ರಾಂ ಅಜೆಕಾರು
ಮಂಗಳೂರು-ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಮಾಳ ಘಾಟ್‌ನಿಂದ ತನಿಕೋಡು ಗೇಟ್ ವರೆಗೆ ಅಗಲಿಕರಣ ಪ್ರಸ್ತಾಪವು ಅಂತಿಮ ಹಂತಕ್ಕೆ ತಲುಪಿದೆ. ಕಾಮಗಾರಿಗಾಗಿ 520 ಕೋಟಿ ರು. ಮೊತ್ತದ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಅಂತಿಮವಾಗಿದ್ದು, ಕಾಮಗಾರಿ ಅರಣ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಮಾತ್ರ ಬಾಕಿ ಇದೆ. ಕಾಮಗಾರಿ ವೇಳೆ ವ್ಯಾಪಕ ಅರಣ್ಯ ಹಾನಿಯಾಗಲಿದ್ದು, ಬ್ರಹ್ಮಾವರ ಬಳಿ ಪರ್ಯಾಯವಾಗಿ ಗಿಡ ನೆಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜಿಸಿದೆ.
ಕಾಮಗಾರಿ ಸಂದರ್ಭದಲ್ಲಿ ಹೆದ್ದಾರಿ ಒಟ್ಟು 11 ಮೀಟರ್ ಅಗಲೀಕರಣವಾಗಲಿದೆ.ಮಾಳ ಘಾಟ್ ನಿಂದ ತನಿಕೋಡು ಚೆಕ್ ಪೋಸ್ಟ್ ವರೆಗೆ ಒಟ್ಟು 29 ಕಿ.ಮೀ. ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಒಟ್ಟು 7 ಸೇತುವೆಗಳಿರಲಿದ್ದು ಪ್ರಸ್ತಾವಿತ ಹೆದ್ದಾರಿಯು ಈಗಿರುವ ರಸ್ತೆಯಲ್ಲಿಯೆ ಹಾದು ಹೋಗಲಿದೆ.ಮಾಳ ಘಾಟ್‌ನ ಅಬ್ಬಾಸ್ ಕಟ್ಟಿಂಗ್‌ನಲ್ಲಿ ಬಂಡೆಗಳನ್ನು ಒಡೆದು 12 ಮೀಟರ್ ಅಗಲೀಕರಣ ನಡೆಯಲಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ತನಿಕೋಡು ವರೆಗೆ ಒಟ್ಟಿನಲ್ಲಿ ಈ ವನ್ಯಜೀವಿ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ. ಕಾರ್ಕಳ ಮಾಳ ಗೇಟಿನಿಂದ ಮಂಗಳೂರಿನ ಕುಡುಪು ವರೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾಳ ಘಾಟ್ ರಸ್ತೆಗೆ ಸುರಂಗ ಮಾರ್ಗ ನಿರ್ಣಯ ಪ್ರಸ್ತಾಪವಾಗಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿಯ ಮಾಳ ಘಾಟ್ ನಿಂದ ತನಿಕೋಡು ಗೇಟ್ ವರೆಗೆ ಅಗಲಿಕರಣಕ್ಕಾಗಿ 11 ತಿರುವುಗಳು ಅಗಲೀಕರಣಗೊಳ್ಳಲಿದ್ದು ಸಹಸ್ರಾರು ಮರಗಳು ಬಲಿಯಾಗಲಿವೆ.
ಮಾಳ ಎಸ್ ಕೆ ಬಾರ್ಡರ್ ಹಾಗೂ ಕೆರೆಕಟ್ಟೆ ತನಿಕೋಡು ಮೂಲಕ ಶೃಂಗೇರಿ ತಲುಪುತ್ತದೆ. ಈ ಕಾಡಿನಲ್ಲಿ ಬಲು ಅಪರೂಪದ ಪಾರಂಪರಿಕ ಮರಗಳು ಪ್ರಾಣಿಗಳ ಅವಾಸ್ಥಾನವಾಗಿದೆ. ತುಂಗಾನದಿಯ 7 ಕ್ಕೂ ಹೆಚ್ಚು ಉಪನದಿಗಳು ಈ ರಸ್ತೆ ಸುತ್ತಲಿನ ಗುಡ್ಡಗಳ ಭಾಗದಲ್ಲಿಯೆ ಹುಟ್ಟುವ ಕಾರಣ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೀರಿನ ಸೆಲೆಗಳು ದಿಕ್ಕು ಬದಲಿಸುವ ಸಾಧ್ಯತೆ ಹೆಚ್ಚಾಗಲಿದೆ. ಕಾಮಗಾರಿ ಪರಿಸರದ ಮೇಲೆ ಭಾರಿ ಪರಿಣಾಮ ಬೀಳಲಿದೆ.
ಕುಸಿಯುವ ಹಂತದಲ್ಲಿ ಸೇತುವೆಗಳು: ಹೆದ್ದಾರಿಯಲ್ಲಿ ಒಟ್ಟು ಏಳು ಸೇತುವೆಗಳು ಸುಮಾರು 50 ವರ್ಷಕ್ಕಿಂತ ಹಳೆಯ ಸೇತುವೆಗಳಾಗಿವೆ. ಈ ಸೇತುವೆಗಳು ಕುಸಿಯುವ ಹಂತದಲ್ಲಿದ್ದು ತಡೆಗೋಡೆಗಳು ಕಿತ್ತುಹೋಗಿವೆ. ಈ 7 ಸೇತುವೆಯ ಕೆಳಭಾಗದಲ್ಲಿ ಕಬ್ಬಿಣದ ರಾಡ್‌ಗಳು ಹೊರ ಬಂದಿದ್ದು, ಅಪಾಯ ಆಹ್ವಾನಿಸುತ್ತಿವೆ. ವನ್ಯಜೀವಿ ವಿಭಾಗ ಪ್ರಸ್ತಾವಿತ ಹೆದ್ದಾರಿಯ ಅಗಲಿಕರಣದ ಸರ್ವೆ ನಡೆಸಿದ ಬಳಿಕ ಎಷ್ಟು ಮರಗಳ ತೆರವು ಗೊಳಿಸುವ ಮಾಹಿತಿ ಲಭಿಸಲಿದೆ..
ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿ 80 ಎಕರೆ ಜಾಗ ಲಭ್ಯವಾಗಿದೆ. ಇಲ್ಲಿ ಗಿಡ ನೆಡಲು ಸೂಕ್ತ ಪ್ರದೇಶ ವೆಂದು ಅಧ್ಯಯನ ನಡೆಸಲು ಅರಣ್ಯ ಮಾಹಿತಿ ನೀಡಲಿದೆ. ಈಗಾಗಲೇ ಹೆಚ್ಚುವರಿ ಜಮೀನು ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೆ ಪತ್ರ ಬರೆಯಲಾಗಿದೆ. ಒಂದೆಡೆ 50 ಹೆಕ್ಟೇರ್ ಜಮೀನಿಗೆ ಸಿಕ್ಕಿದರೆ ಉತ್ತಮ.