ಕನ್ನಡಪ್ರಭ ವಾರ್ತೆ ತುಮಕೂರು
ಉದ್ಯೋಗ ಮೇಳಗಳಿಂದ ಕಂಪನಿಗಳಿಗೆ ಕೌಶಲ್ಯಭರಿತ ನೌಕರರು ದೊರೆತರೆ, ದುಡಿಯಬೇಕೆಂಬ ಹಂಬಲ ಇರುವ ವ್ಯಕ್ತಿಗಳಿಗೆ ಉದ್ಯೋಗ ದೊರೆತಂತಾಗುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.ನಗರದ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಕ್ಕಲಿಗ ಯುವ ಬ್ರಿಗೇಡ್, ಎನ್ಆರ್‌ಐ, ಒಕ್ಕಲಿಗ ಬ್ರಿಗೇಡ್ ವತಿಯಿಂದ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗಮೇಳ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಇದೊಂದು ಉತ್ತಮ ವೇದಿಕೆ ಎಂದರು.
ಅಭ್ಯರ್ಥಿಗಳಿಗೆ ಶಿಕ್ಷಣವಷ್ಟೇ ಮುಖ್ಯವಲ್ಲ. ನಿಮ್ಮಲ್ಲಿರುವ ಮಾನವೀಯ ಗುಣಗಳು, ಸಾಮಾನ್ಯ ಜ್ಞಾನ ಹಾಗೂ ನಿಮ್ಮ ಸಾಮಾಜಿಕ ನಡವಳಿಕೆಗಳು ಸಹ ಉದ್ಯೋಗ ನೀಡಲು ಸಹಕಾರಿಯಾಗಿರುತ್ತದೆ. ಕಮ್ಯುನಿಕೇಷನ್ ಸ್ಕಿಲ್ ಕೂಡ ಮುಖ್ಯ ವಾಗುತ್ತದೆ ಎಂದರು.ಇಂದು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಒಂದು ಹುದ್ದೆಗೆ ಸಾವಿರಾರು ಜನರು ಅರ್ಜಿ ಸಲ್ಲಿಸುತ್ತಿರುವುದನ್ನು ಕಾಣಬಹುದು. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಪ್ರವೇಶ ಪರೀಕ್ಷೆ ನಡೆಯುತ್ತಿದ್ದು, ಲಕ್ಷಾಂತರ ಜನರು ಪರೀಕ್ಷೆ ಬರೆಯುತ್ತಿದ್ದಾರೆ. ಸ್ವಾವಲಂಬಿಗಳಾಗಿ ಬದುಕಲು ಇಂತಹದ್ದೇ ಹುದ್ದೆ ಬೇಕು ಅಂತಿಲ್ಲ. ಆದರೆ ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಮುಖ್ಯ. ಕೃಷಿಯ ಕಡೆಗೆ ಯಾರು ಸಹ ತಿರುಗಿಯೂ ನೋಡುತ್ತಿಲ್ಲ. ಕೊರೊನ ಸಂದರ್ಭದಲ್ಲಿ ಕೆಲವರು ಕೃಷಿಯ ಕಡೆಗೆ ಮುಖ ಮಾಡಿದ್ದರು. ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಸಿಕ್ಕ ಕೆಲಸವನ್ನು ಮಾಡಿ. ಕೆಲಸಕ್ಕೆ ಸೇರಿದ ನಂತರ ಬಿಡುವ ಕೆಲಸ ಆಗಬಾರದು. ಸಂಸ್ಥೆ ಮತ್ತು ಉದ್ಯೋಗಿ ಇಬ್ಬರ ನಡುವೆ ಬಿಡಿಸಲಾರದ ಸಂಬಂಧವಿದೆ ಎಂದು ಸ್ವಾಮೀಜಿ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಇಸ್ಕಾನ್‌ನ ಉಪಾಧ್ಯಕ್ಷ ಶ್ರೀಭಕ್ತ ನಂದಾ ನಂದಾನ ಪ್ರಭು ಮಾತನಾಡಿ, ಕೌಶಲ್ಯ ಮತ್ತು ಸ್ವಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಒಕ್ಕಲಿಗ ಯುವ ಬ್ರಿಗೇಡ್, ಎನ್ಅರ್‌ಐ, ಒಕ್ಕಲಿಗರ ಬ್ರಿಗೇಡ್ ಹಮ್ಮಿಕೊಂಡಿರುವ ಉದ್ಯೋಗ ಮೇಳ ದುಡಿಯುವ ಕೈಗಳಿಗೆ ಕೆಲಸ ನೀಡಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಅಗಿಂದಾಗ್ಗೆ ಜರುಗುವುದರಿಂದ ಯುವಜನರು ದುಡಿಯವಂತಾಗಲು ಪ್ರೇರೆಪಿಸಿದಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಉದ್ಯೋಗ ಮೇಳದ ಅವಶ್ಯಕತೆ ಕುರಿತಂತೆ ಒಕ್ಕಲಿಗ ಯುವ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಶಂಕರಲಿಂಗೇಗೌಡ, ಕಾರ್ಮಿಕ ಇಲಾಖೆಯ ಆಯುಕ್ತರಾದ ಐಎಎಸ್ ಅಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಇನ್‌ಸ್ಟಿಟ್ಯೂಟ್ ಅಫ್ ಯೂರಿಯಾಲಜಿ ಸ್ಥಾಪಕ ನಿರ್ದೇಶಕ ಡಾ.ಜಿ.ಕೆ. ವೆಂಕಟೇಶ್, ಸುರೇಶ್, ಯುಎಸ್‌ಎ ಕೌನ್ಸಿಲರ್ ಕಿರಣ್ ಅಗ್ರಹಾರ, ಮುರಳೀಧರ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸುಮಾರು ೪೦ಕ್ಕೂ ಹೆಚ್ಚು ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು.