- ಎನ್ಆರ್ಎಲ್ಎಂ ಸಭಾಭವನ ಕಟ್ಟಡ ಉದ್ಘಾಟನೆಯಲ್ಲಿ ಸಂಸದೆ ಡಾ.ಪ್ರಭಾ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇರಿಕೊಂಡು ಒಬ್ಬರಿಗೊಬ್ಬರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿಯ ಆರ್.ಜಿ.ಎಸ್.ವೈ. ಯೋಜನೆ ಅಡಿಯಲ್ಲಿ ನಿರ್ಮಿತವಾದ ನೂತನ ಕಟ್ಟಡ ಮತ್ತು ಎನ್.ಆರ್.ಎಲ್.ಎಂ. ಸಭಾಭವನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾ.ಪಂ. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಪಿಡಿಒನೊಂದಿಗೆ ಚರ್ಚಿಸಿ ಅವಶ್ಯ ಕಾಮಗಾರಿಗಳ ಬಗ್ಗೆ ರೂಪರೇಷಗಳನ್ನು ಹಾಗೂ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳಿಸುವ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆಯನ್ನು ಸರ್ಕಾರದ ಆದೇಶದಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ವ್ಯಾಪ್ತಿಯ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಶಾಲೆಗಳು ಸಮರ್ಪಕವಾಗಿ ನಡೆಯುತ್ತವೆಯೋ, ಇಲ್ಲವೋ, ಶಾಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಪಾಠ- ಪ್ರವಚನಗಳನ್ನು ಮಾಡುವುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಪರಿಶೀಲನೆ ಮಾಡಬೇಕು. ಆಗ ಗ್ರಾಮೀಣ ಮಕ್ಕಳ ಶಿಕ್ಷಣ ಗುಣಮಟ್ಟ ಉತ್ತಮಗೊಳ್ಳುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 30 ವರ್ಷಗಳ ಹಿಂದೆ ಸರ್ಕಾರಿ, ಅನುದಾನ ಬಿಡುಗಡೆ ಸೇರಿದಂತೆ ಇತರ ಕೆಲಸಗಳಿಗೆ ವಿಧಾನಸೌಧಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಗ್ರಾ.ಪಂ.ಗಳಲ್ಲಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಗ್ರಾಪಂ ಪಿಡಿಒಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರು ನಮಗೆ ಈ ಪಿಡಿಒ ಬೇಡ ವರ್ಗಾ ಮಾಡಿ ಎನ್ನುವ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಯಾವುದೇ ಪಿಡಿಒ ಅವಕಾಶ ಮಾಡಿಕೊಡದಂತೆ ಒಳ್ಳೆಯ ಕೆಲಸ ಮಾಡಿಕೊಂಡು ಗ್ರಾಮಸ್ಥರ ನಂಬಿಕೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಗ್ರಾಪಂ ನೂತನ ಕಟ್ಟಡ ಹಾಗೂ ಸಭಾಭವನ ಉತ್ತಮವಾಗಿ ನಿರ್ಮಾಣಗೊಂಡಿದೆ. ಸಭಾಭವನವನ್ನು ಕೇವಲ ಮೀಟಿಂಗ್‍ಗಳಿಗೆ ಸೀಮಿತಗೊಳಿಸಿದೇ ಉತ್ತಮ ಕಾರ್ಯಗಳಿಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಉಮಾದೇವಿ ಡಿ.ತಿಮ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಆರ್.ನಾಗಪ್ಪ, ಗ್ರಾಪಂ ಉಪಾಧ್ಯಕ್ಷ ಎಚ್.ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಹನುಮಂತಮ್ಮ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಗ್ರಾಮದ ಮುಖಂಡ ಉಮೇಶ್ ಸ್ವಾಗತಿಸಿದರು.- - -
ಕೋಟ್ ದಾವಣಗೆರೆ ಸಂಸದರಾಗಿ ಆಯ್ಕೆ ಮಾಡಿದ ಮತದಾರರಿಗೆ ನಾನು ಸದಾ ಚಿರುಋಣಿಯಾಗಿದ್ದೇನೆ. ಮತದಾರರ ಹಾಗೂ ಸಾರ್ವಜನಿಕರ ಸೇವೆಗೆ ನಾನು ಸದಾ ಸಿದ್ದವಾಗಿರುತ್ತೇನೆ, ತಮ್ಮಗಳ ಯಾವುದೇ ಸಮಸ್ಯೆಗಳು ಇದ್ದರೆ ಜಿಲ್ಲಾಡಳಿತ ಕಚೇರಿಯಲ್ಲಿ ಹಾಗೂ ನಮ್ಮ ಮನೆಯಲ್ಲಿ ಸ್ಥಾಪಿತವಾಗಿರುವ ನನ್ನ ಕಚೇರಿಗೆ ಬಂದು ಇತ್ಯರ್ಥ ಮಾಡಿಕೊಳ್ಳಬಹುದು- ಡಾ. ಪ್ರಭಾ ಮಲ್ಲಿಕಾರ್ಜುನ, ಸಂಸದೆ
- - - -8ಎಚ್.ಎಲ್.ಐ3:ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಇತರ ಗಣ್ಯರು ಇದ್ದರು.