಕ ಮನೆ ಮನೆಗೆ ತೆರಳಿ ಜನಜಾಗೃತಿ ಅಂಗವಾಗಿ ಡೆಂಘೀ ಜಾಗೃತಿಯ ಮಾಹಿತಿ ಕರಪತ್ರ ವಿತರಿಸಿದರು. ಗೃಹಿಣಿಯರಿಗೆ ಮಾಹಿತಿ ನೀಡಿದರು.

ಕೆಲಗೇರಿ ಗ್ರಾಮದ ರೇಖವ್ವ ಮಳಗಿ ಮನೆ ಆವರಣದ ಸಾರ್ವಜನಿಕ ನೀರು ಸಂಗ್ರಹಣ ತೊಟ್ಟಿಗೆ ಗಪ್ಪಿ ಮೀನು ಬಿಡುವ ಮೂಲಕ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗಪ್ಪಿ ಮೀನು ಅಭಿಯಾನಕ್ಕೆ ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಮುಖ್ಯ ಅತಿಥಿಯಾಗಿದ್ದರು. ಆರ್.ಸಿ.ಎಚ್.ಒ. ಡಾ. ಸುಜಾತಾ ಹಸವೀಮಠ, ಡಿಎಂಒ ಡಾ. ಮಂಜುನಾಥ ಎಸ್., ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಪಾಲಿಕೆ 1ರ ಸಹಾಯಕ ಆಯುಕ್ತ ಆನಂದ ಕಾಂಬೆ ಸೇರಿದಂತೆ ಆರೋಗ್ಯ ಇಲಾಖೆ ವಿವಿಧ ಅಧಿಕಾರಿಗಳು ಹಾಗೂ ಕೆಲಗೇರಿ ಗ್ರಾಮದ ಪ್ರಮುಖರು, ಶ್ರೇಯಾ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಶ್ರೇಯಾ ಕಾಲೇಜು ವಿದ್ಯಾರ್ಥಿಗಳು ಕೆಲಗೇರಿ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಲಾರ್ವಾ ನಾಶಗೊಳಿಸುವ ಕಾರ್ಯ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ