ಹದಗೆಟ್ಟ ಬೀರಿ-ದೇರಳಕಟ್ಟೆ ರಸ್ತೆ: ಇಲ್ಲಿ ಸಂಚಾರ ಸಂಚಕಾರ!

KannadaprabhaNewsNetwork |  
Published : Sep 13, 2025, 02:06 AM IST
ಹೊಂಡಗಳಿಂದ ತುಂಬಿರುವ ರಸ್ತೆಗೆ ಮಣ್ಣು, ಮರಳು ತುಂಬಿ ತಾತ್ಕಾಲಿಕ ತೇಪೆ ಹಾಕಿರುವುದು | Kannada Prabha

ಸಾರಾಂಶ

ಕೇರಳದಿಂದ ದೇರಳಕಟ್ಟೆ ಆಸ್ಪತ್ರೆಯನ್ನು ಆಶ್ರಯಿಸುವ ವಾಹನಗಳು ನಿರಂತರವಾಗಿ ಸಾಗುವ ರಸ್ತೆ ಬೀರಿ-ದೇರಳಕಟ್ಟೆ. ನಿತ್ಯ ಸಾವಿರಕ್ಕಿಂತ ಅಧಿಕ ವಾಹನಗಳು, ಪಾದಚಾರಿಗಳು, ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯಿಡೀ ಹೊಂಡಗಳಿಂದ ತುಂಬಿ ಯಮಸ್ವರೂಪ ಪಡೆದುಕೊಂಡಿದೆ.

ವಜ್ರ ಗುಜಾರನ್ ಉಳ್ಳಾಲ: ಕಾರಣಿಕ ಶ್ರೀ ಕ್ಷೇತ್ರ ಕೊಂಡಾಣ, ಮಾಡೂರು ಮಸೀದಿ, ಪನೀರು ಚರ್ಚೆ ಧಾರ್ಮಿಕ ಕೇಂದ್ರಗಳು ಒಂದೆಡೆಯಾದಲ್ಲಿ, ಸಂತ ಅಲೋಶಿಯಸ್‌, ನಿಟ್ಟೆ ಪಾನೀರು ಕ್ಯಾಂಪಸ್‌, ಅಸಿಸ್ಸಿ ಶಾಲೆ, ಮಾಡೂರು ಸರ್ಕಾರಿ ಶಾಲೆ ಹೀಗೆ ಶಿಕ್ಷಣ ಸಂಸ್ಥೆಗಳ ಇನ್ನೊಂದು ಸಾಲು. ಕೇರಳದಿಂದ ದೇರಳಕಟ್ಟೆ ಆಸ್ಪತ್ರೆಯನ್ನು ಆಶ್ರಯಿಸುವ ವಾಹನಗಳು ನಿರಂತರವಾಗಿ ಸಾಗುವ ರಸ್ತೆ ಬೀರಿ-ದೇರಳಕಟ್ಟೆ. ನಿತ್ಯ ಸಾವಿರಕ್ಕಿಂತ ಅಧಿಕ ವಾಹನಗಳು, ಪಾದಚಾರಿಗಳು, ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯಿಡೀ ಹೊಂಡಗಳಿಂದ ತುಂಬಿ ಯಮಸ್ವರೂಪ ಪಡೆದುಕೊಂಡಿದೆ. ಕೂಳೂರು, ನಂತೂರು ಪ್ರಕರಣಗಳಂತೆ ಈ ರಸ್ತೆಯಲ್ಲೂ ಜೀವಬಲಿಯಾಗುವ ಮುನ್ನ ಸಂಬಂಧಿಸಿದ ಇಲಾಖೆ ಶೀಘ್ರವೇ ಎಚ್ಚೆತ್ತುಕೊಳ್ಳಬೇಕಿದೆ. ಹೊಂಡಗಳಿಂದ ತುಂಬಿದ ರಸ್ತೆಯ ವೀಡಿಯೋ ಕೂಡಾ ವೈರಲ್‌ ಆಗಿ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದೆ.ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆ ದಟ್ಟ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ದಾರಿಯಂತೆ ಕಾರ್ಯಾಚರಿಸುತ್ತಿದೆ. ಹೆದ್ದಾರಿಯುದ್ದಕ್ಕೂ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಪ್ರತೀ ವರ್ಷವೂ ರಸ್ತೆಯಲ್ಲೇ ಹರಿದಾಡುತ್ತಿದೆ. ಪ್ರಸಕ್ತ ವರ್ಷದಲ್ಲಿಯೂ ಮಳೆ ಹೆಚ್ಚಾಗಿ ನೀರಿನ ಹರಿವು ಜಾಸ್ತಿಯಾಗಿ ಕಾಚಾರು, ಕಾಚಾರು ತಿರುವು, ಮಾಡೂರು, ದೇರಳಕಟ್ಟೆ, ಪಾನೀರು, ಮಡ್ಯಾರು ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗಳು ತುಂಬಿವೆ.ನಾವು ಸ್ಥಳೀಯಾಡಳಿತಕ್ಕೆ ಕೌನ್ಸಿಲರ್‌ ಗಳನ್ನು ಆಯ್ಕೆ ಮಾಡಿದ್ದೇವೆ. ಸ್ಥಳೀಯಾಡಳಿತಕ್ಕೆ ತೆರಿಗೆ ಪಾವತಿ ಮಾಡುತ್ತೇವೆ. ರಸ್ತೆ ಹೊಂಡಮಯವಾಗಿ ಅಪಾಯ ಆಹ್ವಾನಿಸುತ್ತಿರುವುದರಿಂದ ಕೋಟೆಕಾರು ಪಟ್ಟಣ ಪಂಚಾಯತ್‌ ಕೌನ್ಸಿಲರ್‌ ಗಳಿಗೆ ದೂರು ನೀಡಲು ಮುಂದಾದರೆ, ಲೋಕೋಪಯೋಗಿ ಇಲಾಖೆ ಅನ್ನುತ್ತಾ ಜವಾಬ್ದಾರಿ ತಪ್ಪಿಸುವ ಕೆಲಸಗಳಾಗುತ್ತಿವೆ ಎಂಬುದು ಟ್ರೋಲರ್‌ ಗಳ ಅಭಿಪ್ರಾಯ. ಸರಣಿ ಅಪಘಾತ:ಒಂದು ಹೊಂಡ ತಪ್ಪಿಸಲು ಹೋದರೆ ಮತ್ತೊಂದು ಹೊಂಡಕ್ಕೆ ಬೀಳುವುದು, ಎದುರಿನ ವಾಹನಗಳಿಗೆ ಡಿಕ್ಕಿ ಹೊಡೆಯುವ ಘಟನೆಗಳು ಇಲ್ಲಿ ನಿರಂತರವಾಗಿ ಆಗುತ್ತಿದೆ. ರಿಕ್ಷಾ ತುಂಬಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಅನೇರ ರಿಕ್ಷಾಗಳು ರಸ್ತೆಯಲ್ಲಿ ಸಂಚರಿಸುತ್ತಿರುತ್ತವೆ. ಕಾಚಾರು ತಿರುವು ಸಮೀಪ ಒಂದು ಇಂಚು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ‌ಒಂದು ಸಣ್ಣ ಗುಂಡಿ ತಪ್ಪಿಸಲು ಹೋಗಿ ಎದುರಿಗೆ ಇರುವ ದೊಡ್ಡ ಹೊಂಡಕ್ಕೆ ವಾಹನಗಳು ಉರುಳಿದ ಹಲವು ಘಟನೆಗಳಿಗೆ ಹೊಂಡಮಯ ರಸ್ತೆ ಸಾಕ್ಷಿಯಾಗಿದೆ.

ರಾಜಕಾಲುವೆಯ ತೊರೆಬೀರಿ ಜಂಕ್ಷನ್ ಮೂಲಕ ಮುಂದೆ ಸಾಗಿದರೆ ಕಾಚಾರು ಪ್ರದೇಶ ದಲ್ಲಿ ರಾಜ‌ಕಾಲುವೆ ಹಾದು ಹೋಗುತ್ತದೆ. ಇಲ್ಲಿ ಸಣ್ಣ ಸೇತುವೆಯೂ ಇದೆ. ಸೇತುವೆ ದುರಸ್ತಿ ಕಾರ್ಯ ಕೆಲವು ವರ್ಷಗಳ ಹಿಂದೆ ನಡೆಸಲಾಗಿತ್ತು. ಸೇತುವೆ ಸಮೀಪ ಖಾಸಗಿ ಜಾಗ, ಜಾಗದಲ್ಲಿ ತೋಟ, ಸಣ್ಣ ತೊರೆಯೂ ಹರಿದುಹೋಗುವುದು. ಇವೆಲ್ಲವೂ ೧೦ ಅಡಿ ಆಳದಿಂದ ರಸ್ತೆಗೆ ಗೋಚರಿಸುತ್ತದೆ. ಹೊಂಡ ತಪ್ಪಿಸುವ ಧಾವಂತದಲ್ಲಿ ವಾಹನ ಸವಾರರು ಸ್ವಲ್ಪ ತಪ್ಪಿದರೂ ಒಂದೋ ತೋಟ, ಇಲ್ಲವೇ ತೊರೆಯೊಳಗೆ ಬೀಳುವುದು ಖಚಿತ.ಶಿಕ್ಷಣ ಕಾಶಿ ಕೋಟೆಕಾರು

ಕೋಟೆಕಾರು ಪಟ್ಟಣ ಪಂಚಾಯಿತಿ ಶಿಕ್ಷಣ ಕಾಶಿ ಎಂದೇ ಪ್ರಸಿದ್ಧಿ. ನಾಲ್ಕು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಕಾರ್ಯಾಚರಿಸುತ್ತಿರುವುದರಿಂದ ಹೆಚ್ಚು ಆದಾಯ ಬರುವ ಪಟ್ಟಣ ಪಂಚಾಯಿತಿ ಆಗಿದೆ. ಪ್ರತಿ ವರ್ಷ ರು.೩ ಕೋಟಿ ಆದಾಯವನ್ನು ತೆರಿಗೆ ಮೂಲಕ ಪಡೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಕಡೆಗಣನೆ ವ್ಯಾಪಕ ಟೀಕಿಗೆ ಗುರಿಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಎ.೧೬, ಮೇ.೨೬, ಸೆ.೧೧ ರಂದು ಸ್ಥಳೀಯಾಡಳಿತ ಬೀರಿ -ದೇರಳಕಟ್ಟೆ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಯೂ ನೀಡಿರುವ ದೂರನ್ನು ಸ್ಥಳೀಯಾಡಳಿತ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿತ್ತು. ಪ್ರತಿ ಬಾರಿಯೂ ತೇಪೆ ಕಾಮಗಾರಿ ಮೂಲಕ ಇಲಾಖೆ ಸ್ಪಂದಿಸಿದೆ. ಆದರೆ ಈ ಬಾರಿ ತೀವ್ರ ಮಳೆಯಾಗಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

-ಮಾಲಿನಿ, ಕೋಟೆಕಾರು ಪ.ಪಂ. ಮುಖ್ಯಾಧಿಕಾರಿ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ