ನವಲಗುಂದ: ಬಂಡಾಯದ ನೆಲ ನವಲಗುಂದದಲ್ಲೀಗ ಅಭಿವೃದ್ಧಿ ಶಕೆ ಆರಂಭವಾಗಿದೆ. ಎನ್.ಎಚ್. ಕೋನರಡ್ಡಿ ಶಾಸಕರಾದ ಮೇಲೆ ಪ್ರಗತಿಯತ್ತ ಸಾಗುತ್ತಾ ಮಾದರಿ ಕ್ಷೇತ್ರವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾರ್ಗದರ್ಶನದಲ್ಲಿ ಜನಪರ ಕೆಲಸಗಳು ಸಾಗುತ್ತಿವೆ.
ಮೂಲ ಹೋರಾಟಗಾರರು:ಕೋನರಡ್ಡಿ ಹೋರಾಟದ ಬದುಕಿನಿಂದಲೇ ಬಂದವರು. ರಾಜ್ಯದಲ್ಲೇ ರೈತರ ಸಹಕಾರದೊಂದಿಗೆ ಚಕ್ಕಡಿ ರಸ್ತೆಗಳನ್ನು ಹೆದ್ದಾರಿ ತರಹ ನಿರ್ಮಿಸಿದ್ದು ಇತಿಹಾಸ. ಈ ಕಾರಣದಿಂದಾಗಿ ಇವರಿಗೆ "ಚಕ್ಕಡಿ ದಾರಿ ಸರದಾರ " ಎಂಬ ಬಿರುದು ಬಂದಿದೆ. ಇದೀಗ ಮನೆ ಇಲ್ಲದ ಬಡ 2500 ಕುಟುಂಬಗಳಿಗೆ ಉಚಿತವಾಗಿ ನಿವೇಶನ ನೀಡಿ ಮನೆ ಕಟ್ಟಲು ತೀರ್ಮಾನಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
19ನೇ ವಯಸ್ಸಿನಲ್ಲೇ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಕೋನರಡ್ಡಿ, ಮುಂದೆ ರೈತ ನಾಯಕರಾದ ಪ್ರೊ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಬಾಬಾಗೌಡ ಪಾಟೀಲ್ ಮುಂತಾದವರ ನೇತೃತ್ವದಲ್ಲಿ ಕೃಷಿ ಮತ್ತು ಇತರೆ ಸಾಮಾಜಿಕ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸಿದವರು. ಧಾರವಾಡ ಜಿಲ್ಲಾ ರೈತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ರೈತರ ಧ್ವನಿಯಾದವರು. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎಂಬ ಧ್ಯೇಯವಾಕ್ಯ ಇಟ್ಕೊಂಡು ಹೋರಾಟ ನಡೆಸಿದವರು.ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಕೋನರಡ್ಡಿ, ರಾಮಕೃಷ್ಣ ಹೆಗಡೆ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರಾಗಿದ್ದಾಗ ಭಾರತೀಯ ಆಹಾರ ನಿಗಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ರೈತರ ಹಾಗೂ ಅಭಿವೃದ್ಧಿ ಪರ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಧ್ವನಿಯಾಗಿ ನವಲಗುಂದ- ನರಗುಂದ ರೈತ ಬಂಡಾಯ ನೆಲದ ಪ್ರಮುಖ ನಾಯಕರಾದವರು. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ, ಬೆಳೆ ವಿಮೆ, ಹೈಕೋರ್ಟ್ ಪೀಠ ಸ್ಥಾಪನೆ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂತಾದ ಸಮಸ್ಯೆಗಳ ಪರವಾಗಿ ನಿರಂತರ ಹೋರಾಟ ಇವರದು.ನಿರ್ವಹಿಸಿದ ಜವಾಬ್ದಾರಿಗಳು: ಎನ್.ಹೆಚ್. ಕೋನರಡ್ಡಿ 2013- 2018ರ ಅವಧಿಯಲ್ಲಿ ಶಾಸಕರಾಗಿ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಅಭಿವೃದ್ದಿಗೆ, ವಿರೋಧ ಪಕ್ಷದ ಸದಸ್ಯರಾಗಿದ್ದರೂ ₹3300 ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಅಣ್ಣಿಗೇರಿ ಹಾಗೂ ನವಲಗುಂದ ಪುರಸಭೆಗಳನ್ನು ಕಾಂಗ್ರೆಸ್ ವಶಕ್ಕೆ ಪಡೆದಿರುವುದು ವಿಶೇಷ. ಎರಡು ಬಾರಿ ಶಾಸಕತ್ವ:
ನವಲಗುಂದ ತಾಲೂಕಿನಲ್ಲಿ ಪ್ರತಿ ಮಂಗಳವಾರ, ಪ್ರತಿ ಸೋಮವಾರ ಅಣ್ಣಿಗೇರಿ ಹಾಗೂ ಹುಬ್ಬಳ್ಳಿಯಲ್ಲಿ ನಿರಂತರ ಜನಸಂಪರ್ಕ ಸಭೆ ಮಾಡುತ್ತಾ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯ ಜೀವನ ಆರಂಭಿಸಿದರು. 2004 ಹಾಗೂ 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಎದೆಗುಂದಲಿಲ್ಲ, ಜನರ ಕೆಲಸ ಬಿಡಲಿಲ್ಲ. ಹೀಗಾಗಿಯೇ 2013 ಹಾಗೂ 2023ರಲ್ಲಿ ಗೆಲುವು ಕಂಡವರು.2002ರಲ್ಲಿ ರೈತರಿಗೆ ಬೆಳೆವಿಮೆ ಪರಿಹಾರಕ್ಕಾಗಿ 10 ಸಾವಿರಕ್ಕಿಂತ ಹೆಚ್ಚು ರೈತರನ್ನು ಸೇರಿಸಿಕೊಂಡು ಬೃಹತ್ ಹೋರಾಟ ನಡೆಸಿದ್ದರು. ಈ ವೇಳೆ 177 ಜನ ರೈತರೊಂದಿಗೆ ಬರೋಬ್ಬರಿ 15 ದಿನ ಜೈಲುವಾಸವನ್ನು ಅನುಭವಿಸಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಇವರ ಹೋರಾಟ ಇನ್ನಷ್ಟು ತೀವ್ರಗೊಂಡಿತು. ಆ ಹೋರಾಟದಿಂದ 38 ಸಾವಿರ ರೈತರಿಗೆ ₹62 ಕೋಟಿ ಬೆಳೆವಿಮೆ ಬಿಡುಗಡೆಯಾಗಿದ್ದ ಇತಿಹಾಸ. ಕೋನರಡ್ಡಿ ಅಧಿಕಾರದಲ್ಲಿರಲಿ, ಇಲ್ಲದಿರಲಿ ಪ್ರವಾಹ, ಬರಗಾಲದಂತಹ ಸಂದರ್ಭಗಳಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ಜನರ ಸೇವಕರಾಗಿದ್ದಾರೆ.
ಅಭಿವೃದ್ಧಿ ಕೆಲಸಗಳು:ಮಹದಾಯಿ, ಕಳಸಾ- ಬಂಡೂರಿ ಯೋಜನೆ ಜಾರಿಗಾಗಿ ಸವದತ್ತಿ ಎಪಿಎಂಸಿಯಿಂದ ಹುಬ್ಬಳ್ಳಿ- ಧಾರವಾಡ ನಗರಕ್ಕೆ ನೀರು ಪೂರೈಸುವ ಜಾಕ್‌ವೆಲ್ ವರೆಗೆ ರೈತರೊಂದಿಗೆ ಪಾದಯಾತ್ರೆ, ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಧಾರವಾಡ, ಗದಗ, ರೋಣ ಹಾಗೂ ನವಲಗುಂದ ವರೆಗೆ 11 ದಿನಗಳ ಕಾಲ ಅಂದಾಜು 200 ಕಿ.ಮೀ. ಗೂ ಹೆಚ್ಚು ಪಾದಯಾತ್ರೆ, 3ನೇ ಬಾರಿ ಹುಬ್ಬಳ್ಳಿಯಿಂದ ಧಾರವಾಡವರೆಗೆ ಪಾದಯಾತ್ರೆ ನಡೆಸಿದವರು ಕೋನರಡ್ಡಿ.
ಬೆಳಗಾವಿ ಅಧಿವೇಶನದ ವೇಳೆಯೂ ಧಾರವಾಡದಿಂದ ಬೆಳಗಾವಿ ವರೆಗೆ ಹತ್ತು ಹಲವಾರು ಬಾರಿ ಹೋರಾಟ ಮಾಡಿದ ಸೈ ಎನಿಸಿಕೊಂಡವರು. ಅಧಿವೇಶನದಲ್ಲಿ ಮಹದಾಯಿಗಾಗಿ ಯೋಜನೆ ಜಾರಿಗೆ ಹಕ್ಕೋತ್ತಾಯ ಮಂಡಿಸಿದ ಶಾಸಕ ಎನ್.ಎಚ್. ಕೋನರಡ್ಡಿ ಅವಿರತ ಹೋರಾಟದ ಫಲವಾಗಿ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸುವಂತೆ 2 ಬಾರಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿರುವದು ಕೋನರಡ್ಡಿ ಹೋರಾಟದ ದಾಖಲೆಯಾಗಿದೆ.ಹೋರಾಟದ ಎಚ್ಚರಿಕೆ:
ಮಹದಾಯಿ ನ್ಯಾಯಾಧೀಕರಣ ರಾಜ್ಯಕ್ಕೆ 13.42 ಟಿ.ಎಂ.ಸಿ. ನೀರು ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಟೆಂಡರ್ ಕೂಡ ಕರೆದಿದೆ. ಆದರೆ ಕೇಂದ್ರ ಸರ್ಕಾರ ಕೆಲವೊಂದಿಷ್ಟು ಅನುಮತಿ ನೀಡುತ್ತಿಲ್ಲ. ಯೋಜನೆ ಜಾರಿ ಮಾಡಲು ವಿಳಂಬ ಮಾಡಿದರೆ ಅನಿವಾರ್ಯವಾಗಿ ನೀರು ಬರುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.ಚಕ್ಕಡಿ ರಸ್ತೆ:
ಕ್ಷೇತ್ರದಲ್ಲಿ 500 ಕಿಮೀಗೂ ಹೆಚ್ಚಿನ ನೂತನ ಚಕ್ಕಡಿ ರಸ್ತೆಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದು. ಇದು ರಾಜ್ಯಾದ್ಯಂತ ಯಶಸ್ವಿ ಯೋಜನೆಯಾಗಿ ಗುರುತಿಸಿಕೊಂಡಿದ್ದು ಇತಿಹಾಸ. ವಿಧಾನಸಭೆಯಲ್ಲೇ ಚರ್ಚೆ ನಡೆದು ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಗೆ ಬರಲು ಕಾರಣವಾಯಿತು. ಕೋನರಡ್ಡಿ ಅವರ ಕಾರ್ಯವೈಖರಿಗೆ ಹಿಡಿದು ಕೈಗನ್ನಡಿಯಿದು.ನವಲಗುಂದದಲ್ಲಿ ಬಡವರಿಗೆ ಸೂರು ಒದಗಿಸಲು ಅಂದಾಜು 41 ಎಕರೆ ಜಮೀನು ಖರೀದಿಸಿ ಆಶ್ರಯ ಪ್ಲಾಟ್ ಅಭಿವೃದ್ಧಿಪಡಿಸಲಾಗಿದೆ. 2150 ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಣ್ಣಿಗೇರಿಯಲ್ಲಿ 19.5 ಎಕರೆ ಜಮೀನು ಖರೀದಿಸಿ ಆಶ್ರಯ ಪ್ಲಾಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. 900 ಕುಟುಂಬಗಳಿಗೆ ನಿವೇಶನ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 650 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಅಣ್ಣಿಗೇರಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಯೋಜನೆ ಮಂಜೂರಾಗಿ ಕೇವಲ ಕಾಗದದಲ್ಲೇ ಉಳಿದಿತ್ತು. ಕೆರೆ ನಿರ್ಮಿಸಲು ಬಸಾಪುರ ಗ್ರಾಮದ ಹತ್ತಿರ 76 ಎಕರೆ ಭೂಮಿಯನ್ನು ರೈತರಿಂದ ಒಪ್ಪಿಗೆ ಪಡೆದು ಖರೀದಿಸಿ ಈಗಾಗಲೇ ಬೃಹತ್ ಪ್ರಮಾಣದ ಕೆರೆ ನಿರ್ಮಿಸಿ ನೀರು ತುಂಬಿಸಲಾಗಿದೆ. ಅಣ್ಣಿಗೇರಿಯ ಬಹುದಿನದ ಬೇಡಿಕೆ 24/7 ನೀರು ಪೂರೈಕೆ ಮಾಡಲಾಗಿದೆ.ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಥಳಾವಕಾಶ ಇದ್ದ ಕಡೆ ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ಹಾಗೂ ಮಠ, ಮಂದಿರ, ದೇವಸ್ಥಾನ ನವೀಕರಿಸಲು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡಿದ್ದು ವಿಶೇಷ.
ನವಲಗುಂದದಲ್ಲಿ ಹೈಟೆಕ್ ಬಸ್ ನಿಲ್ದಾಣ ಮತ್ತು ಅಣ್ಣೆಗೇರಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟೀಕರಣ ಮಾಡಿದ್ದಾರೆ.ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ, ಪದವಿ ಕಾಲೇಜಗಳಿಗೆ ನೂತನ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಒದಗಿಸಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ.15 ಗ್ರಾಮಗಳನ್ನು ಗ್ರಾಮವಿಕಾಸ ಯೋಜನೆಯಡಿ ಸೇರಿಸಿ ಪ್ರತಿಗ್ರಾಮಕ್ಕೆ 1 ಕೋಟಿ ಅನುದಾನದಡಿ ಕಾಂಕ್ರೀಟ್ ರಸ್ತೆ, ಒಳಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ.ಬೆಣ್ಣೆಹಳ್ಳಕ್ಕೆ 14 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಿಸಲು ಶಂಕು ಸ್ಥಾಪನೆ, ಮೊರಬ-ಗುಮ್ಮಗೋಳ ಮಧ್ಯೆದ ತುಪ್ಪರಿಹಳ್ಳಕ್ಕೆ 4.5 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣ, ವಿವಿಧೆಡೆ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.ನವಲಗುಂದದಲ್ಲಿ ₹3 ಕೋಟಿ ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ, ಸಿವಿಲ್ ನ್ಯಾಯಾಲಯ ಕಟ್ಟಡದ ಮೊದಲನೇ ಮಹಡಿ 2 ಕೋಟಿ ವೆಚ್ಚದಲ್ಲಿ ನಿರ್ಮಾಣ, 51 ಲಕ್ಷ ವೆಚ್ಚದಲ್ಲಿ ಶಾದಿಮಹಲ್ ನಿರ್ಮಾಣ ಮಾಡಲಾಗಿದೆ. ಗ್ಯಾರಂಟಿ ಜಾರಿಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿದಂತೆ ಅವುಗಳ ಜಾರಿಗೆ ಕ್ರಮ ಕೈಗೊಂಡಿದ್ದಾರೆ.