ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ, ಹೆಚ್ಚಿನ ಮಾಂಸ ಮತ್ತು ಉಣ್ಣೆ ಉತ್ಪಾದನೆಯಾಗುವ ತಳಿ ಸಂವರ್ಧನೆ ಮಾಡಲು ತಾಲೂಕಿನ ಗುತ್ತಲ ಸಮೀಪದದಲ್ಲಿ ಸ್ಥಾಪಿಸಿರುವ ಕುರಿ ಸಂವರ್ಧನಾ ಕೇಂದ್ರ ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ.
ಹಾವೇರಿ: ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ, ಹೆಚ್ಚಿನ ಮಾಂಸ ಮತ್ತು ಉಣ್ಣೆ ಉತ್ಪಾದನೆಯಾಗುವ ತಳಿ ಸಂವರ್ಧನೆ ಮಾಡಲು ತಾಲೂಕಿನ ಗುತ್ತಲ ಸಮೀಪದದಲ್ಲಿ ಸ್ಥಾಪಿಸಿರುವ ಕುರಿ ಸಂವರ್ಧನಾ ಕೇಂದ್ರ ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ. ಇಲ್ಲಿ ಬೆಳೆದಿದ್ದ ಹತ್ತಾರು ಬೃಹತ್ ಬೇವಿನ ಮರ, ಕುರಿಗಳು ರಾತ್ರೋರಾತ್ರಿ ಮಾಯವಾಗುತ್ತಿವೆ.ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ರಾಜ್ಯದಲ್ಲಿ ಕೇವಲ ೫ ಕುರಿ ಸಂವರ್ಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅದರ ಅಡಿಯಲ್ಲಿರುವ ಗುತ್ತಲ ಸಮೀಪದ ಕುರಿ ಸಂವರ್ಧನಾ ಕೇಂದ್ರವೂ ಒಂದಾಗಿದೆ. ಇಲ್ಲಿಯ ಕೇಂದ್ರದಲ್ಲಿ ೨೯೪ ಎಕರೆ ವಿಶಾಲ ಜಾಗೆ ಇದೆ. ಸ್ಥಳೀಯ ಕುರಿ, ಮೇಕೆ ತಳಿ ಸಂವರ್ಧನೆ ಹಾಗೂ ತಳಿ ಸಂವರ್ಧನೆಗೆ ಟಗರುಗಳ ಪೂರೈಕೆ, ಕುರಿಗಾರರಿಗೆ ಮೇವು ಅಭಿವೃದ್ಧಿ ತರಬೇತಿ, ಮೇವು ಬೆಳೆಯಲು ನೂರಾರು ಎಕರೆ ಜಾಗೆ, ವೈಜ್ಞಾನಿಕ ಕುರಿ ಸಾಕಾಣಿಕೆಯಲ್ಲಿ ತರಬೇತಿ ಕಾರ್ಯಕ್ರಮ, ಸಾವಿರಾರು ಕುರಿಗಳನ್ನು ಸಾಕಿ, ಸಲುಹಿ ತಳಿ ಅಭಿವೃದ್ಧಿಗೆ ವಿಫುಲವಾದ ಅವಕಾಶಗಳಿವೆ. ಆದರೆ, ಈ ಕೇಂದ್ರದಲ್ಲಿ ನಿಗಮದ ಯಾವುದೇ ಕಾರ್ಯಚಟುವಟಿಕೆಗಳು ನಡೆಯುತ್ತಿಲ್ಲ, ಹೀಗಾಗಿ ಈ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಕುರಿಗಾರರಿಗೆ ಇದರಿಂದ ಏನೂ ಪ್ರಯೋಜನ ಇಲ್ಲದಂತಾಗಿದೆ.
ಕುರಿಗಳೂ ಅಭಿವೃದ್ಧಿ ಆಗಿಲ್ಲ: ಈ ಕುರಿ ಸಂವರ್ಧನಾ ಕೇಂದ್ರದಲ್ಲಿ ಸಾವಿರಾರು ಕುರಿ ಸಾಕಾಣಿಕೆ ಮಾಡಲು ಶೆಡ್ ನಿರ್ಮಿಸಲಾಗಿದೆ. ಮೇಯಿಸಲು ನೂರಾರು ಎಕರೆ ಜಾಗೆ ಇದೆ. ಮೇವು ಬೆಳೆದುಕೊಳ್ಳಲು ಜಮೀನು ಇದೆ. ಆದರೆ, ಇಲ್ಲಿ ವರ್ಷದಿಂದ ವರ್ಷಕ್ಕೆ ಕುರಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ. ಕೇಂದ್ರದಲ್ಲಿ ೫೦೦ಕ್ಕೂ ಹೆಚ್ಚು ಕುರಿಗಳಿದ್ದವು. ೨೦೨೦ರಲ್ಲಿ ೩೮೨, ೨೦೨೧ರಲ್ಲಿ ೩೪೪, ೨೦೨೨ರಲ್ಲಿ ೨೮೬, ೨೦೨೩ರಲ್ಲಿ ೨೬೮ ಕುರಿಗಳಿದ್ದವು. ಈ ವರ್ಷ ಕೇವಲ ೨೨೦ ಕುರಿಗಳಿವೆ ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದು ಈ ಭಾಗದಲ್ಲಿ ಒಬ್ಬ ಸಾಮಾನ್ಯ ರೈತ ಕೂಡ ಇಷ್ಟು ಸಂಖ್ಯೆಯ ಕುರಿಗಳನ್ನು ಸಾಕಣೆ ಮಾಡುತ್ತಾನೆ. ಆದರೆ, ಕುರಿ ಸಂವರ್ಧನೆಗೆಂದೇ ಸ್ಥಾಪಿಸಿದ್ದರೂ ಇಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕುರಿ ಇರುವುದು ಕೇಂದ್ರದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಉದಾಹರಣೆಯಾಗಿದೆ.
ಕುರಿಗಳ ಸಾವು: ತಳಿ ಸಂವರ್ಧನೆಗಾಗಿ ರೈತರಿಗೆ ಟಗರುಗಳನ್ನು ಹಂಚುವುದೇ ಈ ಕೇಂದ್ರದ ಮೂಲ ಉದ್ದೇಶ. ಆದರೆ, ಕಳೆದ ಐದಾರು ವರ್ಷಗಳಿಂದ ರೈತರಿಗೆ ಒಂದೂ ಟಗರು ಹಂಚಿಲ್ಲ, ಕುರಿಗಳಿಗೆ ಕಾಲಕಾಲಕ್ಕೆ ಲಸಿಕೆ, ಚಿಕಿತ್ಸೆ ನೀಡಲು ಸಹಾಯಕ ನಿರ್ದೇಶಕರು, ವೈದ್ಯರು, ಡಿ ದರ್ಜೆ ನೌಕರರು ಇದ್ದಾರೆ. ಆದರೂ ಕೇಂದ್ರದಲ್ಲಿನ ನೂರಾರು ಕುರಿಗಳು ಮೃತಪಟ್ಟಿವೆ. ೨೦೨೦ರಲ್ಲಿ ೬೮, ೨೦೨೧ರಲ್ಲಿ ೧೧೯, ೨೦೨೨ರಲ್ಲಿ ೮೪, ೨೦೨೩ರಲ್ಲಿ ೭೯ ಕುರಿಗಳು ಮೃತಪಟ್ಟಿವೆ ಎಂದು ಕೇಂದ್ರದ ಅಧಿಕಾರಿಗಳು ನಿಗಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಇದೇ ಈ ಕೇಂದ್ರದಲ್ಲಿನ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ಬೃಹತ್ ಮರಗಳು ಮಾಯ:294 ಎಕರೆ ಪ್ರದೇಶದಲ್ಲಿದ್ದ ಮರಗಳು ಕಾಲಕ್ರಮೇಣ ಮಾಯವಾಗಿವೆ. ಸಂವರ್ಧನಾ ಕೇಂದ್ರದ ಕಚೇರಿ ಆಸುಪಾಸಿನಲ್ಲಿದ್ದ ಹತ್ತಾರು ಬೃಹತ್ ಬೇವಿನಮರಗಳು ಇತ್ತೀಚೆಗೆ ರಾತ್ರೋರಾತ್ರಿ ಮಾಯವಾಗಿವೆ. ಕೇಂದ್ರದ ಕಾವಲಿಗೆ ಇಬ್ಬರು ಕಾವಲುಗಾರರಿದ್ದಾರೆ. ಆದರೂ ರಾತ್ರಿವೇಳೆ ಬೃಹತ್ ಮರಗಳನ್ನು ಧರೆಗುರುಳಿಸಿ ಬೇರುಗಳ ಮೇಲೆ ಮಣ್ಣು ಹಾಕಿ ಮುಚ್ಚಿಹಾಕುವ ಕೆಲಸ ನಡೆದಿದೆ. ಅರಣ್ಯ ಇಲಾಖೆಯ ಗಮನಕ್ಕೆ ತಾರದೇ ಮರಗಳನ್ನು ಮಾರಾಟ ಮಾಡಲಾಗಿದೆ. ಕುರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಸತ್ತಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಕೇಂದ್ರದ ಸಹಾಯಕ ನಿರ್ದೇಶಕರೂ ಕಚೇರಿಗೆ ಸರಿಯಾಗಿ ಬರುವುದಿಲ್ಲ, ಇಲ್ಲಿ ಅಕ್ರಮ ಚಟುವಟಿಕೆಗಳೇ ಹೆಚ್ಚು ನಡೆಯುತ್ತಿವೆ ಎಂಬ ದೂರುಗಳಿದ್ದು, ಕೂಡಲೇ ಸರ್ಕಾರ, ನಿಗಮದ ಅಧಿಕಾರಿಗಳು ಇತ್ತ ಚಿತ್ತ ಹರಿಸಿ ಕುರಿ ಸಾಗಾಣಿಕೆಗೆ ಅನುಕೂಲ ಆಗುವ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂಬುದು ಕುರಿಗಾರರ ಆಗ್ರಹವಾಗಿದೆ.ಗುತ್ತಲದ ಕುರಿ ಸಂವರ್ಧನಾ ಕೇಂದ್ರ ಹಾಗೂ ಗೋಶಾಲೆ ಸೇರಿ ಎರಡು ಕಡೆ ನನಗೆ ಚಾರ್ಜ್ ಕೊಟ್ಟಿದ್ದಾರೆ. ಸಂವರ್ಧನಾ ಕೇಂದ್ರದ್ದು ವಿಶಾಲವಾದ ಜಾಗೆ. ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಕೇಂದ್ರದಲ್ಲಿನ ಮರ ಕಡಿದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಈ ಕುರಿತು ಪೊಲೀಸರಿಗೆ ದೂರು ದಾಖಲಿಸುತ್ತೇನೆ. ನನ್ನ ಅವಧಿಯಲ್ಲಿ ೭೫ ಕುರಿಗಳನ್ನು ಮಾರಾಟ ಮಾಡಿ ಸರ್ಕಾರಕ್ಕೆ ಹಣ ಪಾವತಿಸಿದ್ದೇನೆ ಎಂದು ಕೇಂದ್ರದ ಸಹಾಯಕ ನಿರ್ದೇಶಕ ಡಾ. ಸಿ.ಯು. ಗೋಣೆಪ್ಪನವರ ಹೇಳಿದರು.