ರಾಜ್ಯದಲ್ಲಿನ್ನೂ ದೇವದಾಸಿ ಪದ್ಧತಿ ಚಾಲ್ತಿಯಲ್ಲಿದೆ: ಪೂರ್ಣಿಮಾ ರವಿ

KannadaprabhaNewsNetwork | Published : Mar 4, 2024 1:16 AM

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಸಂಶೋಧಕಿ, ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ ರವಿ ಅವರ ಗಾಡ್ಸ್ ವೈವ್ಸ್, ಮೆನ್ಸ್ ಸ್ಲೇವ್ಸ್’ ಚಲನಚಿತ್ರ ಪ್ರದರ್ಶನಗೊಂಡಿತು. ಬಳಿಕ ಸಂವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಅಧ್ಯಯನಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 80,000 ದೇವದಾಸಿಯರಿದ್ದಾರೆ. ಆದರೆ ಅವರಲ್ಲಿ ಅರ್ಧದಷ್ಟು ಜನರು ಮಾತ್ರ ಸರ್ಕಾರದಿಂದ ಗುರುತಿಸಲ್ಪಟ್ಟಿದ್ದಾರೆ ಎಂದು ಸಂಶೋಧಕಿ, ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ ರವಿ ಹೇಳಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ತಮ್ಮ ‘ಗಾಡ್ಸ್ ವೈವ್ಸ್, ಮೆನ್ಸ್ ಸ್ಲೇವ್ಸ್’ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ಚರ್ಚೆಯಲ್ಲಿ ಭಾಗವಹಿಸಿದರು.ಸರ್ಕಾರದ ದಾಖಲೆಗಳಲ್ಲಿ ಅರ್ಧದಷ್ಟು ದೇವದಾಸಿಯರ ಹೆಸರು ಇಲ್ಲದೇ ಇರುವುದರಿಂದ ಅವರಿಗೆ ಸರ್ಕಾರದಿಂದ ದೇವದಾಸಿಯರಿಗೆ ನೀಡುವ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ಅವರೆಲ್ಲರನ್ನು ಸೇರಿಸಲು ಪರಿಷ್ಕೃತ ಸಮೀಕ್ಷೆ ಆಗಬೇಕು ಮತ್ತು ಅವರ ಪುನರ್ವಸತಿಗೆ ತಕ್ಷಣದ ಕ್ರಮಗಳು ಇರಬೇಕು ಎಂದು ಅವರು ಒತ್ತಾಯಿಸಿದರು.ಲೇಖಕಿ ಸುಧಾ ಮೂರ್ತಿ ಅವರ ‘ತ್ರೀ ಥೌಸಂಡ್ ಸ್ಟಿಚಸ್’ ಕೃತಿಯನ್ನು ಓದಿದ ನಂತರ ಪ್ರಭಾವಿತರಾಗಿ ನಾನು ಈ ಕೆಲಸ ಕೈಗೊಂಡೆ ಎಂದ ಪೂರ್ಣಿಮಾ ರವಿ, ಕರ್ನಾಟಕ ಮತ್ತು ಭಾರತದ ಅನೇಕ ಭಾಗಗಳಲ್ಲಿ ದೇವದಾಸಿಯರ ವ್ಯವಸ್ಥೆಯು ಅದರ ಅವನತಿ ರೂಪದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 4,50,000 ದೇವದಾಸಿಯರಿದ್ದಾರೆ ಎಂದವರು ಉಲ್ಲೇಖಿಸಿದರು.ಅವರಿಗೆ ಪುನರ್ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಈ ಅಭ್ಯಾಸದಲ್ಲಿ ತೊಡಗಿರುವ ಪುರುಷರು ಮತ್ತು ಮಹಿಳೆಯರು ಈ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕು. ನಮ್ಮ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಪದ್ಧತಿ ಅಡಕವಾಗಿರುವ ಕಾರಣ ಸುಧಾರಣೆಯಲ್ಲಿ ಗಂಭೀರ ಸವಾಲುಗಳಿವೆ ಎಂದು ಪೂರ್ಣಿಮಾ ರವಿ ಅಭಿಪ್ರಾಯಪಟ್ಟರು.ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ನಿರ್ಮಾಪಕ ರವಿನಾರಾಯಣ, ಛಾಯಾಗ್ರಾಹಕ ನಿಹಾಲ್ ನೂಜಿಬೈಲ್, ಪ್ರೊ.ಗುರ್ಬುಜ್ ಅಕ್ತಾಸ್, ಡಾ.ಅರವಿಂದ ಹೆಬ್ಬಾರ್, ಪ್ರೊ.ಎಂ.ಎಲ್.ಸಾಮಗ, ವಿದುಷಿ ಪ್ರತಿಭಾ ಸಾಮಗ, ಡಾ. ಭ್ರಾಮರಿ ಶಿವಪ್ರಕಾಶ್, ವಿದುಷಿ ಮಾನಸಿ ಸುಧೀರ್, ಪ್ರೊ.ಸುಧಾಕರರಾವ್ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಗೌತಮಿ ಕಾರ್ಯಕ್ರಮ ನಿರೂಪಿಸಿದರು. ವೆಲಿಕಾ ವಂದಿಸಿದರು.

Share this article