ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತ: ಸಿ.ಟಿ.ರವಿ

KannadaprabhaNewsNetwork |  
Published : Jan 05, 2024, 01:45 AM IST
4ಕೆಕೆಡಯು2 | Kannada Prabha

ಸಾರಾಂಶ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೇಳು ತಿಂಗಳಾದರೂ ತನ್ನ ನಡಿಗೆಯನ್ನೇ ಪ್ರಾರಂಭಿಸಿಲ್ಲ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ ಎಂದು ಕಡೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿಟಿ ರವಿ ಆರೋಪಿಸಿದರು.

- ಆರೇಳು ತಿಂಗಳಾದರೂ ಸರ್ಕಾರ ತನ್ನ ನಡಿಗೆಯನ್ನೇ ಪ್ರಾರಂಭಿಸಿಲ್ಲ: ಆರೋಪ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೇಳು ತಿಂಗಳಾದರೂ ತನ್ನ ನಡಿಗೆಯನ್ನೇ ಪ್ರಾರಂಭಿಸಿಲ್ಲ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ ಎಂದು ಮಾಜಿ ಸಚಿವ ಸಿಟಿ ರವಿ ಆರೋಪಿಸಿದರು.

ಕಡೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಪ್ಪು ಮಾಡಿದವರನ್ನು ಕ್ಷಮಿಸಬಹುದು ಆದರೆ ಮೋಸ ಮಾಡಿದವರಿಗೆ ದ್ವೇಷ ಇರುತ್ತದೆ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರು. ಗಳನ್ನು ಇತರೆ ಕೆಲಸಗಳಿಗೆ ವರ್ಗಾಯಿಸಿದ್ದು ದಲಿತರಿಗೆ ಮಾಡಿದ ಮೋಸ ಅಲ್ಲವೆ ? ಎಂದ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಘೋಷಿಸಿದ ಸರ್ಕಾರ ಈಗಾಗಲೇ 1ಸಾವಿರ ಕೋಟಿ ರು. ಬಿಡುಗಡೆ ಮಾಡಿದೆ. ಇದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿ ತೋರಿಸುತ್ತಿದೆ ಇದಕ್ಕಿಂತ ಸಾಕ್ಷಿ ಬೇಕೆ ಎಂದರು.

ಕಾಂಗ್ರೆಸ್ ಸರ್ಕಾರ ರಚನೆಯಾಗಿ ಏಳು ತಿಂಗಳಾಗುತ್ತಾ ಬಂದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಆಗಿಲ್ಲ. 1280 ಕೋಟಿ ರು.ಗಳ ಭದ್ರಾ ಉಪ ಕಣಿವೆ ಯೋಜನೆಯನ್ನು ಮಂಜೂರು ಮಾಡಿಸಿ ಮೊದಲನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿದ್ದು ಬಿಜೆಪಿ ಸರ್ಕಾರ. ಆದರೆ ತರೀಕೆರೆ ಶಾಸಕರಾದ ಶ್ರೀನಿವಾಸ್ ಸೇರಿದಂತೆ ಈಗ ಇದನ್ನು ನಾವೇ ಮಾಡಿದ್ದು ಎಂದು ಕಾಂಗ್ರೆಸ್ ನವರು ಹೇಳಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಡೂರು ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ ಮತ್ತು ಶೃಂಗೇರಿ ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಶಂಕುಸ್ಥಾಪನೆ ಮಾಡಿದ ಕಾರ್ಯಗಳನ್ನು ಕಾಂಗ್ರೆಸ್ ನವರು ಉದ್ಘಾಟನೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಐದು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೊಸದಾಗಿ ಜಿಲ್ಲೆಗೆ ಏನನ್ನು ತಂದಿದ್ದೀರಿ ತಿಳಿಸಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಮಾಡಿರುವ ಕಾರ್ಯ ಗಳಿಗೆ ಕಾಂಗ್ರೆಸ್‌ನವರು ಪ್ರಚಾರ ಪಡೆಯುತಿದ್ದಾರೆ ಎಂದರು.

ಧರಮ್ ಸಿಂಗ್ ಮುಖ್ಯಮಂತ್ರಿಗಳಾದಾಗ 2005ರಲ್ಲಿ ಸದಾಶಿವ ಆಯೋಗ ರಚನೆಯಾಗಿತ್ತು. ಅದರ ವರದಿ ಸ್ವೀಕಾರ ಮಾಡಿದ್ದು ಸದಾನಂದ ಗೌಡರು ಮುಖ್ಯಮಂತ್ರಿ ಆದಾಗ. ಆದರೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನವರು ನಾವು ಸದಾಶಿವ ಆಯೋಗದ ವರದಿ ನಾವು ಜಾರಿಗೊಳಿಸುತ್ತೇವೆ ಎಂದಿದ್ದರು. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ವರದಿಯನ್ನು ಕಣ್ಣೆತ್ತಿ ಕೂಡ ನೋಡಲಿಲ್ಲ. ಮತ್ತೆ ಒಂದು ವರ್ಷ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ವರದಿ ಜಾರಿಗೆ ತರಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ದಲಿತರಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದೆ. ಎಸ್ಸಿಗೆ ಶೇ 15 - 17, ಎಸ್ ಟಿ ಸಮುದಾಯಕ್ಕೆಶೇ 3-7 ನೀಡಲಾಯಿತು. ಆದರೂ ಬಿಜೆಪಿ ದಲಿತರ ವಿರೋಧಿ, ಮೀಸಲಾತಿ ತೆಗೆಯುತ್ತಾರೆ ಎಂದು ಆರೋಪಿಸುತ್ತಾರೆ. ಅಂಬೇಡ್ಕರ್‌ ನ್ನು ಸೋಲಿಸಿದ್ದು, ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರ ಪಂಚಧಾಮಗಳನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ. ಅವರ ಸಂಸ್ಕಾರಕ್ಕೂ ಜಾಗ ನೀಡದೆ ಅಪಮಾನ ಮಾಡಿದ್ದು ಕಾಂಗ್ರೆಸ್ ಎಂದರು.

ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟದಲ್ಲಿ ಸತ್ಯ ಗೆಲ್ಲಲೇಬೇಕು ನಾವು ಸತ್ಯದ ಪರವಾಗಿ ನಿಂತಿದ್ದೇವೆ ದಲಿತರ ಅಭಿವೃದ್ಧಿಯಾದರೆ ಭಾರತ ಅಭಿವೃದ್ಧಿ ಎಂಬುದು ನಮ್ಮ ಚಿಂತನೆ.ಆದರೆ ದಲಿತರನ್ನು ಕಾಂಗ್ರೆಸ್ ತಮ್ಮ ವೋಟ್ ಬ್ಯಾಂಕ್ ಮಾಡಿಕೊಂಡಿರುವುದು ಕಾಂಗ್ರೆಸ್ ನವರ ಚಿಂತನೆ ಎಂದು ಟೀಕಿಸಿದರು.

ಮುಖಂಡರಾದ ಟಿ.ಆರ್.ಲಕ್ಕಪ್ಪ, ಬಿ.ಪಿ.ದೇವಾನಂದ್, ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷ್ಮಣ್, ಶಾಮಿಯಾನ ಚಂದ್ರು, ರಾಘವೇಂದ್ರ, ಅಂಬೇಡ್ಕರ್ ನಗರ ಸುರೇಶ್, ಸಗುನಪ್ಪ್ಪ ಸೇರಿದಂತೆ ಮತ್ತಿತರರು ಇದ್ದರು.4ಕೆಕೆಡಿಯು2.

ಕಡೂರು ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸುದ್ದಿಗೋಷ್ಟಿ ನಡೆಸಿದರು.ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ