ಮುಂಡಗೋಡ: ತಾಲೂಕಿನ ರಮಣೀಯ ವಾತಾವರಣದ ನಡುವೆ ಕುಳಿತಿರುವ ನೂರಾರು ವರ್ಷ ಇತಿಹಾಸವುಳ್ಳ ಬೆಡಸಗಾಂವ ರಾಮಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ದೇವರ ಕಾಡು ಯೋಜನೆಯಡಿ ಕಾಯಕಲ್ಪ ಕಲ್ಪಿಸಲಾಗಿದ್ದು, ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಈ ದೃಷ್ಟಿಯಿಂದ ದೇವರ ಕಾಡು ಯೋಜನೆ ಕಾಮಗಾರಿ ನಡೆಯುತ್ತಿದೆ. ದೇಗುಲದ ಪುಷ್ಕರಣಿ ಅಭಿವೃದ್ಧಿ, ಭಕ್ತರಿಗಾಗಿ ಸ್ತ್ರೀ ಮತ್ತು ಪುರುಷರಿಗಾಗಿ ಪ್ರತ್ಯೇಕವಾದ ಶೌಚಾಲಯ ನಿರ್ಮಾಣ, ಮಕ್ಕಳಿಗೆ ಆಟಿಕೆಗಳು, ಪ್ಯಾರಾಗೋಲಾ, ವಿಶ್ರಾಂತಿ ಧಾಮ, ಕುಟೀರಗಳ ನಿರ್ಮಾಣ, ಕೆರೆಯ ಸುತ್ತ ಮೆಸ್ ಅಳವಡಿಕೆ, ಹಾಗೂ ಭಕ್ತಾದಿಗಳಿಗಾಗಿ ಕುಳಿತುಕೊಳ್ಳಲು ಆಸನಗಳ ನಿರ್ಮಾಣ, ದೇವಾಲಯದ ಸುತ್ತ ರಾಶಿ ವನ, ನಕ್ಷತ್ರ ವನ, ನವಗ್ರಹ ವನ ಸೇರಿದಂತೆ ಹಲವು ಬಗೆಯ ವನಗಳನ್ನು ನೆಟ್ಟು ಅಭಿವೃದ್ಧಿಪಡಿಸಲಾಗುತ್ತಿದೆ.
ದೇವಾಲಯ ತೀವ್ರ ಪುರಾತನ ಕಾಲದ್ದಾಗಿದ್ದು, ಸುಮಾರು ೧೨೦೦ ವರ್ಷಗಳ ಇತಿಹಾಸ ಹೊಂದಿದೆ. ಬನವಾಸಿ ಅರಸ ಕಾಲದ ಬಿಜ್ಜಳನ ಉಪರಾಜದಾನಿಯಾಗಿ ಮೆರೆದ ಆಗಿನ ಕಾಲದ ಬೆಡಸಗಾಮೆ ಎಂಬ ಊರು ಇಂದು ಬೆಡಸಗಾಂವ ಗ್ರಾಮ ಎಂದು ನಾಮಕರಣಗೊಂಡು ಪರಿವರ್ತನೆಯಾಗಿದೆ ಎಂದು ಇಲ್ಲಿರುವ ಸಾವಿರಾರು ವರ್ಷ ಇತಿಹಾಸವುಳ್ಳ ಹಳೆಯ ಶಿಲಾ ಶಾಸನಗಳು ಹೇಳುತ್ತವೆ. ದೇವಾಲಯ ಹಾಗೂ ದೇವಾಲಯದೊಳಗಿರುವ ಶಿವಲಿಂಗ ಕರಿ ಶಿಲೆಯಿಂದ ನಿರ್ಮಿತವಾಗಿದೆ. ಸುತ್ತ ನಿತ್ಯ ಹರಿದ್ವರ್ಣದಿಂದ ಕೂಡಿರುವ ವಾತಾವರಣದ ನಡುವೆ ರಾಮಲಿಂಗೇಶ್ವರ ದೇವಾಲಯದ ಲಿಂಗವು ಸುಮಾರು ೫.೫ ಅಡಿ ಎತ್ತರವಿದ್ದು, ತೀವ್ರ ಆಕರ್ಷಣಿಯವಾಗಿದೆ.ಪಟ್ಟಣದಿಂದ ಶಿರಸಿ ಮಾರ್ಗವಾಗಿ ಮಳಗಿಗೆ ೨೫ ಕಿ.ಮೀ ಅಲ್ಲಿಂದ ೧೦ ಕಿ.ಮೀ ಹಾಗೂ ಶಿರಸಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಕಾಳೆಬೈಲ್ ಕ್ರಾಸ್ ಗೆ ೨೩ ಕಿ.ಮೀ, ಅಲ್ಲಿಂದ ಅಡ್ಡ ರಸ್ತೆ ಮೂಲಕ ೫.೫ ಕಿ.ಮೀ ಕ್ರಮಿಸಿದರೆ ಐತಿಹಾಸಿಕ ಬೆಡಸಗಾಂವ ಗ್ರಾಮದ ರಾಮಲಿಂಗೇಶ್ವರ ದೇವಾಲಯ ತಲುಪಬಹುದು.
ಮೂಲಭೂತ ಸೌಲಭ್ಯದ ಕೊರತೆ: ಈ ಸ್ಥಳ ಜಿಲ್ಲೆಯ ಐತಿಹಾಸಿಕ ಸ್ಥಳದಲ್ಲೊಂದಾಗಿದ್ದರೂ ಸರ್ಕಾರದಿಂದ ಇಲ್ಲಿ ಅಗತ್ಯ ಸೌಲಭ್ಯ ಒದಗಿಸಿಲ್ಲ. ಅದೇನೋ ಈಗ ದೇವರ ಕಾಡು ಯೋಜನೆಯಡಿ ತಕ್ಕ ಮಟ್ಟಿಗೆ ಅಭಿವೃದ್ಧಿಯಾಗುತ್ತಿದೆ. ಆದರೆ ನಿತ್ಯ ನೂರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಗೆ ಬರಲು ಮುಖ್ಯವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಇಲ್ಲಿಗೆ ಬರಬೇಕಾದವರು ಖಾಸಗಿ ವಾಹನದೊಂದಿಗೆ ಆಗಮಿಸಬೇಕಾದ ಅನಿವಾರ್ಯತೆ ಇದೆ. ಈ ದೇವಾಲಯದ ಜೀರ್ಣೋದ್ಧಾರಗೊಳಿಸಿ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಇದು ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡುವಲ್ಲಿ ಕೈಜೋಡಿಸಿದರೆ ಮಾತ್ರ ಈ ದೇವರ ಕಾಡು ಯೋಜನೆ ಯಶಸ್ವಿಯಾಗುತ್ತದೆ ಎನ್ನುತ್ತಾರೆ ಕಾತೂರ ವಲಯ ಅರಣ್ಯಾಧಿಕಾರಿ ವೀರೇಶ.
ದೇವರ ಕಾಡು ಯೋಜನೆ ಕಾಮಗಾರಿ ಉತ್ತಮವಾಗಿದ್ದು, ಅಗತ್ಯ ಮೂಲಸೌಕರ್ಯ ಹೆಚ್ಚಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಸಂರಕ್ಷಣೆಯೊಂದಿಗೆ ದೇವಾಲಯದ ಅಭಿವೃದ್ದಿ ಕೂಡ ಮಾಡಿರುವ ಅರಣ್ಯ ಇಲಾಖೆಯಿಂದ ಇಂತಹ ಮಹತ್ತರವಾದ ಯೋಜನೆ ಇಲ್ಲಿ ಕೈಗೊಂಡಿರುವುದು ಶ್ಲಾಘನಿಯ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ದೇವೇಂದ್ರ ನಾಯ್ಕ.