ಹಸಿರು ಕ್ರಾಂತಿಯ ಹರಿಕಾರ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆ
ಕನ್ನಡಪ್ರಭ ವಾರ್ತೆ ರಾಮನಗರ
ದೇಶ ಇಂದು ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸಿರುವುದಕ್ಕೆ ಬಾಬು ಜಗಜೀವನ್ ರಾಂ ಹಾಕಿಕೊಟ್ಟ ಮಾರ್ಗಗಳೇ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಬಣ್ಣಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಮತ್ತು ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್‌ರಾಮ್ ಅವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು, ಜನಪರ ಯೋಜನೆಗಳು ಅಂದು, ಇಂದು, ಎಂದೆಂದಿಗೂ ಸಾರ್ವಕಾಲಿಕ. ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶಸೇವೆ ಮಾಡಿ ಸರ್ವಜನರ ಕಲ್ಯಾಣದ ಕನಸು ಕಂಡಿದ್ದವರು. ಆದ್ದರಿಂದ ಅವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಪಾಲಿಸುವಂತಾಗಬೇಕು. ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಯುವಜನತೆ ಇಂತಹ ಮಹನೀಯರ ಚರಿತ್ರೆ, ಇತಿಹಾಸ ಅಧ್ಯಯನ ಮಾಡಬೇಕು. ಆಗಲೇ ದೇಶಪ್ರೇಮ, ದೇಶದ ಅಭಿವೃದ್ಧಿ ಪರ ಚಿಂತನೆಗಳು ಮನದಲ್ಲಿ ಮೊಳೆಯುತ್ತವೆ. ಆಗಲೇ ಜನ್ಮ ಸಾರ್ಥಕವೆನಿಸುತ್ತದೆ ಎಂದು ಹೇಳಿದರು.