ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಜನರಿಗೆ ತಲುಪಿಸಿ, ಜನತೆಗೆ ಉತ್ತಮ ಹಣಕಾಸಿನ ಸೇವೆ ನೀಡುತ್ತಾ ಗ್ರಾಹಕರ ವಿಶ್ವಾಸಗಳಿಸಿದೆ ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಜನರಿಗೆ ತಲುಪಿಸಿ, ಜನತೆಗೆ ಉತ್ತಮ ಹಣಕಾಸಿನ ಸೇವೆ ನೀಡುತ್ತಾ ಗ್ರಾಹಕರ ವಿಶ್ವಾಸಗಳಿಸಿದೆ ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.
ಪಟ್ಟಣದ ಉಪ ಅಂಚೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅತಿ ಹೆಚ್ಚು ಖಾತೆಗಳ ಮಾಡಿಸಿದ ಇಲಾಖೆ ಸಿಬ್ಬಂದಿಗೆ ಬಹುಮಾನಗಳ ವಿತರಿಸಿ ಮಾತನಾಡಿ ತಾಲೂಕಿನ ಅಂಚೆ ಕಚೇರಿ ಸಿಬ್ಬಂದಿ ಕಳೆದ ಒಂದು ತಿಂಗಳ ಅವಧಿಯಲ್ಲಿ 4,505 ಖಾತೆಗಳ ತೆರೆದು ಉತ್ತಮ ಸಾಧನೆ ಮಾಡಿದ್ದು, ಇದು ದಾವಣಗೆರೆ ವಿಭಾಗದಲ್ಲಿಯೇ ಅತಿ ಹೆಚ್ಚು ಖಾತೆಗಳ ತೆರೆದ ಉಪ ಶಾಖೆಯಾಗಿದೆ. ನಿಮ್ಮ ಪ್ರಾಮಾಣಿಕ ಸೇವೆ ಮತ್ತು ಗ್ರಾಹಕರಿಗೆ ನೀಡುವ ಉತ್ತಮ ಸ್ಪಂದನೆಯಿಂದ ಸಾಧ್ಯವಾಗಿದೆ ಎಂದರು.
ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಒಂದೇ ಸೂರಿನಡಿ ಜನತೆಗೆ ತಲುಪಿಸುವ ಕೆಲಸ ಅಂಚೆ ಕಚೇರಿಗಳು ಮಾಡುತ್ತಿದ್ದು, ಈ ಹಿಂದೆ ಅಂಚೆ ಕಚೇರಿಗಳಿಗೆ ಜನರೇ ಬರುತ್ತಿರಲಿಲ್ಲ. ಕೇವಲ ಪತ್ರಗಳ ವ್ಯವಹಾರಕ್ಕೆ ಸೀಮಿತವಾಗಿತ್ತು ಪ್ರಸ್ತುತ ದಿನಗಳಲ್ಲಿ ಹಣಕಾಸಿನ ವಹಿವಾಟು ಪ್ರಾರಂಭವಾಗಿ ಜನತೆಯ ವಿಶ್ವಾಸ ಗಳಿಸಿದ ನಂತರ ಜನರು ಅಂಚೆ ಕಚೇರಿಗಳಿಗೆ ಬರುವಂತಾಗಿದೆ ಎಂದರು.
ಚನ್ನಗಿರಿ ಉಪ ಅಂಚೆ ಕಚೇರಿ ಅಂಚೆ ಪಾಲಕ ಎಚ್.ಆರ್.ಮಹೇಂದ್ರಪ್ಪ ಮಾತನಾಡಿ ತಾಲೂಕಿನ ಎಲ್ಲಾ ಅಂಚೆ ಕಚೇರಿ ಸಿಬ್ಬಂದಿ ಪರಿಶ್ರಮದಿಂದ 4,505ಖಾತೆಗಳ ತೆರೆಯಲು ಸಾಧ್ಯವಾಗಿದೆ. ತಾಲೂಕಿನ ಜನತೆಗೆ ಅಂಚೆ ಕಚೇರಿಯಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಜನರ ಮನೆಯ ಬಾಗಿಲಿಗೆ ತೆರಳಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಅಂಚೆ ಅಧೀಕ್ಷಕ ಗುರುಪ್ರಸಾದ್, ಅಂಚೆ ನಿರೀಕ್ಷಕ ಜೆ.ಡಿ.ಸ್ವಾಮಿ, ಕಸಾಪದ ನಿಕಟ ಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಶ್ರೀನಿವಾಸ್, ಭಾಸ್ಕರ್, ಈಶ್ವರಪ್ಪ, ಸುಪ್ರೀತ್, ನಾಗರಾಜ್, ಮಂಜುಳಾ ಸೇರಿ ಇಲಾಖೆ ಸಿಬ್ಬಂದಿ, ಸಾರ್ವಜನಿಕರಿದ್ದರು.