ಕನ್ನಡಪ್ರಭ ವಾರ್ತೆ,ತೇರದಾಳ,(ರ-ಬ)
ಶಿವರಾತ್ರಿ ಅಮವಾಸ್ಯೆಯಂದು ಕಾಲಜ್ಞಾನ ಸಾರುವ ಆಧ್ಯಾತ್ಮಿಕ ಕ್ಷೇತ್ರವಾದ ಬಬಲಾದಿಯಲ್ಲಿ ಜರುಗುವ ಸದಾಶಿವ ಜಾತ್ರೆಗೆ ತೇರದಾಳದಿಂದ ಭಕ್ತರು ಎತ್ತಿನ ಗಾಡಿ ಹಾಗೂ ಪಾದಯಾತ್ರೆ ಮೂಲಕ ಭಾನುವಾರ ತೆರಳಿದರು.ಹಲವು ವರ್ಷಗಳ ಹಿಂದೆ ಹೀಗೆ ಭಕ್ತರು ಹೋಗುತ್ತಿದ್ದು, ಕಾರಣಾಂತರಗಳಿಂದ ಯಾತ್ರೆ ಸ್ಥಗಿತವಾಗಿತ್ತು, ಈ ವರ್ಷ ಮತ್ತೆ ಸಂಪ್ರದಾಯ ಪುನಾರಂಭಿಸಿದ್ದಾರೆ. ೫೦ಕ್ಕೂ ಹೆಚ್ಚಿನ ಎತ್ತಿನ ಗಾಡಿಗಳಲ್ಲಿ ಹಾಗೂ ೧೦೦ಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ತೆರಳಿದರು. ಯಾತ್ರೆ ಆರಂಭಕ್ಕೂ ಮುನ್ನ ಎತ್ತು ಹಾಗೂ ಗಾಡಿಗಳನ್ನು ವಿಶೇಷವಾಗಿ ಬಣ್ಣ ಬಳಿದು, ತಳಿರು ತೋರಣಗಳಿಂದ ಸಿಂಗರಿಸಿದ್ದರು. ಯಾತ್ರೆಗೆ ತೆರಳುವ ಭಕ್ತರು ಅಲ್ಲಿನ ಜಾತ್ರೆಯಲ್ಲಿ ಪ್ರಸಾದ ತಯಾರಿಸಲು ೨೫ ಕ್ವಿಂಟಲಗಿಂತಲೂ ಅಧಿಕ ದವಸ ಧಾನ್ಯಗಳನ್ನು ಗಾಡಿಗಳಲ್ಲಿ ತುಂಬಿಸಿಕೊಂಡಿದ್ದರು.
ಪಟ್ಟಣದ ಕಲ್ಲಟ್ಟಿಯ ಗಂಗಾಧರ ದೇವಸ್ಥಾನ ಮುಂದೆ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಅಲ್ಲಿಂದ ಪೇಟೆ ಮಾರ್ಗವಾಗಿ ಯಲ್ಲಮ್ಮ ದೇವಸ್ಥಾನ, ಬಸ್ ನಿಲ್ದಾಣ ಹಾಗೂ ಮಹಾವೀರ ವೃತ್ತದಲ್ಲಿ ಮತ್ತಷ್ಟು ಭಕ್ತರು ಕೂಡಿಕೊಂಡು ಯಾತ್ರೆ ಆರಂಭಿಸಲಾಯಿತು. ಹಲವು ಕಲಾವಿದರು ವಾದ್ಯಮೇಳದ ಮೂಲಕ ಯಾತ್ರಿಕರನ್ನು ಬೀಳ್ಕೊಟ್ಟರು.ಬಹಳ ವರ್ಷಗಳ ನಂತರ ಇಂತಹದ್ದೊಂದು ಯಾತ್ರೆ ಆರಂಭವಾಗಿದ್ದು, ವಾಹನಗಳ ಭರಾಟೆಯ ಮಧ್ಯೆಯೂ ಚಕ್ಕಡಿಯೊಂದಿಗೆ ಜನರು ಒಗ್ಗಟ್ಟಾಗಿ ಯಾತ್ರೆ ಆರಂಭಿಸಿದ್ದ ಜನರಲ್ಲಿ ಸಂತಸ ಮೂಡಿಸಿತ್ತು. ಭಾನುವಾರ ತೇರದಾಳದಿಂದ ರಬಕವಿ, ಬನಹಟ್ಟಿ, ಯಲ್ಲಟ್ಟಿ, ಹುನ್ನೂರ ಮಾರ್ಗವಾಗಿ ಸಾಗಿ ಜಮಖಂಡಿಯಲ್ಲಿ ಉಳಿದುಕೊಂಡು, ಸೋಮವಾರ ಪ್ರಯಾಣ ಬೆಳೆಸಿ ತೇರದಾಳದಿಂದ ಅಂದಾಜು ೭೦ ಕಿ.ಮೀ ದೂರದ ಬಬಲಾದಿ ಕ್ಷೇತ್ರವನ್ನು ಸಂಜೆ ತಲುಪುಲಾಗುತ್ತದೆ ಎಂದು ಯಾತ್ರಿಕರು ತಿಳಿಸಿದರು.
ಭಕ್ತರು ಪ್ರಸಾದ, ಉಪಹಾರ ವ್ಯವಸ್ಥೆ ಮಾಡಿದ್ದರು. ನಿಂಗಪ್ಪ ಮಲಾಬದಿ, ಸದಾಶಿವ ಹೊಸಮನಿ, ಆದಿನಾಥ ಬಾಹುಬಲಿ ಸವದತ್ತಿ, ಬಸವರಾಜ ಮುದಕನ್ನವರ, ಈಶ್ವರ ಭ್ರಂಗಿ, ಮಲ್ಲಪ್ಪ ಬಾಳಿಕಾಯಿ, ನಾಗರಾಜ ಮುದಕನ್ನವರ, ಅಣ್ಣಪ್ಪ ಕೆಂಗಾಲಿ, ಮಲ್ಲಪ್ಪ ಆದನ್ನವರ, ಸಿದ್ದಪ್ಪ ಬನಾಜ, ಸುಭಾಸ ಮಾಕಾಳಿ, ತುಳಜಪ್ಪ ಮಸೂತಿ ಸೇರಿದಂತೆ ಕಲ್ಲಟ್ಟಿಯ ಗೆಳೆಯರ ಬಳಗದವರು ಹಾಗೂ ಹಲವು ಭಕ್ತರು ಇದ್ದರು.