ತಿರುಪತಿ ಮಾದರಿಯಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ

KannadaprabhaNewsNetwork | Published : May 23, 2025 12:05 AM
ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಭಕ್ತರಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.
Follow Us

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಭಕ್ತರಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.

ನಗರದ ವಾರ್ತಾ ಭವನದಲ್ಲಿ ಗುರುವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಎಲ್ಲ ಮೂಲಸೌಕರ್ಯ ವ್ಯವಸ್ಥೆ ಒದಗಿಸುವುದರ ಜೊತೆಗೆ ಮುಖ್ಯವಾಗಿ ತಿರುಪತಿ ಮಾದರಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ರೇಣುಕಾ ಯಲ್ಲಮ್ಮ ದೇವಿ ಸನ್ನಿದಿಗೆ ಬರುವ ಭಕ್ತರೆಲ್ಲರಿಗೂ ತಾಯಿಯ ದರ್ಶನ ಕಡ್ಡಾಯವಾಗಿ ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು. ಭಕ್ತಾದಿಗಳ ಆರೋಗ್ಯಕ್ಕೆ ಪೂರಕವಾದ ವ್ಯವಸ್ಥೆಗಳಾದ ಶೌಚಾಲಯ, ಕುಡಿಯುವ ನೀರು, ವಸತಿ ನಿಲಯಗಳನ್ನು ಕಲ್ಪಿಸಲಾಗುವುದು ಎಂದರು.ದೇವಸ್ಥಾನವನ್ನು ಸಮಗ್ರ ಅಭಿವೃದ್ಧಿಗೆ ₹207.5 ಕೋಟಿ ವೆಚ್ಚದ ಎರಡು ಹಂತಗಳ ಯೋಜನೆ ರೂಪಿಸಲಾಗಿದೆ. ದೇವಾಲಯದ ಪೌರಾಣಿಕ ಘನತೆ ಉಳಿಸುವುದರ ಜೊತೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗುವುದು. ಮೊದಲು ಹಂತದಲ್ಲಿ, ಯಲ್ಲಮ್ಮ ದೇವಿಯ ಗರ್ಭಗುಡಿಯ ಸುತ್ತ-ಮುತ್ತ 100 ಮೀಟರ್ ವ್ಯಾಸದ ವೃತ್ತಾಕಾರದ ಸೌಕರ್ಯ ವಲಯ ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಸುಲಭ ದರ್ಶನ, ಶಾಂತ ಪ್ರಾರ್ಥನೆಗೆ ನಿರ್ಬಂಧರಹಿತ ಸ್ಥಳ ಒದಗಿಸಲಾಗುತ್ತದೆ. ದೇವಿಯ ನಾಮಸ್ಮರಣೆಯ ಕೇಂದ್ರಬಿಂದುಗಳಲ್ಲಿ ಭಜನೆಗಳು ಹಾಗೂ ಭಕ್ತಿಗೀತೆಗಳಿಗಾಗಿ ನಿರ್ದಿಷ್ಟ ಸ್ಥಳಗಳೂ ಸಿದ್ಧವಾಗಲಿವೆ. ₹16 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣದ ಮೂಲಕ ದೇವಾಲಯದ ಎಲ್ಲ ಕಾರ್ಯಚಟುವಟಿಕೆಗಳಿಗೆ ಕೇಂದ್ರಿಕೃತ ನಿಯಂತ್ರಣ ವ್ಯವಸ್ಥೆ ಸ್ಥಾಪನೆಯಾಗಲಿದೆ. ಇದರ ಮೂಲಕ ಭದ್ರತಾ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದು, ಸಿಬ್ಬಂದಿಗೆ ಕಾರ್ಯನಿರ್ವಹಣೆಯಲ್ಲಿ ಅನುಕೂಲವಾಗಲಿದೆ ಎಂದರು.ವಸತಿ ನಿಲಯ ನಿರ್ಮಾಣ: ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ 3,500ಕ್ಕೂ ಹೆಚ್ಚು ಭಕ್ತರು ತಂಗಬಹುದಾದ ₹40 ಕೋಟಿ ಹಾಸ್ಟೆಲ್ ಸಂಕೀರ್ಣವನ್ನು ಎರಡು ಮಹಡಿಯಲ್ಲಿ ನಿರ್ಮಿಸಲಾಗುವುದು. ಶೌಚಾಲಯ, ಆಹಾರ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಇದ್ದು, ಶಿಸ್ತುಬದ್ಧ ವ್ಯವಸ್ಥೆಯ ಮಾದರಿಯಾಗಲಿದೆ. ₹13 ಕೋಟಿ ವೆಚ್ಚದಲ್ಲಿ ದರ್ಶನ ಮಾರ್ಗ, ₹38 ಕೋಟಿ ವೆಚ್ಚದಲ್ಲಿ ಅನ್ನದಾಸೋಹ ಭವನ ನಿರ್ಮಾಣ ಮಾಡಲಾಗುವುದು. ಜೊತೆಗೆ ಜಾನುವಾರುಗಳಿಗೆ ಮೇವು ದಾಸೋಹ ಕೇಂದ್ರವನ್ನು ಸ್ಥಾಪಿಸಲಾಗುವುದು. ಜಮದಗ್ನಿ ದೇವಾಲಯದ ಮೇಲ್ಭಾಗದಲ್ಲಿ ₹36 ಲಕ್ಷ ವೆಚ್ಚದಲ್ಲಿ ವಾಹನ ನಿಲ್ದಾಣ, ಎತ್ತಿನ ಬಂಡಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲಾಗುವುದು ಎಂದು ತಿಳಿಸಿದರು.₹86.5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ವಿಐಪಿ ವಿಶ್ರಾಂತಿ ಗೃಹ, 2ನೇ ಹಂತದ ಅನ್ನದಾಸೋಹ ಭವನ, ಕ್ಯೂ ಕಾಂಪ್ಲೆಕ್ಸ್, ಕಲ್ಯಾಣಿ ನಿರ್ಮಾಣ ಸೇರಿದಂತೆ ಹೆಚ್ಚಿನ ಸೌಲಭ್ಯಗಳ ಸಮಗ್ರ ಯೋಜನೆ ಸಿದ್ಧವಾಗಿದೆ ಎಂದರು.ಬಫರ್ ವಲಯದಲ್ಲಿ ವನ್ಯಜೀವಿ ಸಫಾರಿ:

ಖಾನಾಪುರ ತಾಲ್ಲೂಕಿನ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ (ಬಿಡಬ್ಲ್ಯೂಎಸ್) ಪರಿಸರ ಪ್ರವಾಸೋದ್ಯಮವನ್ನು ಸರ್ಕಾರ ಯೋಜಿಸಿದೆ. ವನ್ಯಜೀವಿ ಸಫಾರಿಯನ್ನು ಅಭಯಾರಣ್ಯದ ಪ್ರಮುಖ ಅರಣ್ಯದಲ್ಲಿ ಅಲ್ಲ, ಬದಲಾಗಿ ಬಫರ್ ವಲಯದಲ್ಲಿ ಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ನಾವು ಸಫಾರಿ ಯೋಜನೆಗಾಗಿ ಅಭಯಾರಣ್ಯದ ಒಂದು ಸಣ್ಣ ಪ್ರದೇಶವನ್ನು ಆಯ್ಕೆ ಮಾಡಿದ್ದೇವೆ. ಸಫಾರಿ ನಡೆಸಲು ಈಗಾಗಲೇ ಒಂದು ರಸ್ತೆ ಇದೆ. ಇದಲ್ಲದೆ, ಮಾಲಿನ್ಯದ ಸಮಸ್ಯೆಯನ್ನು ಪರಿಗಣಿಸಿ ಸಫಾರಿಗೆ ಯಾವುದೇ ಡೀಸೆಲ್ ವಾಹನಗಳು, ವಿದ್ಯುತ್ ವಾಹನಗಳನ್ನು ಮಾತ್ರ ಬಳಸಲಾಗುವುದಿಲ್ಲ. ಈ ಯೋಜನೆಯು ಯುವ ಪೀಳಿಗೆಗೆ ಕಾಡು ಏನೆಂದು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.ಅರಣ್ಯ ನಿವಾಸಿಗಳ ಸ್ಥಳಾಂತರವನ್ನು ಒಂದೇ ಸ್ಥಳದಲ್ಲಿ ವನ್ಯಜೀವಿ ಸಫಾರಿಯನ್ನು ಪರಿಚಯಿಸುವುದರೊಂದಿಗೆ ಲಿಂಕ್ ಮಾಡಬೇಡಿ. ಎರಡೂ ವಿಭಿನ್ನ ವಿಷಯಗಳು. ನಾವು ಅರಣ್ಯ ಸಂರಕ್ಷಣೆಗಾಗಿ ಅರಣ್ಯ ನಿವಾಸಿಗಳನ್ನು ಸ್ಥಳಾಂತರಿಸುತ್ತಿಲ್ಲ, ಬದಲಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದೇವೆ. ನಿರ್ಬಂಧಗಳ ಕಾರಣದಿಂದಾಗಿ, ನಾವು ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ. ಸ್ಥಳಾಂತರ ಯೋಜನೆಯ ಮೂಲಕ, ಪರಿಹಾರವನ್ನು ಪಡೆದು ಅರಣ್ಯದ ಬಫರ್ ವಲಯಕ್ಕೆ ತೆರಳುವಂತೆ ನಾವು ಮನವಿ ಮಾಡಿದ್ದೇವೆ ಎಂದರು.ಅರಣ್ಯವಾಸಿಗಳನ್ನು ಸ್ಥಳಾಂತರಗೊಳ್ಳಲು ಪ್ರತಿ ಕುಟುಂಬಕ್ಕೆ ₹15 ಲಕ್ಷ ಪರಿಹಾರವಿದೆ. ಸ್ಥಳಾಂತರಗೊಳ್ಳಲು ಆಸಕ್ತಿ ಹೊಂದಿರುವ ಕುಟುಂಬಗಳಿಗೆ ಮೊದಲ ಕಂತಾಗಿ ₹10 ಲಕ್ಷ ನೀಡಲಾಗುತ್ತಿದೆ. ಅವರು ವಾಸಿಸಲು ಆ ಹಣದೊಂದಿಗೆ ಒಂದು ಸಣ್ಣ ತುಂಡು ಭೂಮಿಯನ್ನು ಪಡೆಯಬೇಕಾಗುತ್ತದೆ. ಅವರು ಭೂಮಿಯ ದಾಖಲೆಗಳನ್ನು ಒದಗಿಸಿದ ನಂತರ, ಮುಂದಿನ ಹಂತದ ಮೊತ್ತವನ್ನು ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.