ಹದಗೆಟ್ಟ ಕೋಲಾರ- ಟೇಕಲ್‌ ರಸ್ತೆ ಸಂಚಾರಕ್ಕೆ ತೊಂದರೆ

KannadaprabhaNewsNetwork | Published : Aug 15, 2024 1:54 AM

ಸಾರಾಂಶ

ಕಳೆದ ಎರಡು ವರ್ಷಗಳಿಂದಲೂ ಕೋಲಾರ- ಟೇಕಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಜನಪ್ರತಿನಿಧಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಕಂದಕುಮಾರ್ ಬಿ.ಎಸ್

ಕನ್ನಡಪ್ರಭ ವಾರ್ತೆ ಕೋಲಾರ

ಕಳೆದ ಎರಡು ವರ್ಷಗಳಿಂದಲೂ ಕೋಲಾರ- ಟೇಕಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಜನಪ್ರತಿನಿಧಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎರಡು ವಿಧಾನಸಭಾ ಕ್ಷೇತ್ರ ಸಂಪರ್ಕಿಸುವ ಕೋಲಾರ- ಟೇಕಲ್ ರಸ್ತೆಯ ಅವ್ಯವಸ್ಥೆ ಗಮನಿಸಿದರೆ ಕೋಲಾರ ಮತ್ತು ಮಾಲೂರಿನ ಆಯಾ ಶಾಸಕರ ಕಾರ್ಯವೈಖರಿಯ ದರ್ಶನವಾಗುತ್ತದೆ. ಕೋಲಾರ- ಟೇಕಲ್ ನಡುವಿನ 18 ಕಿಮೀ ಪೈಕಿ 10 ಕಿಮೀ ರಸ್ತೆಯು ಕೋಲಾರ ಕ್ಷೇತ್ರಕ್ಕೆ ಸೇರುತ್ತದೆ. ಈ 10 ಕಿಮೀ ಉದ್ದಕ್ಕೂ ಮೊಣಕಾಲುದ್ದದ ತಗ್ಗುಗಳು ಸೃಷ್ಟಿಯಾಗಿ ಓಡಾಡಲು ತೊಂದರೆಯಾಗಿದೆ. ಮಾಲೂರು ಕ್ಷೇತ್ರಕ್ಕೆ ಸೇರಿದ ನಂತರದ ಎಂಟು ಕಿಮೀ ರಸ್ತೆ ಪರವಾಗಿಲ್ಲ ಎಂಬಂತಿದೆ.

ಕೋಲಾರದಿಂದ ಪಾರ್ಶ್ವಗಾನಹಳ್ಳಿ ಕ್ರಾಸ್‌ನ ಹತ್ತು ಕಿಮೀ ದೂರವನ್ನು ಕ್ರಮಿಸಲು ವಾಹನ ಚಾಲಕರು ಸರ್ಕಸ್ ಮಾಡಬೇಕು. ಜಿಲ್ಲಾ ಕೇಂದ್ರದಿಂದ ಛತ್ರಕೋಡಿಹಳ್ಳಿವರೆಗಿನ ೩ ಕಿಮೀ ಮತ್ತು ಕೋರಗೊಂಡಹಳ್ಳಿಯಿಂದ ಮುದುವತ್ತಿವರೆಗಿನ ಒಂದು ಕಿಮೀ ಬಿಟ್ಟರೆ ಆರು ಕಿಮೀ ವ್ಯಾಪ್ತಿಯಲ್ಲಿ ತಗ್ಗು ಗುಂಡಿಗಳನ್ನು ಹೊಂದಿರುವ ರಸ್ತೆಯು ವಾಹನ ಸವಾರರಿಗೆ ಸವಾಲಾಗಿದೆ.

ಅದರಲ್ಲೂ ಬೆಗ್ಲಿಹೊಸಹಳ್ಳಿಯಿಂದ ಕೋರಗೊಂಡಹಳ್ಳಿವರೆಗಿನ ೪ ಕಿಮೀ ಕ್ರಮಿಸಲು ಕನಿಷ್ಠ ೧೫- ೨೦ ನಿಮಿಷ ತಗುಲುತ್ತದೆ. ಈ ವ್ಯಾಪ್ತಿಯಲ್ಲೇ ಮೊಣಕಾಲುದ್ದದಷ್ಟು ಗುಂಡಿಗಳು ಬಿದ್ದಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆಯೋ ಅಥವಾ ಹಳ್ಳಕೊಳ್ಳದ ನಡುವೆ ರಸ್ತೆ ಸೃಷ್ಟಿಸಲಾಗಿದೆಯೋ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ದುಸ್ಥಿತಿ ಇದೆ.

ಅದರಲ್ಲೂ ಕೋರಗೊಂಡಹಳ್ಳಿ ಗ್ರಾಮದ ಆಸುಪಾಸಿನ ಸುಮಾರು ಒಂದು ಕಿಮೀನಲ್ಲಿ ರಸ್ತೆ ಅನ್ನೋದೇ ಇಲ್ಲ ಎಂಬಂತೆ ಹಳ್ಳ ಹಿಡಿದಿದೆ. ಅಲ್ಪಸ್ವಲ್ಪ ಮಳೆಯಾದರೆ ಸಾಕು ನಗರ ಸೇರಿ ಗ್ರಾಮೀಣ ಪ್ರದೇಶಗಳ ರಸ್ತೆಗಳೆಲ್ಲವೂ ಈಜುಕೊಳಗಳಾಗಿ ಬದಲಾಗುತ್ತವೆ. ಇದು ಜಿಲ್ಲೆಯ ಜನಪ್ರತಿನಿಧಿ, ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.

ಮಾಲೂರು ಶಾಸಕರಿಗೆ ಇರುವ ಕಾಳಜಿ ಕೋಲಾರ ಜನಪ್ರತಿನಿಧಿಗೆ ಏಕಿಲ್ಲ? ಇಬ್ಬರೂ ಕಾಂಗ್ರೆಸ್‌ನವರೇ ಆಗಿದ್ದರೂ ಸರ್ಕಾರ ಈ ಇಬ್ಬರ ಮಧ್ಯೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆಯೋ? ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆಯೋ? ಎಂಬ ಪ್ರಶ್ನೆಗಳಿಗೆ ಸ್ವತ: ಕೋಲಾರ ಶಾಸಕರು ಮತ್ತು ಲೋಕೋಪಯೋಗಿ ಇಲಾಖೆಯೇ ಉತ್ತರ ನೀಡಬೇಕಿದೆ.

ಆಂಧ್ರಪ್ರದೇಶದ ಬಿ.ಕೊತ್ತಕೋಟ ಮತ್ತು ಮಾಲೂರು ತಾಲೂಕು ಮಾಸ್ತಿ ನಡುವಿನ ರಾಜ್ಯ ಹೆದ್ದಾರಿಯೂ ಆಗಿರುವ ಈ ರಸ್ತೆಯನ್ನು ಹಿಂದೊಮ್ಮೆ ಡಬಲ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪವೂ ಬಂದಿತ್ತು. ಡಬಲ್ ರಸ್ತೆ ಬೇಡ ಸ್ವಾಮಿ, ಕನಿಷ್ಠ ಆಳುದ್ದದ ತಗ್ಗು, ಗುಂಡಿಗಳಿಗೆ ತೇಪೆ ಹಾಕಿ ಮುಚ್ಚಿಸಿದರೆ ನಾವು ನಿಮಗೆ ‘ಧನ್ಯೋಸ್ಮಿ’ ಎಂದು ಗ್ರಾಮೀಣ ಜನತೆ ಕೋಲಾರ ಶಾಸಕರು, ಎಂಎಲ್‌ಸಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದಾರೆ.

ಶಾಸಕದ್ವಯರ ವಿರುದ್ಧ ಆಕ್ರೋಶ: ಸುಮಾರು ಎರಡು ವರ್ಷಗಳಿಂದ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಲಾರ- ಪಾರ್ಶ್ವಗಾನಹಳ್ಳಿ ರಸ್ತೆ ಹಳ್ಳ ಹಿಡಿದು ಜನತೆ ಪರದಾಡುತ್ತಿದ್ದರೂ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಅವರನ್ನು ಸದಾ ನೆರಳಿನಂತೆ ಹಿಂಬಾಲಿಸುವ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಎಂ.ಎಲ್.ಅನಿಲ್‌ಕುಮಾರ್ ಇಷ್ಟೊಂದು ಉದಾಸೀನದಿಂದ ಇರಲು ಕಾರಣವೇನು ಎಂದು ಜನರ ಪ್ರಶ್ನೆಯಾಗಿದೆ.

ಶಾಸಕ ಕೊತ್ತೂರು ಮಂಜುನಾಥ್ ಮಾತೆತ್ತಿದರೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಸರ್ಕಾರದಿಂದ ತಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಎರಡು ವರ್ಷದಿಂದಲೂ ಕೇವಲ ೧೦ ಕಿ.ಮೀ ದೂರದ ಪ್ರಮುಖ ರಸ್ತೆಯನ್ನೇ ಸರಿಪಡಿಸಲು ಆಗಿಲ್ಲ ಎಂದು ಸಂಚಾರಿಗಳು ಲೇವಡಿ ಮಾಡುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ಹಾಗೂ ಆ. ೧೫ ರಾಷ್ಟ್ರೀಯ ಹಬ್ಬಗಳಂದು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಧ್ವಜಾರೋಹಣ ಮಾಡುವುದು ಬಿಟ್ಟರೆ ಬೇರ್‍ಯಾವುದೇ ಅಭಿವೃದ್ಧಿ ಮಾಡಲಿಲ್ಲ ಎಂಬುದು ಕ್ಷೇತ್ರದ ಜನತೆಯ ಆರೋಪವಾಗಿದೆ. ಸಭೆಯಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಜಿಲ್ಲಾ ಕೇಂದ್ರದಲ್ಲಿ ಯಾವುದೂ ಅಭಿವೃದ್ಧಿಯಾಗಿಲ್ಲ. ಮಳೆ ಬಿದ್ದರೆ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ಈಜುಕೊಳಗಳು ನಿರ್ಮಾಣವಾಗಿರುತ್ತವೆ. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿಯೆಂಬುದು ಶೂನ್ಯವಾಗಿದೆ.

ನಾಗರಾಜ ಶೆಣೈ, ಸ್ಥಳೀಯರು.

Share this article