ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಿ. ದೇವರಾಜು ಅರಸು ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ಸುಧಾರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ, ದೀನದಲಿತರ ಧೀಮಂತ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಕಷ್ಟು ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದ ದೇವರಾಜ ಅರಸು ಅವರು ಪ್ರಜಾಪ್ರಭುತ್ವದ ಆಶಯದಂತೆ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಬಡವರ, ಶೋಷಿತರ, ಹಿಂದುಳಿದ ವರ್ಗಗಳ, ದೀನದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಮುನ್ನುಡಿ ಬರೆದರು. 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ಎಲ್ಲ ಸಮುದಾಯಗಳಿಗೂ ಶಿಕ್ಷಣ, ಉದ್ಯೋಗ ಕಲ್ಪಿಸಿದರು. ಭೂ ಸುಧಾರಣೆ, ಜೀತಪದ್ದತಿ ನಿಷೇಧ, ಆಶ್ರಯ ಯೋಜನೆ ಮನೆಗಳು ಅರಸು ಅವರ ಪ್ರಮುಖ ಕೊಡುಗೆಗಳಾಗಿವೆ ಎಂದರು.ಶೋಷಿತರ ದನಿಯಾಗಿದ್ದ ಅರಸು: ಕಾರ್ಯಕ್ರಮ ಉದ್ಘಾಟಿಸಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಭಾರತ ಕಂಡ ಅಪ್ರತಿಮ ರಾಜಕಾರಣಿ, ರಾಜಕೀಯ ಮುತ್ಸದ್ಧಿ ದೇವರಾಜ ಅರಸು ಆಗಿದ್ದಾರೆ. ಕೃಷಿಕ ಕುಟುಂಬದಿಂದ ಬಂದ ಅರಸು ಅವರು ರೈತಾಪಿ ವರ್ಗಗಳ ಕಷ್ಟ-ಕಾರ್ಪಣ್ಯಗಳನ್ನು ಹತ್ತಿರದಿಂದ ಅರಿತಿದ್ದರು. ಸಮಾಜದಲ್ಲಿ ಬಡವರ, ಶೋಷಿತರ ದನಿಯಾಗಿದ್ದ ಅರಸು ಅವರು ಇಡೀ ದೇಶಕ್ಕೆ ಮಾದರಿ ರಾಜಕಾರಣಿ ಎಂದರೆ ತಪ್ಪಾಗಲಾರದು. ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಲೇಖಕ ಪ್ರೊ.ಸಿ.ನಾಗಣ್ಣ ಅವರು ಮುಖ್ಯ ಭಾಷಣ ಮಾಡಿ ಆಧುನಿಕ ಭಾರತದ ಚರಿತ್ರೆಯಲ್ಲಿ ಅರಸು ಅವರ ಸಮಾಜ ಸುಧಾರಣೆ, ರಾಜಕೀಯ ಜೀವನ, ಆಡಳಿತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗಿದೆ. ಅರಸು ಅವರ ಜನಪರ ಯೋಜನೆಗಳ ಜಾರಿ ನವಕರ್ನಾಟಕದ ಉದಯಕ್ಕೆ ಕಾರಣವಾಯಿತು. ಯಾವುದೇ ಪ್ರಭಾವವಿಲ್ಲದೆ ಸ್ವಸಾಮರ್ಥ್ಯದಿಂದ ಮೇಲೆ ಬಂದ ಅರಸು ಅವರು ನೇರ ಹಾಗೂ ನಿಷ್ಠುರವಾದಿಯಾಗಿದ್ದರು. ಕುವೆಂಪು ಅವರ ಅಭಿಯಾನಿಯಾಗಿದ್ದ ಅರಸು ಅವರು ಸಂಗೀತ, ಸಾಹಿತ್ಯ ಹಾಗೂ ಲಲಿತಕಲೆಗಳ ಆರಾಧಕರು ಆಗಿದ್ದರು ಎಂದರು.ಕರ್ನಾಟಕವೆಂದು ಮರುನಾಮಕರಣ: ಸಾಮಾಜಿಕ ಅಸಮಾನತೆ ತೊಡೆಯಲು ಎಲ್.ಜಿ. ಹಾವನೂರು ಆಯೋಗ ರಚಿಸಿ ಹಿಂದುಳಿದವರ ಏಳಿಗೆಗೆ ಶ್ರಮಿಸಿದ ಅರಸು ಅವರು ಭೂ ಸುಧಾರಣೆ ಕಾಯ್ದೆ, ಜೀತಪದ್ದತಿ ನಿರ್ಮೂಲನೆ, ಋಣಮುಕ್ತ ಕಾಯ್ದೆಗಳನ್ನು ಜಾರಿಗೊಳಿಸಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದರು. 1975-76ರಲ್ಲಿ 50 ಸಾವಿರ ನಿರುದ್ಯೋಗಿಗಳಿಗೆ ಶಿಷ್ಯವೇತನ ಒದಗಿಸಿ ಅರ್ಥಿಕ ಸಬಲೀಕರಣಕ್ಕೆ ನೆರವಾದರು. ಅರಸು ಅವರ ಕಾಲದಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳು ಹೊರಹೊಮ್ಮಿದವು ಎಂದು ಸಿ. ನಾಗಣ್ಣ ಅವರು ತಿಳಿಸಿದರು.ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಾಸ್ತಾವಿಕ ಮಾತನಾಡಿ, ಇದು ಮಹಾಪುರುಷರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ. ಬಡವರು, ಹಿಂದುಳಿದವರ ನೇತಾರರಾಗಿದ್ದ ಅರಸು ಅವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ರಾಜ್ಯದ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದರು. ಶಿಕ್ಷಣ ಸುಧಾರಣೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದರು. ಅರಸು ಅವರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಪ್ರತಿವರ್ಷ ದೇವರಾಜ ಅರಸು ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಮೋನಾ ರೋತ್ ಹಾಗೂ ಎಸ್ಪಿ ಡಾ. ಬಿ.ಟಿ. ಕವಿತ ಅವರು ಡಿ.ದೇವರಾಜ ಅರಸು ಅವರ ಜೀವನ ಸಾಧನೆ ಬಗ್ಗೆ ಮಾತನಾಡಿದರು. ಇದೇ ವೇಳೆ ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಪ್ರಸ್ತುತಪಡಿಸಿದ ಡಿ. ದೇವರಾಜ ಅರಸು ಕುರಿತ ಗಾಯನ ಗಮನ ಸೆಳೆಯಿತು.ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಕುದೇರಿನ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಸಿ. ನಾಗೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಲಾಗಿದ್ದ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.