ರೈಲ್ವೆ ಮೇಲ್ಸೇತುವೆ ಉದ್ಘಾಟನೆ ನೆರವೇರಿಸಿದ ಸಂಸದ ಸಂಗಣ್ಣ ಕರಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಒಂದು ಕಾಲದಲ್ಲಿ ಹಾವಾಡಿಗರ ದೇಶ ಎಂದು ಕರೆಯುತ್ತಿದ್ದ ಭಾರತ ಇಂದು ಇಡೀ ಜಗತ್ತೇ ಬೆರಗಾಗುವಂತೆ ಅಭಿವೃದ್ಧಿಯಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.65 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಭಾರತವನ್ನು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲೇ ಇಲ್ಲ. ಹೀಗಾಗಿ, ಭಾರತದ ನಾಯಕರು ಕಂಡರೇ ಜಗತ್ತು ನಾನಾ ರೀತಿಯಾಗಿ ಅವಹೇಳನ ಮಾಡುತ್ತಿತ್ತು. ಹಾವಾಡಿಗರ ದೇಶ, ದುಡಿಯದವರು ಎಂದೆಲ್ಲ ಮೂದಲಿಸುತ್ತಿದ್ದರು. ಆದರೆ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಅವರನ್ನು ಇಡೀ ಜಗತ್ತೇ ನಾಯಕ ಎಂದು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ.
ಭಾರತದ ಅಭಿವೃದ್ಧಿಯನ್ನು ನೋಡಿ ಜಗತ್ತಿನ ದೊಡ್ಡ ದೊಡ್ಡ ದೇಶಗಳು ಸಹ ಭಾರತವನ್ನು ಹೊಗಳಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ನೋಡಿ ವಿದೇಶಿಗರು ಬಣ್ಣಿಸಲು ಪ್ರಾರಂಭಿಸಿದ್ದಾರೆ. ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನಾ ದೇಶಗಳು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.ಕೊಪ್ಪಳಕ್ಕೆ ಬಂದು ಕಿರಾಣಿ ತೆಗೆದುಕೊಂಡು ಮನೆಗೆ ಹೋಗುವ ವೇಳೆಗೆ ಇದು ಕೊಪ್ಪಳದಿಂದ ದೆಹಲಿ ತಲುಪುತ್ತೇವೆ ಎಂದರೇ ನಾವು ಸಂಪರ್ಕ ಕ್ರಾಂತಿಯನ್ನೇ ಮಾಡಿದ್ದೇವೆ ಎಂದರು. ಇಷ್ಟು ವೇಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಜಗತ್ತಿನ ಯಾವ ದೇಶದಲ್ಲಿಯೂ ಆಗುತ್ತಿಲ್ಲ ಎಂದರು.
ಕೊಪ್ಪಳ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲು ಆಗಿಲ್ಲ. ಮುಂದಿನ ಜನಾಂಗ ನಮ್ಮನ್ನು ಪ್ರಶ್ನೆ ಮಾಡುತ್ತದೆ, ಇಷ್ಟು ವರ್ಷ ಆಳ್ವಿಕೆ ಮಾಡಿದವರು ಏನು ಮಾಡಿದರು ಎಂದು ಮಾತನಾಡಿಕೊಳ್ಳುತ್ತಾರೆ ಎಂದರು.ಚುನಾವಣೆ ನಂತರ ನಾವು ರಾಜಕೀಯ ಮಾಡಬಾರದು. ಹುಬ್ಬಳ್ಳಿ, ಕಲಬುರಗಿಯಲ್ಲಿ ಆಗಿರುವಷ್ಟು ಅಭಿವೃದ್ಧಿಯಾಗಿಲ್ಲ. ನಾವೆಲ್ಲಾ ಪಕ್ಷತೀತವಾಗಿ ಒಂದಾಗುವ ಬದಲು ಪರಸ್ಪರ ಕಾಲೆಳೆಯುತ್ತಿರುವುದರಿಂದ ನಿರೀಕ್ಷಿ ಪ್ರಮಾಣದಲ್ಲಿ ಆಗಿಲ್ಲ. ಒಂದು ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ನಮ್ಮ ಕೈಯಿಂದ ಆಗಿಲ್ಲ. ನಾನು ಬಿಜೆಪಿಗೆ ಬಂದಿದ್ದೇ ಅದಕ್ಕಾಗಿ ಆದರೂ ಅದು ಪೂರ್ಣಗೊಂಡಿಲ್ಲ ಎನ್ನುವ ನೋವು ಇದೆ ನನಗೆ ಎಂದರು.
ಇದನ್ನು ಮೀರಿಯೂ ರೈಲ್ವೆ ಲೈನ್, ಕೇಂದ್ರೀಯ ವಿದ್ಯಾಲಯ, ಹೆದ್ದಾರಿ ನಿರ್ಮಾಣ ಸೇರಿದಂತೆ ಮೊದಲಾದ ಅಭಿವೃದ್ಧಿ ಮಾಡಿದ್ದೇವೆ ಎಂದರು. ರಾಯರಡ್ಡಿ ಅವರು ಅಂದು ಅಡಿಗಲ್ಲು ಹಾಕಿದ್ದರಿಂದ ಇಂದು ಸಿಂಧನೂರುವರೆಗೂ ರೈಲು ತೆರಳುವಂತೆ ಆಗಿದೆ ಎಂದರು. ತಮ್ಮ ಕೊನೆಯ ಭಾಷಣವನ್ನು ಭಾವುಕರಾಗಿ ಮಾಡಿದ ಸಂಗಣ್ಣ ಕರಡಿ ದೇಶದ ಕುರಿತು ಬಣ್ಣಿಸಿದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ, ನವೀನ್ ಗುಳಗಣ್ಣವರ, ಕೊಟ್ರಬಸಯ್ಯ, ಮಂಜುನಾಥ ಹಂದ್ರಾಳ, ಗುಳಗಳಪ್ಪ ಹಲಿಗೇರಿ, ಕರಿಯಪ್ಪ ಮೇಟಿ, ಮಹಾಂತೇಶ ಸಜ್ಜನ, ಗ್ಯಾನಪ್ಪ ಹಿರೇಖೇಡ, ರವಿ ಹಲಿಗೇರಿ, ಶಂಕರ ಪೂಜಾರ, ಸುರೇಶ ಇದ್ದರು.
ಡ್ರೈವರ್ ರಡ್ಡಿ ನನ್ನ ಮಗನಿದ್ದಂತೆ:ನನ್ನ ವಾಹನ ಚಾಲನೆ ಮಾಡುವ ಡ್ರೈವರ್ (ಭರಮರಡ್ಡಿ) ನನ್ನಿಬ್ಬರ ಮಕ್ಕಳಿಗಿಂತಲೂ ಹೆಚ್ಚು ಅಚ್ಚುಮೆಚ್ಚು. ನನ್ನ ಮಗನಿದ್ದಂತೆಯೇ ಆತ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಗಿಣಿಗೇರಿಯಲ್ಲಿ ಕೊನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನಿಬ್ಬರು ಮಕ್ಕಳಿಗಿಂತಲೂ ಅಧಿಕ ಸಮಯವನ್ನು ನಾನು ರಡ್ಡಿಯೊಂದಿಗೆ ಕಳೆದಿದ್ದೇನೆ. ಅತ್ಯಂತ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾನೆ. ಯಾರಿಂದಲೂ ಒಂದು ನಯಾಪೈಸೆಯನ್ನು ಸ್ವೀಕಾರ ಮಾಡಿಲ್ಲ. ಇಂಥವರು ಇದ್ದಿದ್ದರಿಂದ ನಾನು ಇಷ್ಟೊಂದು ಸೇವೆ ಮಾಡಲು ಸಾಧ್ಯವಾಯಿತು ಎಂದರು.