ಸುರೇಶ್ ಸೋಲಿನ ನಡುವೆಯೂ ‘ಕೈ’ ಮತಗಳಿಕೆ ಏರಿಕೆ!

KannadaprabhaNewsNetwork | Published : Jun 6, 2024 12:32 AM

ಸಾರಾಂಶ

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ೯೬,೫೯೨ ಪಡೆದು ಜಯಶೀಲರಾಗಿದ್ದರು. ಇನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ೮೦,೬೭೭ ಪಡೆದಿದ್ದರೆ, ಕಾಂಗ್ರೆಸ್‌ನ ಎಸ್.ಗಂಗಾಧರ್ ೧೫,೭೩೪ ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್ ಸೋಲು ಅನುಭವಿಸಿದರೂ ಸಹ ಚನ್ನಪಟ್ಟಣದಲ್ಲಿ ಅವರು ಪಡೆದಿರುವ ಮತಗಳು ತಾಲೂಕು ಕಾಂಗ್ರೆಸ್ ಮಟ್ಟಿಗೆ ಸ್ವಲ್ಪ ಸಮಾಧಾನ ತಂದಿದೆ. ಇನ್ನು ಜೆಡಿಎಸ್-ಬಿಜೆಪಿ ಮೈತ್ರಿಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಲಭಿಸದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಈ ಬಾರಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಕಳೆದ ಹಲವು ವರ್ಷಗಳಿಂದ ಸಂಘಟನೆಯ ಕೊರತೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸೊರಗಿದ್ದರೆ, ಮೈತ್ರಿಯಿಂದ ಬಿಜೆಪಿ-ಜೆಡಿಎಸ್ ಬಲ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಾಗಿತ್ತು. ಆದರೆ, ಲೋಕಸಭೆ ಚುನಾವಣೆಯ ಮತಗಳಿಕೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದರೆ, ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಬಿದ್ದಿರುವ ಮತಗಳು ಕುರಿತು ಮೈತ್ರಿ ಪಕ್ಷದ ನಾಯಕರು ಸಮಾಧಾನ ಪಡುವಂತಿಲ್ಲ ಎನ್ನುವಂತಿದೆ. ೮೫ ಸಾವಿರ ಮತ ಪಡೆದ ಕಾಂಗ್ರೆಸ್: ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ೯೬,೫೯೨ ಪಡೆದು ಜಯಶೀಲರಾಗಿದ್ದರು. ಇನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ೮೦,೬೭೭ ಪಡೆದಿದ್ದರೆ, ಕಾಂಗ್ರೆಸ್‌ನ ಎಸ್.ಗಂಗಾಧರ್ ೧೫,೭೩೪ ಮತ ಪಡೆದು ಠೇವಣಿ ಕಳೆದುಕೊಂಡಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ೧,೦೬,೯೭೨ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚನ್ನಪಟ್ಟಣ ಕ್ಷೇತ್ರದಲ್ಲಿ ೮೫,೩೫೭ ಮತಗಳು ಚಲಾವಣೆಯಾಗಿದೆ. ಜೆಡಿಎಸ್-ಬಿಜೆಪಿ ಎರಡು ಪಕ್ಷಗಳ ಅಬ್ಬರದ ನಡುವೆಯೂ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಇಷ್ಟೊಂದು ಮತಗಳನ್ನು ಪಡೆದಿರುವುದು ಕಾಂಗ್ರೆಸ್ ಪಾಲಿಗೆ ತೃಪ್ತಿ ತಂದಿದ್ದರೆ, ಮೈತ್ರಿ ನಾಯಕರಿಗೆ ಶಾಕ್ ನೀಡಿದೆ. ನಡೆಯದ ಮೈತ್ರಿ ಕಮಾಲ್ !: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮೈತ್ರಿ ಪಕ್ಷದ ಬಲ ಹೆಚ್ಚಾಗಿತ್ತು. ದಳಪತಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸೈನಿಕ ಸಿ.ಪಿ.ಯೋಗೇಶ್ವರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ನಾಗಾಲೋಟಕ್ಕೆ ಕಡಿವಾಣ ಹಾಕಲೇಬೇಕು ಎಂದು ನಿರ್ಧರಿಸಿದ್ದರು. ಮೈತ್ರಿಯ ಕಾರಣಕ್ಕೆ ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್‌ಗೆ ಕ್ಷೇತ್ರದಲ್ಲಿ ಸುಮಾರು ೪೦ ರಿಂದ ೫೦ ಸಾವಿರ ಲೀಡ್ ದೊರೆಯಲಿದೆ ಎಂದು ಎರಡು ಪಕ್ಷಗಳ ಮುಖಂಡರು ನಿರೀಕ್ಷಿಸಿದ್ದರು. ಆದರೆ, ಮೈತ್ರಿ ನಾಯಕರ ಲೆಕ್ಕಾಚಾರ ಹುಸಿಯಾಗಿದ್ದು, ಮಂಜುನಾಥ್ ೨೧,೬೧೪ ಮತಗಳ ಲೀಡ್‌ಗೆ ತೃಪ್ತಿ ಪಡುವಂತಾಗಿದೆ. ಚನ್ನಪಟ್ಟಣವನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಕೆಸು: ಲೋಕಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಂಸದ ಎನ್ನಿಸಿದ್ದ ಡಿ.ಕೆ.ಸುರೇಶ್ ಮೂರು ಗೆಲುವಿನಲ್ಲೂ ಚನ್ನಪಟ್ಟಣದಲ್ಲಿ ಅವರಿಗೆ ಅತಿ ಹೆಚ್ಚಿನ ಲೀಡ್ ದೊರೆತಿತ್ತು. ಮೈತ್ರಿ ಕಾರಣಕ್ಕೆ ಇಲ್ಲಿ ಮತಗಳಿಕೆ ಕಡಿಮೆಯಾಗಬಹುದು ಎಂದು ಅಂದಾಜಿಸಿದ್ದ ಡಿ.ಕೆ.ಸಹೋದರರು ಚನ್ನಪಟ್ಟಣವನ್ನು ಗಂಭೀರವಾಗಿ ಪರಿಗಣಿಸಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ ರಘುನಂದನ್ ರಾಮಣ್ಣ ಅವರಿಗೆ ಬಿಎಂಐಸಿಎಪಿಎ ಅಧ್ಯಕ್ಷ ಗಾದಿ ನೀಡುವ ಜತೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಹೊಣೆ ವಹಿಸಿದ್ದರು. ಅವರ ಜತೆ ಮುಖಂಡರಾದ ದುಂತೂರು ವಿಶ್ವನಾಥ್ ಅವರನ್ನು ಉಸ್ತುವಾರಿಯಾಗಿ ನೇಮಿಸಿದ್ದು, ಕ್ಷೇತ್ರದ ಕಡೆ ವಿಶೇಷ ಗಮನಹರಿಸಿದ್ದರು. ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕಾರ್ಯವನ್ನು ಕಾಂಗ್ರೆಸ್ ಚುರುಕುಗೊಳಿಸಿತ್ತು. ಇದರ ಜತೆಗೆ ಆಪರೇಷನ್ ಹಸ್ತದ ಮೂಲಕ ವಿಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಕಾರ್ಯಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯತಂತ್ರಗಳು ಬಹುತೇಕ ಫಲ ನೀಡಿದ್ದು, ಸುರೇಶ್ ಸೋಲಿನ ನಡುವೆಯೂ ಕ್ಷೇತ್ರದ ಮತಗಳಿಕೆ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ. ಮೂರು ಬಾರಿ ಕೈಹಿಡಿದಿದ್ದ ಬೊಂಬೆನಾಡು: ೨೦೧೩ರ ಲೋಕಸಭಾ ಉಪಚುನಾವಣೆ, ೨೦೧೪ ಹಾಗೂ ೨೦೧೯ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ಗೆ ಚನ್ನಪಟ್ಟಣದಲ್ಲಿ ಹೆಚ್ಚಿನ ಲೀಡ್ ಆಗಿತ್ತು. ೨೦೧೩ ಹಾಗೂ ೨೦೧೪ರಲ್ಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸುರೇಶ್ ಬೆನ್ನಿಗೆ ನಿಂತ ಕಾರಣಕ್ಕೆ ಕ್ಷೇತ್ರದಲ್ಲಿ ಲೀಡ್ ಆಗಿತ್ತು. ೨೦೧೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸುರೇಶ್‌ಗೆ ೨೬,೬೮೬ ಮತಗಳ ಲೀಡ್ ದೊರೆತಿತ್ತು. ಇನ್ನು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದು, ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಬೆನ್ನಿಗೆ ಜೆಡಿಎಸ್ ನಿಂತ ಪರಿಣಾಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ೩೭,೧೯೪ ಮತಗಳ ಲೀಡ್ ದೊರೆತಿತ್ತು. ಆದರೆ, ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆಯದಿದ್ದರೂ ಸಹ ಏಕಾಂಗಿಯಾಗಿಯೇ ಇಷ್ಟು ಪ್ರಮಾಣದಲ್ಲಿ ಮತಗಳನ್ನು ಪಡೆದಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಪುಟಿದೇಳುವ ವಿಶ್ವಾಸ ಮೂಡಿಸಿದೆ.ಕಳೆದ ಮೂರು ಚುನಾವಣೆಯ ಮತವಿವರಪಕ್ಷ,೨೦೧೪,೨೦೧೯,೨೦೨೪ ಕಾಂಗ್ರೆಸ್,೮೧,೨೨೪,೯೮,೩೫೦,೮೫,೩೫೭ಬಿಜೆಪಿ,೧೭,೦೧೮,೬೧,೧೫೬,೧,೦೬,೯೭೨ಜೆಡಿಎಸ್,೫೪,೫೩೮,-, -ಅಂತರ,೨೬,೬೮೬,೩೭,೧೯೪,೨೧,೬೧೪

Share this article