ಲಕ್ಷ್ಮೇಶ್ವರ: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ಪ್ರಧಾನಿ ಆದರೆ ನಮಗೇನು ಲಾಭ ಎಂದು ಕಾಂಗ್ರೆಸ್ ಮುಖಂಡರು ಕೇಳುತ್ತಿದ್ದಾರೆ. ಅವರಿಗೆ ನಾನು ಹೇಳುವುದಿದ್ದರೆ, ದೇಶದ 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಭ್ರಷ್ಟಾಚಾರವನ್ನು ತಡೆಗಟ್ಟುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.ಯಲುವಿಗಿ -ಗದಗ ರೈಲು ಮಾರ್ಗ ಮುಂಬರುವ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ರೈತರಿಗೆ ಹಾಗೂ ಬಡವರ ಪಾಲಿಗೆ ನರೇಂದ್ರ ಮೋದಿ ಅವರು ಆಶಾಕಿರಣವಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನಸಾಮಾನ್ಯರಿಗೆ ತಲುಪಿಲ್ಲ. ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಜನರು ದಾರಿ ತಪ್ಪಿಸುವ ಕಾರ್ಯ ಮಾಡಿದೆ. ಹಿಂದುಳಿದ ಹಾಗೂ ಎಸ್‌ಸಿ-ಎಸ್‌ಟಿ ವರ್ಗದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ನಿಜವಾದ ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ ಎಂದು ಹೇಳಿದರು.ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಚ್ಚು ಪರಿಹಾರ ನೀಡಿದ್ದು ಬಿಜೆಪಿ. ಕರ್ನಾಟಕದಲ್ಲಿ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಲೋಕಸಭಾ ಚುನಾವಣೆಯ ಆನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ. ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವ ಕಾರ್ಯ ನಾವು ಮಾಡುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ನಾನು ದುಡಿಯುವ ಕಾರ್ಯ ಮಾಡುತ್ತೇನೆ. ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಿ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ದುಡಿದು ನಿಮ್ಮ ಋಣ ತೀರಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ನಮ್ಮ ದೇಶದ ಭದ್ರತೆ ಹಾಗೂ ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ನಮ್ಮ ದೇಶದ ಪ್ರಧಾನಿ ಆಗಲು ನಿಮ್ಮೆಲ್ಲರ ಬೆಂಬಲ ನೀಡಬೇಕು. ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಆರಿಸಿ ಬರುವ ಮೂಲಕ ಕೇಂದ್ರ ಮಂತ್ರಿಯಾಗುವುದು ನಿಶ್ಚಿತ. ನಾವು ಬಿಜೆಪಿ ತಾಳಿ ಕಟ್ಟಿಕೊಂಡು ಬೇರೆಯವರಿಗೆ ತಲೆ ಬಾಗುವುದಿಲ್ಲ. ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ನಮ್ಮ ತಾಲೂಕಿಗೆ ನೀರಾವರಿ ಯೋಜನೆ ಸೇರಿದಂತೆ ಅನೇಕ ಕೊಡುಗೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಆರಿಸಿ ಬಂದು ನಮ್ಮ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ರಾಜು ಕುರುಡಗಿ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ, ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಹೇಮಗಿರೀಶ ಹಾವಿನಾಳ, ಸುನೀಲ ಮಹಾಂತಶೆಟ್ಟರ, ಫಕ್ಕೀರೇಶ ರಟ್ಟಿಹಳ್ಳಿ, ವಿಶ್ವನಾಥ ಕಪ್ಪತ್ತನವರ, ಉಮೇಶಗೌಡ ಪಾಟೀಲ, ಚಂಬಣ್ಣ ಬಾಳಿಕಾಯಿ, ನವೀನ ಬೆಳ್ಳಟ್ಟಿ, ವಿಜಯ ಕುಂಬಾರ, ನಿಂಗಪ್ಪ ಬನ್ನಿ, ಅಶ್ವಿನಿ ಅಂಕಲಕೋಟಿ, ಸುಭಾಷ್ ಬಟಗುರ್ಕಿ, ಬಿ.ಡಿ. ಪಲ್ಲೆದ, ಸಿದ್ದರಾಮಪ್ಪ ಮೊರಬದ, ಜಾನು ಲಮಾಣಿ, ರೇಖಾ ಅಳವಂಡಿ, ಡಾ. ಶೇಖರ ಸಜ್ಜನರ, ರಾಮಣ್ಣ ಡಂಬಳ, ಅಶೋಕ ಪಲ್ಲೇದ, ಪೂರ್ಣಾಜಿ ಖರಾಟೆ, ಸೋಮಣ್ಣ ಡಾಣಗಲ್ಲ, ಅಶೋಕ ಬಟಗುರ್ಕಿ, ಪ್ರವೀಣ ಬಾಳಿಕಾಯಿ, ನೀಲಪ್ಪ ಹತ್ತಿ, ಶಕ್ತಿ ಕತ್ತಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಠಡಿ, ಬಸವರಾಜ ಇಟಗಿ, ಮಂಜುನಾಥ ಕೆಂಚನಗೌಡರ, ಕುಬೇರಪ್ಪ ಮಹಾಂತಶೆಟ್ಟರ, ಥಾವರೆಪ್ಪ ಲಮಾಣಿ, ಈಶ್ವರ ಹುಲ್ಲಲ್ಲಿ, ದೇವಕ್ಕ ಲಮಾಣಿ, ಅನಿಲ ಮುಳಗುಂದ ಇದ್ದರು.ಭರ್ಜರಿ ರೋಡ್ ಶೋ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.ಸೋಮವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರು ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೋಮೇಶ್ವರ ದೇವಸ್ಥಾನದಿಂದ ಬೈಕ್ ರಾಲಿ ಆರಂಭವಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ರ‍್ಯಾಲಿಯು ಆನಂತರ ವೀರ ಗಂಗಾಧರ ಸಮುದಾಯ ಭವನಕ್ಕೆ ಬಂದು ತಲುಪಿತು.ಈ ವೇಳೆ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ. ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ವಿ.ವಿ. ಕಪ್ಪತ್ತನವರ, ಸುನೀಲ್ ಮಹಾಂತಶೆಟ್ಟರ, ಜಾನು ಲಮಾಣಿ, ಹೇಮಗಿರೀಶ ಹಾವಿನಾಳ, ಅಶೋಕ ಬಟಗುರ್ಕಿ, ತಿಪ್ಪಣ್ಣ ಕೊಂಚಿಗೇರಿ, ಲೋಹಿತ್ ನೆಲವಿಗಿ, ರಮೇಶ ದನದಮನಿ, ಮಹೇಶ ಬಡ್ನಿ, ಭೀಮಣ್ಣ ಯಂಗಾಡಿ, ಮಂಜುನಾಥ ಕೆಂಚನಗೌಡರ ಇದ್ದರು.