ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಇಳಿಮುಖ : ಡಾ. ಅಶ್ವಥ್‌ಬಾಬು

KannadaprabhaNewsNetwork | Published : Jul 20, 2024 12:56 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಜುಲೈನಲ್ಲಿ ಇಳಿಮುಖವಾಗುತ್ತಿದ್ದು, ಡೆಂಘೀಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ ಬಾಬು ಹೇಳಿದ್ದಾರೆ.

26 ಸಕ್ರೀಯ ಡೆಂಘೀ ಪ್ರಕರಣ । ನಿರಂತರ ಲಾರ್ವಾ ಸಮೀಕ್ಷೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಜುಲೈನಲ್ಲಿ ಇಳಿಮುಖವಾಗುತ್ತಿದ್ದು, ಡೆಂಘೀಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ ಬಾಬು ಹೇಳಿದ್ದಾರೆ.

ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಜನವರಿಯಿಂದ ಜು.18 ರವರೆಗೆ ಜಿಲ್ಲೆಯಲ್ಲಿ 630 ದೃಢೀಕೃತ ಡೆಂಘೀ ಪ್ರಕರಣ ದಾಖಲಾಗಿದ್ದು, ಇದರಲ್ಲಿ 26 ಡೆಂಘೀ ಸಕ್ರಿಯ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.

ಸಿಂಧಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದೇವಗೊಂಡನಹಳ್ಳಿಯಲ್ಲಿ ಕೀಲುನೋವುಗಳ ಪ್ರಕರಣ ಇವೆ ಎಂದು ವರದಿಯಾಗಿದ್ದು, ಆ ಗ್ರಾಮದಲ್ಲಿ 357 ಮನೆಗಳಿದ್ದು 1421 ಜನಸಂಖ್ಯೆ ಹೊಂದಿದೆ. ಆರೋಗ್ಯ ಸಿಬ್ಬಂದಿ 6 ಕ್ಷಿಪ್ರ ತಂಡ ರಚಿಸಿ ಭೇಟಿ ನೀಡಿ ಲಾರ್ವಾ ಸಮೀಕ್ಷೆ, ಸೊಳ್ಳೆ ನಿರ್ಮೂಲನಾ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ಒಟ್ಟು 24 ರಕ್ತದ ಮಾದರಿ ಸಂಗ್ರಹಿಸಿ ಡಿಪಿಎಚ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದು ವರದಿಯಲ್ಲಿ 4 ಚಿಕೂನ್ ಗುನ್ಯಾ ಜ್ವರ , ಒಂದು ಡೆಂಘೀ ಪತ್ತೆಯಾಗಿದ್ದು, ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಮಟ್ಟದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಮೇಲ್ವಿಚಾರಣಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಅಡ್ಡ ಪರೀಕ್ಷೆ ನಡೆಸಿ ಅಲ್ಲಿನ ಸಿಬ್ಬಂದಿಗೆ ಗುಣಾತ್ಮಕ ಹಾಗೂ ಪರಿಣಾಮಕಾರಿ ಲಾರ್ವಾ ಸಮೀಕ್ಷೆ ನಡೆಸಿ ರೋಗಿಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಸೂಚಿಸ ಲಾಗಿದೆ ಎಂದರು.

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಡೆಂಘೀ ಸೇರಿದಂತೆ ಯಾವುದೇ ರೀತಿ ಕಾಯಿಲೆ ಗಳಿಂದ ಬಳಲುವವರು ಮನೆಯಿಂದ ಹೊರ ಬರಲಾಗದವರು 9448907909 ಸಂಖ್ಯೆಯನ್ನು ಸಂಪರ್ಕಿಸ ಬಹುದು. ತಾಲೂಕು ಆರೋಗ್ಯಾಧಿಕಾರಿಗಳು, ಪಿಎಚ್‌ಸಿಗಳಲ್ಲಿಯೂ ಡೆಂಘೀ ಕಂಟ್ರೋಲ್ ರೂಂ ಸ್ಥಾಪನೆ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆಂದು ತಿಳಿಸಿದರು.ಈ ಸಂಖ್ಯೆಗೆ ಬರುವ ಕರೆಗಳನ್ನು ದಾಖಲಿಸಿ, ಜ್ವರದ ಲಕ್ಷಣ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಪೂರ್ಣ ಮಾಹಿತಿ ಒದಗಿಸ ಲಾಗುವುದು. ಡೆಂಘೀ ಕಂಡು ಬಂದರೆ ಸಮಸ್ಯಾತ್ಮಕ ನಗರ ಮತ್ತು ಹಳ್ಳಿಗಳಲ್ಲಿ ನಿರಂತರ ಲಾರ್ವಾ ಸರ್ವೆ ಜೊತೆಗೆ 6 ವಾರಗಳ ವಿಶೇಷ ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಟಿಒ ಡಾ. ಹರೀಶ್‌ಬಾಬು, ಆರ್‌ಸಿಎಚ್ ಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 19 ಕೆಸಿಕೆಎಂ 2

Share this article