ಸಮರ್ಪಕ ಚಿಕಿತ್ಸೆ ಪಡೆದಲ್ಲಿ ಡೆಂಘೀ ವಾಸಿ: ಡಾ. ಮಧುಕರ ಗೋಖಲೆ

KannadaprabhaNewsNetwork | Published : Jul 9, 2024 12:51 AM

ಸಾರಾಂಶ

ರೋಗದ ಲಕ್ಷಣ ಕಂಡುಬಂದಲ್ಲಿ ಅಥವಾ ಯಾವುದೇ ಜ್ವರ ಬಂದರೆ ಅಲಕ್ಷಿಸದೇ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸಮರ್ಪಕ ಚಿಕತ್ಸೆ ಪಡೆದಲ್ಲಿ ರೋಗಗಳಿಂದ ಎದುರಾಗುವ ಬಾಧೆಗಳನ್ನು ತಪ್ಪಿಸಬಹುದು.

ಹಳಿಯಾಳ: ಮಾರಣಾಂತಿಕ ಡೆಂಘೀ ರೋಗ ಸಮರ್ಪಕವಾದ ಚಿಕಿತ್ಸೆ ಪಡೆದಲ್ಲಿ ವಾಸಿಯಾಗುತ್ತದೆ. ಡೆಂಘೀ ಬಗ್ಗೆ ಭಯಪಡಬೇಡಿ. ಆದಷ್ಟು ಈ ರೋಗ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆಯು ಸೂಚಿಸುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಹಳಿಯಾಳದ ಹಿರಿಯ ವೈದ್ಯ ಡಾ. ಮಧುಕರ ಗೋಖಲೆ ತಿಳಿಸಿದರು.

ಸೋಮವಾರ ಪಟ್ಟಣದ ಮುಖ್ಯಬೀದಿಯಲ್ಲಿರುವ ಮಧು ಕ್ಲಿನಿಕ್‌ನಲ್ಲಿ ನಡೆದ ಡೆಂಘೀ ರೋಗದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಡೆಂಘೀ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತೇರಗಾಂವ ಗ್ರಾಮದ ಚಿತ್ರ ಕಲಾವಿದರಾದ ಗುರು ದ್ರೋಣಾಚಾರ್ಯ ಸಮ್ಮಾನ ಪ್ರಶಸ್ತಿ ಪುರಸ್ಕೃತ ಜಿ.ಜಿ. ಮೆಹಂದಳೆ ಅವರು ಚಿತ್ರಿಸಿದ ಕೋಲಾಜ್ ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು. ಸ್ವಾಭಾವಿಕವಾಗಿ ಮಳೆಗಾಲ ಆರಂಭವಾದೊಡನೆ ಮಾರಕ ರೋಗಗಳು ತಲೆದೋರುವುದು ಸಾಮಾನ್ಯ. ಮಲೇರಿಯಾ, ಚಿಕೂನ್ ಗುನ್ಯಾ, ಡೆಂಘೀ ಮೊದಲಾದ ರೋಗಗಳ ಬಗ್ಗ ಜನರಲ್ಲಿ ಮಾಹಿತಿಯ ಕೊರತೆಯಿದೆ. ಈ ಮಾರಕ ರೋಗಗಳೆಲ್ಲ ಹರಡುವುದೇ ಸೊಳ್ಳೆಗಳಿಂದ. ಆದ್ದರಿಂದ ಜನಸಾಮಾನ್ಯರು ಮೊಟ್ಟಮೊದಲು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು.

ಸಾಮಾನ್ಯವಾಗಿ ಸೊಳ್ಳೆಗಳು ನಿಂತ ನೀರಿನ ಗುಂಡಿ, ಮನೆಯಸುತ್ತ ಬಿದ್ದ ಕಸದ ರಾಶಿಯಲ್ಲಿ ಶೇಖರಣೆಯಾದ ನೀರು, ತೆಂಗಿನ ಚಿಪ್ಪುಗಳು, ಮನೆಯ ಹೊರಭಾಗದಲ್ಲಿ ಇಟ್ಟ ಮಡಿಕೆ, ಪ್ಲಾಸ್ಟಿಕ್‌ ವಸ್ತುಗಳು, ಡ್ರಮ್ಮುಗಳು, ಹೂದಾನಿ, ಟೈರ್ ತೊಟ್ಟಿ ಮುಂತಾದವುಗಳಲ್ಲಿ ಬೆಳೆದು ಇವುಗಳಲ್ಲಿ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯು ಮಾನವನಿಗೆ ಕಚ್ಚುವುದರಿಂದ ರೋಗ ತಗಲುತ್ತದೆ ಎಂದರು.

ರೋಗದ ಲಕ್ಷಣ ಕಂಡುಬಂದಲ್ಲಿ ಅಥವಾ ಯಾವುದೇ ಜ್ವರ ಬಂದರೆ ಅಲಕ್ಷಿಸದೇ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸಮರ್ಪಕ ಚಿಕತ್ಸೆ ಪಡೆದಲ್ಲಿ ರೋಗಗಳಿಂದ ಎದುರಾಗುವ ಬಾಧೆಗಳನ್ನು ತಪ್ಪಿಸಬಹುದು ಎಂದರು.

ಚಿತ್ರಕಲಾವಿದ ಜಿ.ಜಿ. ಮೆಹಂದಳೆ ಅವರು ತಮ್ಮ ಕೋಲಾಜ್ ಚಿತ್ರದ ಮೂಲಕ ಸಾರ್ವಜನಿಕರಲ್ಲಿ ಡೆಂಘೀ ಬಗ್ಗೆ ಅತ್ಯುತ್ತವಾಗಿ ಜಾಗೃತೆಯನ್ನು ಮೂಡಿಸುತ್ತಿದ್ದು, ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಯುವ ಸಮಾಜ ಸೇವಕ ಮಹೇಶ ನಾಯಕ ಮಾತನಾಡಿ, ಸಾಧಾರಣ ಜ್ವರ ಎಂದು ನಿರ್ಲಕ್ಷಿಸಬೇಡಿ. ಇದರಿಂದ ರಕ್ತದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದರು.

ಡೆಂಘೀ ಬಗ್ಗೆ ಮುಂಜಾಗ್ರತಾ ಹೊಂದುವುದೇ ರೋಗ ನಿಯಂತ್ರಣದ ಮೊದಲ ಮದ್ದು ಎಂದರು.

ಚಿತ್ರಕಲಾವಿದ ಜಿ.ಜಿ. ಮೆಹಂದಳೆ ಮಾತನಾಡಿ, ದೇವರು ನನಗ ಚಿತ್ರ ಬಿಡಿಸುವ ಕೌಶಲ್ಯವನ್ನು ನೀಡಿದ್ದಾರೆ. ಈ ಕಲೆಯನ್ನು ಸಮಾಜಸೇವೆಗಾಗಿ ಬಳಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸನ್ನ ವಾಟವೇ ಹಾಗೂ ಇತರರು ಇದ್ದರು.

Share this article