ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ಆಸ್ಪತ್ರೆಗೆ ರೋಗಿಗಳ ಆರೈಕೆಗೆ ಬಂದವರು ರಸ್ತೆ ಬದಿ, ಮರದ ನೆರಳಿನಲ್ಲಿ, ಮೆಟ್ಟಿಲುಗಳ ಕೆಳಗೆ, ಚರಂಡಿ ಪಕ್ಕ ಹೀಗೆ ಅವ್ಯವಸ್ಥಿತ ಜಾಗದಲ್ಲಿ ಅಸುರಕ್ಷತೆಯೊಂದಿಗೆ ನೆಲೆಯೂರುತ್ತಿದ್ದವರಿಗೆ ಇದೀಗ ನೆಮ್ಮದಿಯ ನೆಲೆಯೊಂದು ಸಿಕ್ಕಿದೆ. ಅದುವೇ ಆರೋಗ್ಯಧಾಮ.ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸಮಾಜಮುಖಿ ಕಾರ್ಯದ ಸಾಕ್ಷಿ ಪ್ರಜ್ಞೆಯ ರೂಪದಲ್ಲಿ ಕಟ್ಟಡ ಬಹಳ ವ್ಯವಸ್ಥಿತವಾಗಿ ತಲೆಎತ್ತಿ ನಿಂತಿದೆ. ಹೆರಿಗೆ ವಾರ್ಡ್‌ಗೆ ತೆರಳುವ ಮುಂಭಾಗದಲ್ಲೇ ೩೫ ಲಕ್ಷ ರು. ವೆಚ್ಚದಲ್ಲಿ ೩೪*೫೬ ಚದರಡಿ ಅಳತೆಯಲ್ಲಿ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ರೋಗಿಗಳ ಪಾಲನೆಗೆ ಬರುವವರು ವಿಶಾಲವಾದ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಬಹುದು. ಕೊಠಡಿಯೊಳಗೆ ವಿದ್ಯುದ್ದೀಪ, ಫ್ಯಾನ್‌ಗಳನ್ನೂ ಅಳವಡಿಸಿ ಅನುಕೂಲ ಕಲ್ಪಿಸಲಾಗಿದೆ.
ಆರೋಗ್ಯಧಾಮದ ಪಕ್ಕದಲ್ಲೇ ೩೦ ಲಕ್ಷ ರು. ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಮೂತ್ರಾಲಯ, ಶೌಚಗೃಹ, ಸ್ನಾನಗೃಹಗಳನ್ನು ನಿರ್ಮಿಸಿಕೊಡಲಾಗಿದೆ. ಆರೋಗ್ಯ ಧಾಮ ಕೊಠಡಿಯಲ್ಲಿ ೧೫೦ ಜನ ಉಳಿದುಕೊಳ್ಳುವ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸ್ಥಳಾವಕಾಶವಿದ್ದರೂ ನೆಲೆ ಸಿಕ್ಕಿರಲಿಲ್ಲ:
ದಾನಿಗಳು ರೋಗಿಗಳ ಆರೈಕೆಗಾಗಿ ಬರುವವರಿಗೆ ಸಿಮೆಂಟ್ ನೆಲಹಾಸಿನೊಂದಿಗೆ ಕಬ್ಬಿಣ ಅಳವಡಿಸಿ ಮೇಲುಗಡೆ ಶೀಟ್ ಅಳವಡಿಸಿ ನೆರಳಿನಾಶ್ರಯ ಒದಗಿಸಿಕೊಟ್ಟಿದ್ದರು. ಕೆಲ ಸಮಯದ ನಂತರ ಅದು ಮಿಮ್ಸ್ ಅಧಿಕಾರಿಗಳ ಅಸಮರ್ಪಕ ಆಡಳಿತದಿಂದ ಕ್ಯಾಂಟೀನ್‌ಗೆ ಆ ಜಾಗವನ್ನು ನೀಡಲಾಯಿತು. ಆ ಸಮಯದಲ್ಲಿ ಅಲ್ಲಿ ಆಶ್ರಯ ಪಡೆದಿದ್ದ ರೋಗಿಗಳ ಕಡೆಯವರು ಮತ್ತೆ ಬೀದಿಪಾಲಾದರು. ಏಳೆಂಟು ವರ್ಷಗಳ ಕಾಲ ಕಾನೂನು ಸಮರ ನಡೆಸಿ ಅಂತಿಮವಾಗಿ ಕ್ಯಾಂಟೀನ್ ಖಾಲಿ ಮಾಡಿಸುವಲ್ಲಿ ಯಶಸ್ವಿಯಾಯಿತು.ಕ್ಯಾಂಟೀನ್ ಖಾಲಿ ಮಾಡಿಸಿದ ನಂತರವೂ ರೋಗಿಗಳ ಕಡೆಯವರಿಗೆ ಆಸರೆ ಸಿಗಲೇ ಇಲ್ಲ. ಆಸರೆ ಬಯಸಿ ಬರುವವರಲ್ಲಿ ಗರ್ಭಿಣಿ ಆರೈಕೆಗೆ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಆಸ್ಪತ್ರೆ ಆವರಣ, ಮರದ ಕೆಳಗೆ, ಜೋಪಡಿಗಳ ಮೇಲೆ, ರಸ್ತೆಬದಿ, ಮೆಟ್ಟಿಲುಗಳ ಕೆಳಗೆ ವಿಶ್ರಾಂತಿ ಪಡೆಯುವುದು, ಊಟ ಮಾಡುವುದು, ಮಲಗುವುದು ಅನಿವಾರ್ಯವಾಗಿತ್ತು. ರಾತ್ರಿ ವೇಳೆ ಕಳ್ಳರ ಭಯ, ವಿಷಜಂತುಗಳ ಕಾಟ, ಬಿಸಿಲು, ಚಳಿ, ಗಾಳಿ, ಮಳೆ ಎನ್ನದೆ ಹೀಗೆ ಸಂಕಷ್ಟದೊಳಗೆ ಗರ್ಭಿಣಿಯರು, ರೋಗಿಗಳನ್ನು ಆರೈಕೆ ಮಾಡುತ್ತಿದ್ದರು.
ತಾತ್ಕಾಲಿಕ ವ್ಯವಸ್ಥೆ:ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರೂ ಕೂಡ ಒಮ್ಮೆ ರೋಗಿಗಳ ಸಂಕಷ್ಟವನ್ನು ಕಂಡು ಹೆರಿಗೆ ವಾರ್ಡ್‌ಗೆ ಹೊಂದಿಕೊಂಡ ಗೋಡೆಗಳಿಗೆ ಕಬ್ಬಿಣದ ಶೀಟ್‌ಗಳನ್ನು ಅಳವಡಿಸಿ ನೆರಳಾಗುವಂತೆ ಮಾಡಿದ್ದರು. ಅದರಿಂದ ಆಸ್ಪತ್ರೆಗೆ ಬರುವವರಿಗೆ ಹೆಚ್ಚಿನ ಅನುಕೂಲವಾಗಿರಲಿಲ್ಲ. ಶೌಚಾಲಯ, ಮೂತ್ರಾಲಯಕ್ಕೆಲ್ಲಾ ಆಸ್ಪತ್ರೆಗೆ ಬರುವವರು ಅದರಲ್ಲೂ ಮಹಿಳೆಯರ ಪರದಾಟ ಹೇಳತೀರದಾಗಿತ್ತು. ಹಲವು ದಶಕಗಳಿಂದ ಆಸರೆಗಾಗಿ ಜನರು ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿದ್ದರೂ ಮಿಮ್ಸ್ ಕಣ್ಣಿದ್ದೂ ಕುರುಡಾಗಿತ್ತು. ಜನಪ್ರತಿನಿಧಿಗಳು ಅತ್ತ ತಿರುಗಿಯೂ ನೋಡಿರಲಿಲ್ಲ.
ಸಂಕಷ್ಟ ಕಣ್ಣಾರೆ ಕಂಡ ಜಿಲ್ಲಾಧಿಕಾರಿ:ಒಮ್ಮೆ ಅಪಘಾತದಲ್ಲಿ ಗಾಯಗೊಂಡವರನ್ನು ನೋಡಲು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗ ಆಶ್ರಯಕ್ಕಾಗಿ ಮಹಿಳೆಯರು ಪರದಾಡುತ್ತಿರುವುದನ್ನು ಕಣ್ಣಾರೆ ಕಂಡರು. ಅವ್ಯವಸ್ಥೆ ಹಾಗೂ ಅಸುರಕ್ಷತೆಯಲ್ಲಿ ಇರುವುದರನ್ನು ಕಂಡು ಜಿಲ್ಲಾಧಿಕಾರಿಯವರ ಮನಕರಗಿತು. ಆಗ ರೂಪುಗೊಂಡಿದ್ದೇ ಆರೋಗ್ಯಧಾಮ ಯೋಜನೆ.
ಒಂದು ಆಸರೆಗಾಗಿ ಜನರು ಅದ್ವಾನಪಡುತ್ತಿರುವುದನ್ನು ಕಂಡಿದ್ದ ಜಿಲ್ಲಾಧಿಕಾರಿಗಳು ಸರ್ಕಾರ ನೆರವಿಗಾಗಿ ಕಾದು ಕೂರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಧಾಮ ಸಮಿತಿಯನ್ನು ರಚಿಸಿದರು. ಖಾಸಗಿ ಸಂಸ್ಥೆಗಳು ಮತ್ತು ಸಿಎಸ್‌ಆರ್ ಅನುದಾನದಿಂದ ೩೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಕ್ರಿಯಾಯೋಜನೆ ಪಡೆದು ಆರೋಗ್ಯ ಧಾಮವನ್ನು ಕೇವಲ ಏಳೆಂಟು ತಿಂಗಳಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.ಸದ್ಯಕ್ಕೆ ನೆಲ ಅಂತಸ್ತಿನ ಮಹಡಿಯನ್ನು ಪೂರ್ಣಗೊಳಿಸಲಾಗಿದೆ. ಮೇಲಂತಸ್ತಿನ ಮಹಡಿ ನಿರ್ಮಾಣಕ್ಕೆ ೨೫ ಲಕ್ಷ ರು. ವೆಚ್ಚದಲ್ಲಿ ಯೋಜನೆ ಸಿದ್ಧಗೊಂಡಿದೆ. ತಾವಿರುವಾಗಲೇ ಅದನ್ನೂ ಪೂರ್ಣಗೊಳಿಸುವ ವಿಶ್ವಾಸ ಜಿಲ್ಲಾಧಿಕಾರಿ ಡಾ.ಕುಮಾರ ಅವರದ್ದಾಗಿದೆ.ಮಿಮ್ಸ್ ಆಸ್ಪತ್ರೆಗೆ ಹಳ್ಳಿಯಿಂದ ಬರುವ ಜನರೇ ಹೆಚ್ಚಾಗಿದ್ದಾರೆ. ಅವರು ನೆಮ್ಮದಿಯಿಂದ ಊಟ ಮಾಡುವುದಕ್ಕೆ, ವಿಶ್ರಾಂತಿ ಪಡೆಯುವುದಕ್ಕೂ ಪರದಾಡುವುದನ್ನು ಕಣ್ಣಾರೆ ನೋಡಿದ್ದೆ. ಇವರಿಗೊಂದು ನೆಮ್ಮದಿಯ ತಾಣವಾಗಿ ಆರೋಗ್ಯ ಧಾಮ ನಿರ್ಮಿಸಲು ಸಂಕಲ್ಪ ಮಾಡಿದೆ. ಅದೀಗ ಪೂರ್ಣಗೊಂಡು ಎಲ್ಲರಿಗೂ ನೆಮ್ಮದಿಯ ನೆಲೆ ದೊರಕಿದೆ.
- ಡಾ.ಕುಮಾರ, ಜಿಲ್ಲಾಧಿಕಾರಿ