ಮಳೆಗಾಲದಲ್ಲಿ ಡೆಂಘೀ ಉಲ್ಬಣ, ಜಾಗೃತಿ ಅಗತ್ಯ

KannadaprabhaNewsNetwork | Published : May 17, 2025 1:28 AM

1945ರಲ್ಲಿ ಡೆಂಘೀ ಜ್ವರ ದೇಶಕ್ಕೆ ಕಾಲಿಟ್ಟಿದ್ದು, ಕುಷ್ಟಗಿತಾಲೂಕಿನಲ್ಲಿ ಕಳೆದ ವರ್ಷ 30 ಪ್ರಕರಣ ದಾಖಲಾಗಿವೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಗುಣಮುಖರಾಗಿದ್ದು ಪ್ರಾಣಹಾನಿ ಸಂಭವಿಸಿಲ್ಲ.

ಕುಷ್ಟಗಿ:

ಮಲೇರಿಯಾದಂತಹ ಕಾಯಿಲೆಗಳು ಮಾಯವಾಗಿದ್ದು, ಈಗ ಡೆಂಘೀ, ಮೆದುಳು ಜ್ವರದಂತಹ ಕಾಯಿಲೆಗಳ ಉಲ್ಬಣಿಸುತ್ತಿವೆ. ಹೀಗಾಗಿ ಜನರು ಜಾಗೃತಿಯಿಂದ ಇರಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ಹೇಳಿದರು.

ಪಟ್ಟಣದ ತಾಲೂಕಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ನಡೆದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1945ರಲ್ಲಿ ಡೆಂಘೀ ಜ್ವರ ದೇಶಕ್ಕೆ ಕಾಲಿಟ್ಟಿದ್ದು, ತಾಲೂಕಿನಲ್ಲಿ ಕಳೆದ ವರ್ಷ 30 ಪ್ರಕರಣ ದಾಖಲಾಗಿವೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಗುಣಮುಖರಾಗಿದ್ದು ಪ್ರಾಣಹಾನಿ ಸಂಭವಿಸಿಲ್ಲ ಎಂದ ಅವರು, ಈ ವರ್ಷದ ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಯಿಲೆ ಸಹ ಆರಂಭವಾಗುತ್ತಿವೆ. ಈಗಾಗಲೇ ತಾಲೂಕಿನಲ್ಲಿ 2 ಡೆಂಘೀ ಜ್ವರದ ಪ್ರಕರಣ ದಾಖಲಾಗಿದ್ದು ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ ಎಂದರು.

ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಮಾತನಾಡಿ, ಡೆಂಘೀ ಜ್ವರ ನಮಗೆ ಪರಿಚಯವೇ ಇಲ್ಲದ ಕಿವಿ ಹಣ್ಣು ತಿನ್ನುವುದು ಹಾಗೂ ಪಪ್ಪಾಯಿ ರಸ ಕುಡಿಯುವುದನ್ನು ಕಲಿಸಿದೆ ಎಂದರು.

ಡೆಂಘೀ ತಾಲೂಕಿನಲ್ಲಿ 18 ವರ್ಷಗಳ ಹಿಂದೆ ಕಾಲಿಟ್ಟಿದ್ದು ಇದರಿಂದ ಸಾವು ಕಡಿಮೆ, ನೋವು ಜಾಸ್ತಿಯಾಗುತ್ತದೆ. ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿಯೇ ಬಹಳಷ್ಟು ಕಂಡು ಬರುವ ಕಾಯಿಲೆಯಾಗಿದ್ದು. ಜನರು ಜಾಗೃತರಾಗಬೇಕು ಎಂದ ಅವರು, ಡೆಂಘೀ ಜ್ವರದ ಲಕ್ಷಣಗಳಾದ ಕಿವಿ ಹಿಂದುಗಡೆ ನೋವು, ಬಾಯಿಂದ ರಕ್ತ ಬರುವುದು, ವಾಂತಿ ಮಾಡಿದಾಗ ರಕ್ತ ಬರುವುದು, ಜಾಸ್ತಿ ಸುಸ್ತಾಗುವುದು ಸೇರಿದಂತೆ ಅನೇಕ ಲಕ್ಷಣಗಳು ಕಾಣುತ್ತವೆ. ಆಗ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಬಿಜಿಎಸ್ ಪ್ಯಾರಾ ಮೆಡಿಕಲ್ ಅಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಈ ವೇಳೆ ಸಹಾಯಕ ಆಡಳಿತ ಅಧಿಕಾರಿ ಸೈಯದ್ ರಹಿಮ, ಡಾ. ಪ್ರಶಾಂತಕುಮಾರ, ಸೋಮಶೇಖರ್ ಮೇಟಿ, ಪಿ. ಸುಶೀಲಾ, ತಾಂತ್ರಿಕ ಮೇಲ್ವಿಚಾರಕಿ ಪ್ರಕಾಶ, ಕಿರಣ್ ಟ್ಯೂಟರ ಸೇರಿದಂತೆ ಅನೇಕರು ಇದ್ದರು.