ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಉದ್ಧಾರಕ್ಕೆ ಅಭಿವೃದ್ಧಿಪರ ಚಿಂತನೆಯೇ ಕಾಲದ ಅಗತ್ಯ. ರಾಜಕೀಯ ಟೀಕೆ-ಟಿಪ್ಪಣಿಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೆಎಸ್‌ಡಿಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್ಸಿ/ಎಸ್ಟಿ ಪಂಗಡದ ಎಸ್‌ಎಫ್‌ಸಿ ಅನುದಾನ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿವೃದ್ಧಿ ನಮ್ಮ ಮೂಲ ಮಂತ್ರವಾಗಿರಬೇಕು. ರಾಜಕೀಯದಲ್ಲಿ ಕೇವಲ ಕೇಕೆ ಹಾಕಿಸಿಕೊಳ್ಳುವುದರಿಂದ ಪಟ್ಟಣ ಬೆಳೆಯುವುದಿಲ್ಲ. ಎಲ್ಲೆಡೆ ಕಸ ಚೆಲ್ಲುವುದು, ಸಾರಿಗೆ ನಿಯಮ ಪಾಲಿಸದೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಜನರು ಸ್ವತಃ ಜಾಗೃತರಾಗದಿದ್ದರೆ ಸರ್ಕಾರ ಎಷ್ಟೇ ಕ್ರಮಕೈಗೊಂಡರೂ ಪ್ರಯೋಜನವಾಗುವುದಿಲ್ಲ. ಎಲ್ಲ ವಸ್ತುಗಳ ಬೆಲೆ ತಿಳಿದಿರಬೇಕು, ಆದರೆ ನಮ್ಮ ರಕ್ಷಣೆ ನಾವೇ ಮಾಡಿಕೊಂಡಾಗ ಮಾತ್ರ ಸಮಾಜ ಸುಧಾರಿಸುತ್ತದೆ. ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿದಾಗ, ದೇವರಿರುವ ಬಗ್ಗೆ ಪ್ರಶ್ನೆ ಕೇಳುವ ಪರಿಸ್ಥಿತಿ ಬಂದಿದೆ. ಮಳೆಯಿಂದ ಉತ್ತರ ಭಾರತವೇ ಕೊಚ್ಚಿ ಹೋದಾಗ ದೇವರು ಎಲ್ಲಿದ್ದ? ಎಂದು ಪ್ರಶ್ನಿಸಿದರು.ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ ಮಾತನಾಡಿ ಶಾಸಕ ನಾಡಗೌಡ ಅವರ ಚಿಂತನೆಯಿಂದ ಹಂತ ಹಂತವಾಗಿ ಅಭಿವೃದ್ಧಿಗೆ ಅನುದಾನ ಸಿಗುತ್ತಿದ್ದು, ₹5 ಕೋಟಿ ಅನುದಾನದಲ್ಲಿ ಪಟ್ಟಣದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಂಡಿದ್ದಾಗಿ ತಿಳಿಸಿದರು.ಒಟ್ಟು ₹17.1 ಲಕ್ಷ ಅನುದಾನದಲ್ಲಿ 6 ಪದವೀಧರರಿಗೆ ₹ 4.76 ಲಕ್ಷದಲ್ಲಿ ಗಣಕಯಂತ್ರಗಳು, ₹ 2.1 ಲಕ್ಷದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ, 204 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ₹ 4.74 ಲಕ್ಷದಲ್ಲಿ ವಿವಿಧ ಪಂಗಡವರಿಗೆ ಸೀಲಿಂಗ್ ಫ್ಯಾನ್, ₹ 4.04 ಲಕ್ಷದಲ್ಲಿ ಅಡುಗೆ ಪಾತ್ರೆ ಸಾಮಾನುಗಳನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.ಈ ವೇಳೆ ಸಿಒ ಈರಣ್ಣ ಕೊಣ್ಣೂರ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ, ಸದಸ್ಯರಾದ ಪೃಥ್ವಿರಾಜ ನಾಡಗೌಡ, ಅಮರಪ್ಪ ಸೀರಿ, ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ಶಿವಪುತ್ರಪ್ಪ ಗುರಿಕಾರ, ರಮೇಶ ಆಲಕೊಪ್ಪರ, ಲತಾ ಗೊರಬಾಳ, ಯಮನವ್ವ ಬಂಡಿವಡ್ಡರ, ಸೋಮು ಬಡಿಗೇರ, ನೀಲಪ್ಪ ಸಿದ್ಧಾಪೂರ, ಅಶೋಕ ಇಲಕಲ್, ಸಂಗಣ್ಣ ಮುರಾಳ, ಬಾಲಚಂದ್ರ ಗದಗಿನ ಇದ್ದರು. ಬಸವರಾಜ ಹುಡೇದ ನಿರೂಪಿಸಿ ವಂದಿಸಿದರು.