ಶಿಕ್ಷಣದಿಂದಷ್ಟೇ ಅಭಿವೃದ್ಧಿ, ಸಮಾಜ ಸುಧಾರಣೆ ಸಾಧ್ಯ: ಎಂ.ವಿ.ತುಷಾರಮಣಿ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ತೂಗುತ್ತಿವೆ. ಒಂದು ಹೆಣ್ಣು ವಿದ್ಯೆಕಲಿತರೆ ಸಮಾಜವನ್ನು ಸುಧಾರಿಸಬಲ್ಲಳು, ಮನೆಯೊಂದಕ್ಕೆ ದೀಪವಾದರೆ ಸಾಲದು, ಸ್ವಾವಲಂಬನೆ ಬದುಕಿಗೂ ಶಕ್ತಿಯಾಗುತ್ತಾಳೆ ಎನ್ನುವುದು ಲೋಕಮಾನ್ಯವಾಗಿದೆ. ಶಿಕ್ಷಣದಿಂದ ನಾಗರೀಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸ್ವಾವಲಂಬನೆ ಜಾಗೃತಗೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ, ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನೆ ನಿರ್ದೇಶಕಿ ಎಂ.ವಿ.ತುಷಾರಮಣಿ ಹೇಳಿದರು.

ಗುಡ್‌ಷಫರ್ಡ್ ಶಿಕ್ಷಣ ಟ್ರಸ್ಟ್ ವತಿಯಿಂದ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಗುಡ್‌ಷಫರ್ಡ್ ಶಾಲೆಯಲ್ಲಿ ನಡೆದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣದಿಂದ ನಾಗರೀಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಸ್ವಾವಲಂಬನೆ ಜಾಗೃತಗೊಳ್ಳುತ್ತವೆ. ಸಮಾಜಕ್ಕೆ ತುಂಬಾ ನೆರವಾಗುತ್ತದೆ, ಹೆಣ್ಣು ಶಾಲಾ-ಕಾಲೇಜು ಶಿಕ್ಷಣ ಪಡೆದು, ಗಂಡಿನಷ್ಟೇ ಸಮಾನತೆಯುಳ್ಳವರು ಎನ್ನುವುದನ್ನು ಸಾವಿತ್ರಿಬಾಯಿಫುಲೆ ಸಾಬೀತುಪಡಿಸಿದ್ದಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ತೂಗುತ್ತಿವೆ, ಒಂದು ಹೆಣ್ಣು ವಿದ್ಯೆಕಲಿತರೆ ಸಮಾಜವನ್ನು ಸುಧಾರಿಸಬಲ್ಲಳು, ಮನೆಯೊಂದಕ್ಕೆ ದೀಪವಾದರೆ ಸಾಲದು, ಸ್ವಾವಲಂಬನೆ ಬದುಕಿಗೂ ಶಕ್ತಿಯಾಗುತ್ತಾಳೆ ಎನ್ನುವುದು ಲೋಕಮಾನ್ಯವಾಗಿದೆ ಎಂದರು.

ಸಾಡೆ ದೇವಾಲಯದ ಸಭಾಪಾಲಕ ರೇ.ಆ್ಯಂಡ್ರ್ಯೂಜಾನ್ ಮಾತನಾಡಿ, ಶಿಕ್ಷಣ ಲಭ್ಯವಾಗದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪುನರ್‌ವಸತಿ ಕೇಂದ್ರಗಳ ಮೂಲಕ ಶಿಕ್ಷಣ ಕಲಿಸಿ, ಸಾಮಾಜಿಕ ಕಳಕಳಿ ಮೆರೆದ ವಿದ್ಯಾದಾತೆ ಸಾವಿತ್ರಿಬಾಯಿಫುಲೆ ಅವರು ಅವಿಸ್ಮರಣೀಯರು ಎಂದರು.

೧೮೫೧ರಲ್ಲಿ ೩ಶಾಲೆಗಳನ್ನು ತೆರದು ೧೫೦ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿದು ಕ್ರಾಂತಿಕಾರಿ ಬದಲಾವಣೆಯಾಗಿದೆ, ತ್ಯಾಗಮಯ ಜೀವನವನ್ನು ಸಮಾಜ ಎಂದಿಗೂ ಮರೆಯೋಲ್ಲ ಎಂದು ನುಡಿದರು.

ಅಂದಿನ ಕಾಲದಲ್ಲಿಯೇ ಬಾಲ್ಯವಿವಾಹ ತಡೆದರು, ವಿಧವಾ ವಿವಾಹಕ್ಕೆ ಪುನರ್ವಸತಿ ಕೇಂದ್ರ ತೆರೆದರು, ಸತಿಸಹಗಮನ ಪದ್ದತಿಯನ್ನು ವಿರೋಧಿಸಿದರು, ಪತಿ ಜ್ಯೋತಿಭಾಫುಲೆ ಅವರ ಸಹಕಾರ ಪಡೆದು ಜಾಗೃತಿ ಮೂಡಿಸುವ ಹೋರಾಟವನ್ನು ಮಾಡಿದರು ಎಂದು ಸ್ಮರಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಗುಡ್‌ಷಫರ್ಡ್ ಶಿಕ್ಷಣ ಟ್ರಸ್ಟ್ ಸದಸ್ಯ ರಿಚರ್ಡ್‌ಥಾಮಸ್, ಸಂಸ್ಥಾಪಕ ಥಾಮಸ್‌ಬೆಂಜಮಿನ್, ಕಾರ್ಯದರ್ಶಿ ಎ.ಮೋರಿಸ್‌ಜೈಕುಮಾರಿ, ಬುದ್ಧಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ಇತರರಿದ್ದರು.

ಮಹಿಳಾ ಶಿಕ್ಷಣ, ಹಕ್ಕಿನ ಹೋರಾಟಕ್ಕೆ ದುಡಿದವರು ಸಾವಿತ್ರಿ ಬಾಯಿ ಫುಲೆ: ದೊರೆಸ್ವಾಮಿ

ಕಿಕ್ಕೇರಿ:

ಮಹಿಳೆಯರ ಶಿಕ್ಷಣ, ಸಮಾನತೆ ಹಕ್ಕಿನ ಹೋರಾಟಕ್ಕೆ ದುಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಎಂದು ಪ್ರಾಂಶುಪಾಲ ದೊರೆಸ್ವಾಮಿ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ ಘಟಕದಿಂದ ಏರ್ಪಡಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿಯಲ್ಲಿ ಮಾತನಾಡಿ, ಮಹಿಳೆಯರು, ಬಡವಿದ್ಯಾರ್ಥಿಗಳಿಗೆ ಮಹಿಳಾ ಶಿಕ್ಷಣ ಶಾಲೆ, ವಸತಿ ಶಾಲೆ, ಬಡವರಿಗಾಗಿ ಆಶ್ರಮ ತೆರೆದ ಮಹಾನ್ ಸಾಧಕಿ ಎಂದು ಬಣ್ಣಿಸಿದರು.

ಜಾತಿ, ವರ್ಗ, ಶ್ರೇಣಿ ಎಲ್ಲವನ್ನು ವಿರೋಧಿಸಿ ಸತ್ಯ ಶೋಧಕ ಸಂಸ್ಥೆ ತೆರೆದರು. ಪುರೋಹಿತರಿಲ್ಲದ ಸರಳ ವಿವಾಹ, ಕುಡಿವ ನೀರಿನ ಸೌಲಭ್ಯ, ಬಾಲ್ಯವಿವಾಹ, ವಿಧವಾ ವಿವಾಹ, ವರದಕ್ಷಿಣೆ ವಿರೋಧಿ ಜಾಗೃತಿ ಮೂಡಿಸಿದ ಮಹಾನ್ ಸಮಾಜ ಪರಿವರ್ತಕಿ ಎಂದರು.

ಮಹಿಳೆಯರು ಮನೆಯಿಂದ ಹೊರಬಾರದ ಕಟ್ಟು ಪಾಡಿತ್ತು. ಚಿಕ್ಕವಯಸ್ಸಿನಲ್ಲಿಯೇ ಜ್ಯೋತಿ ಬಾಯಿ ಫುಲೆ ಅವರನ್ನು ವಿವಾಹವಾಗಿ ನಂತರ ಮನೆಯವರ ವಿರೋಧ ನಡುವೆ ಶಿಕ್ಷಣ ಪಡೆದು ಶಿಕ್ಷಣ ತಜ್ಞೆಯಾದರು. ಹೆಣ್ಣುಮಕ್ಕಳಿಗಾಗಿ ಮಹಾರಾಷ್ಟ್ರದ ವಿವಿಧೆಡೆ ಶಾಲೆ ತೆರೆದು ಶಿಕ್ಷಕರಿಲ್ಲದಾಗ ತಾವೇ ಶಿಕ್ಷಕಿಯಾದರು ಎಂದರು.

ಶಾಲೆಗೆ ತೆರಳುವಾಗ ಹಲವರು ಇವರ ಮೇಲೆ, ಸಗಣಿ, ಮೊಟ್ಟೆಯಂತಹ ವಸ್ತು ಎಸೆದು ಹಿಂಸಿಸಿದರು. ಇದನ್ನು ಲೆಕ್ಕಿಸದೆ ಮಹಿಳೆಯರ ಶಿಕ್ಷಣ, ಸಮಾನತೆಗಾಗಿ ಹೋರಾಡಿ ಅಕ್ಷರದ ಅವ್ವರಾದರು ಎಂದರು.

ಉಪನ್ಯಾಸಕ ರವೀಂದ್ರ ಮಾತನಾಡಿ, ವರ್ಣಾಶ್ರಮದಂತಹ ಪದ್ಧತಿ ವಿರುದ್ಧ ಸೆಣೆಸಾಡಿ ಲಿಂಗತಾರತಮ್ಯ ಶಿಕ್ಷಣಕ್ಕೆ ನಾಂದಿ ಹಾಡಿದ ಮಹಾನ್ ಸಾಧಕಿ ಎಂದು ಬಣ್ಣಿಸಿದರು. ಎನ್‌ಎಸ್‌ಎಸ್‌ ಘಟಕಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಯಂತೆ ಆದರ್ಶ ಮಹಿಳೆಯರಾಗಲು ಮಕ್ಕಳಿಗೆ ಹಿತವಚನ ನೀಡಿದರು.

ಈ ವೇಳೆ ಎನ್ಎಸ್‌ಎಸ್‌ ಘಟಕದ ಹೇಮಾವತಿ ತಂಡ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಬೋಧಕ ವೃಂದ ಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸ್ಮರಿಸಿದರು. ಮಂಜುನಾಥ, ರಮೇಶ್, ವಿನಾಯಕ್, ನಾಗೇಶ್, ಚಂದ್ರಿಕಾ ಉಪಸ್ಥಿತರಿದ್ದರು.

Share this article