ಅಂಕೋಲಾ: ದಿನಕರ ದೇಸಾಯಿ ಗ್ರಾಮೀಣ ಪ್ರದೇಶದ ಬಡವರಿಗಾಗಿ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಘನ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ರೂಪಿಸಿದರು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು.ಅವರು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ ಹಾಗೂ ಕಸಾಪ ಅಂಕೋಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜಿ.ಸಿ. ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಣ ತಜ್ಞ, ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿಯವರ 116ನೇ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಜಿಲ್ಲೆಯ ಅನೇಕ ಪ್ರತಿಭೆಗಳು ಪ್ರಪಂಚದಾದ್ಯಂತ ಉನ್ನತ ಸ್ಥಾನದಲ್ಲಿದ್ದಾರೆ. ದಿನಕರರ ಈ ಪ್ರೇರಣೆಯೇ ತಾಲೂಕಿನಲ್ಲಿ ಹಲವು ಹೈಸ್ಕೂಲುಗಳು ಪ್ರಾರಂಭವಾಗಲು ಕಾರಣವಾಯಿತು ಎಂದರು.ಕಸಾಪದ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ದಿನಕರ ದೇಸಾಯಿ ಅವರನ್ನು ಇಡೀ ಜಿಲ್ಲೆಯ ಜನ ನೆನಪಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಅವರಂತಹ ಧೀಮಂತ ವ್ಯಕ್ತಿ ಬಹುಶಃ ಬೇರೆ ಯಾರೂ ಇರಲಿಕ್ಕಿಲ್ಲ. ಕಸಾಪದಿಂದ ಜಿಲ್ಲೆಯ 11 ತಾಲೂಕಿನಲ್ಲೂ ದಿನಕರ ದೇಸಾಯಿಯವರ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಸಾಹಿತಿ ಪ್ರೊ.ಮೋಹನ ಹಬ್ಬು ಮಾತನಾಡಿ, ಅತ್ಯಂತ ಬಡತನದ ಕಾಲದಲ್ಲಿ ದಿನಕರ ದೇಸಾಯಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಕಾರಣಕ್ಕಾಗಿ ಇಂದು ಅಂಕೋಲಾ ತಾಲೂಕು ಶೈಕ್ಷಣಿಕ ಶ್ರೀಮಂತಿಕೆ ಹೊಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಮಾತನಾಡಿ, ದಿನಕರರು ಅಪ್ಪಟ ಸಮಾಜವಾದಿಯಾಗಿದ್ದರು. ಲಾಭದಾಯಕ ಹುದ್ದೆಗಳಿಗೆ ಆಸೆಪಡದೆ ಸಮಾಜ ಸೇವೆಯನ್ನೇ ಧ್ಯೇಯವಾಗಿಟ್ಟುಕೊಂಡಿದ್ದರು ಎಂದರು.
ದಿನಕರ ದೇಸಾಯಿ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಚುಟುಕು ವಾಚನ ಸ್ಪರ್ಧೆಯಲ್ಲಿ ಪದವಿ ವಿಭಾಗದಲ್ಲಿ ಭಾವನಾ ನಾಯಕ (ಪ್ರಥಮ) ಭಾಗ್ಯಶ್ರೀ ನಾಯಕ, ಕೀರ್ತಿ ಎಸ್ ಗೌಡ (ದ್ವಿತೀಯ), ಸ್ನೇಹಾ ಎನ್. ನಾಯ್ಕ (ತೃತೀಯ) ಬಹುಮಾನ ಪಡೆದರು. ಪಿಯುಸಿ ವಿಭಾಗದಲ್ಲಿ ಶ್ರೀನಿಧಿ ತಾಂಡೇಲ (ಪ್ರಥಮ), ಅಶ್ವಿನಿ ನಾಯಕ ಮತ್ತು ಸೋನಾಲಿ ಜೊಗಳೇಕರ (ದ್ವಿತೀಯ), ಪ್ರಥ್ವಿ ಕುಡ್ತಾಳಕರ (ತೃತೀಯ) ಬಹುಮಾನ ಪಡೆದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಹೊನ್ನಮ್ಮ ನಾಯಕ, ಮಹಾಂತೇಶ ರೇವಡಿ, ಜಗದೀಶ ನಾಯಕ ಹೊಸ್ಕೇರಿ, ಲಲಿತಾ ನಾಯಕ, ಡಾ.ಪುಷ್ಪಾ ನಾಯಕ, ತಿಮ್ಮಣ್ಣಭಟ್, ನಾಗೇಂದ್ರ ನಾಯಕ ತೊರ್ಕೆ, ಜೆ.ಪ್ರೇಮಾನಂದ, ಮೋಹನ ಶೆಟ್ಟಿ ಹುಬ್ಬಳ್ಳಿ ಇದ್ದರು.
ವಿದ್ಯಾರ್ಥಿಗಳಾದ ಶ್ರೀನಿಧಿ ತಾಂಡೇಲ, ಕೀರ್ತಿ ಗೌಡ ದಿನಕರ ದೇಸಾಯಿಯವರ ಚುಟುಕು ವಾಚಿಸಿದರು. ನಿವೃತ್ತ ಶಿಕ್ಷಕ ಜಿ.ಆರ್.ನಾಯ್ಕ ಕವನ ವಾಚಿಸಿದರು. ಆರಂಭದಲ್ಲಿ ಅತಿಥಿ ಗಣ್ಯರಿಂದ ದಿನಕರ ದೇಸಾಯಿ ಪುತ್ಥಳಿಗೆ ಮಾಲಾರ್ಪಣೆ, ಪುಷ್ಪಾರ್ಚನೆಗೈಯಲಾಯಿತು.ಗ್ರಂಥಪಾಲಕ ಡಾ.ನಂಜುಂಡಯ್ಯ ಸ್ವಾಗತಿಸಿದರು. ಭಾಗ್ಯಶ್ರೀ ನಾಯಕ ವಂದಿಸಿದರು. ಭಾವನಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು.