ಕನ್ನಡಪ್ರಭ ವಾರ್ತೆ ಆಲೂರು
ಸುಬ್ರಹ್ಮಣ್ಯ ಷಷ್ಠಿ ಸಂದರ್ಭದಲ್ಲಿ ಸುಬ್ರಹ್ಮಣ್ಯದಲ್ಲಿ ರಥೋತ್ಸವ ನಡೆಯುವ ದಿನ ಮಲೆನಾಡು ಭಾಗದ ಬಹುತೇಕ ಕುಟುಂಬಗಳು ಷಷ್ಠಿ ಹಬ್ಬವನ್ನು ತರಕಾರಿ ಹಂಚುವ ಮೂಲಕ ಆಚರಿಸುತ್ತಾರೆ.ಹಬ್ಬದ ದಿನ ಮನೆ ಶುಚಿಗೊಳಿಸಿ, ಶೃಂಗರಿಸುತ್ತಾರೆ. ಪ್ರತಿಯೊಬ್ಬರ ಮನೆಯಲ್ಲಿ ತರಕಾರಿಯನ್ನು ಇಷ್ಟ ಮಿತ್ರ, ಬಂಧುಗಳಿಗೆ ಹಂಚುತ್ತಾರೆ. ಅವರ ಮನೆಯಿಂದಲೂ ತರಕಾರಿಯನ್ನು ತಂದು, ಎಲ್ಲ ತರಕಾರಿಯನ್ನು ಒಟ್ಟಿಗೆ ಸೇರಿಸಿ ಅಡುಗೆ ತಯಾರು ಮಾಡುತ್ತಾರೆ. ತರಕಾರಿಯನ್ನು ಪ್ರತಿ ಮನೆಗಳಿಗೆ ಹಂಚುವುದರಿಂದ ಸ್ನೇಹ ಬಾಂಧವ್ಯ ಮುಂದುವರಿಯುತ್ತದೆ.
ಎಲ್ಲಾ ತರಕಾರಿಯನ್ನು ಒಟ್ಟು ಸೇರಿಸಿ ಮಾಡಿದ ಅಡುಗೆಯಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಅಡಗಿದೆ ಎಂದು ಹಿರಿಯರು ಹೇಳುತ್ತಾರೆ. ವಿಶೇಷವಾಗಿ ಇಷ್ಟಾರ್ಥ ಸಿದ್ಧಿಸಲೆಂದು ಹರಕೆ ಹೊತ್ತವರು ಪೂಜೆ ಸಲ್ಲಿಸಿದ ಬಳಿಕ ನೆಲದ ಮೇಲೆ ಊಟ ಸವಿಯುತ್ತಾರೆ. ಉಳಿದವರು ಬಾಳೆಎಲೆ ಮೇಲೆ ಊಟ ಸವಿಯುತ್ತಾರೆ.ಹಿಂದಿನ ದಿನಗಳಲ್ಲಿ ಸಗಣಿಯಲ್ಲಿ ಸಾರಿಸಿದ ನೆಲದ ಮೇಲೆ ಊಟ ಸವಿಯುತ್ತಿದ್ದರು. ವಿಶೇಷವಾಗಿ ಶರೀರದ ಮೇಲೆ ನೆರುಳೆ ಇದ್ದವರು ಸಗಣಿ ನೆಲದ ಮೇಲೆ ಊಟ ಸವಿಯುತ್ತಾರೆ. ಸಗಣಿ ನೆಲದ ಮೇಲೆ ಎಲ್ಲ ತರಕಾರಿ ಸೇರಿಸಿದ ಅಡುಗೆ ಸೇವಿಸಿದರೆ ಮೈಮೇಲೆ ಇರುವ ನೆರುಳೆ ಗುಣವಾಗುತ್ತದೆ ಎನ್ನುವುದು ಪುರಾತನ ಕಾಲದಿಂದ ನಡೆದು ಬಂದಿರುವ ವಾಡಿಕೆ.ಕೆಲವರು ಮನೆಯಲ್ಲಿ ಕಳಸವನ್ನಿಟ್ಟು ಪೂಜೆ ಸಲ್ಲಿಸಿದರೆ, ಕೆಲ ಕುಟುಂಬಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವಂತೆ ಹುತ್ತಗಳಿಗೆ ಹಾಲು ಎರೆದು ಪೂಜೆ ಸಲ್ಲಿಸುತ್ತಾರೆ. ಕೆಲ ಮನೆಗಳಲ್ಲಿ ಕಳಸವಿಟ್ಟು ನೆದ ಮೇಲೆ ಎಡೆ ಇಟ್ಟು ಪೂಜೆ ಸಲ್ಲಿಸಿ, ಹರಕೆ ಹೊತ್ತವರು ನೆಲದ ಮೇಲೆ ಎಡೆ ಸವಿಯುತ್ತಾರೆ. ಒಟ್ಟಾರೆ ಈ ಹಬ್ಬವನ್ನು ಅತ್ಯಂತ ಶುಚಿ ಹಾಗೂ ಭಕ್ತಿಯಿಂದ ಆಚರಿಸುತ್ತಾರೆ. *ಹೇಳಿಕೆ
ಷಷ್ಠಿ ಹಬ್ಬದ ದಿನ ಶುಚಿ ಮತ್ತು ಭಕ್ತಿಯಿಂದ ಉಪವಾಸವಿದ್ದು ಆಚರಿಸುತ್ತೇವೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ನಾಗದೇವತೆಗೆ ಅಪಚಾರವಾಗದಂತೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತೇವೆ. ಇಷ್ಟಾರ್ಥ ನೆರವೇರಲಿ ಎಂದು ಕಳಸವಿಟ್ಟು ಪೂಜೆ ಸಲ್ಲಿಸಿ ನೆಲದ ಮೇಲೆ ಊಟ ಸವಿಯುವುದನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದೇನೆ. - ವಿಜಯಲಕ್ಷ್ಮಿ ದಯಾಕರ, ಹೌಸಿಂಗ್ ಬೋರ್ಡ್, ಆಲೂರು