ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಸ್ಥೆ ಹಲವು ಯೋಜನೆ ಕೊಟ್ಟಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಆರ್ ಟಿಒ ಅಧಿಕಾರಿಗಳ ಸಂಘದರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.ಚೌಡೇನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಸಾಧನ ಸಮಾವೇಶ, ಸಹಸ್ರ ಬಿಲ್ವಾರ್ಚನೆ, ಬೀದಿ ಬದಿ ವ್ಯಾಪಾರಿಗಳ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆ ಧಾರ್ಮಿಕ ಜಾಗೃತಿ, ಶಿಕ್ಷಣಕ್ಕೆ ಒತ್ತು ನೀಡದೇ ಕೆರೆಕಟ್ಟೆಗಳ ಸಂರಕ್ಷಣೆಗೆ ಮುಂದಾಗಿದೆ. ಕೆರೆಕಟ್ಟೆಗಳ ಊಳು ತೆಗೆದು ಜಲಸಂರಕ್ಷಣೆ, ಕಾಡು, ವನಸಂರಕ್ಷಣೆಗೆ ಸೀಡ್‌ಬಾಲ್‌ನಂತಹ ಕಾರ್ಯಕ್ರಮ ವಿಶೇಷವಾಗಿದೆ ಎಂದರು.
ನೀರು ಜೀವಾಮೃತ. ಮಿತಬಳಕೆ ಮಾಡಿ ಕೆರೆಕಟ್ಟೆಗಳನ್ನು ಉಳಿಸುವ ಪ್ರತಿಜ್ಞೆ ಮಾಡಿ. ಜಲಮೂಲ, ಅಂತರ್ಜಲ ವೃದ್ಧಿಗೆ ಪಣತೊಡಬೇಕು. ಪ್ರಾಣಿ ಪಕ್ಷಿಗಳಿಗೆ ಮನೆಯ ಮುಂದೆ ನೀರು, ಆಹಾರ ಪಾತ್ರೆ ಇಡಬೇಕು. ಸಂಸ್ಥೆಯ ಸಾಮೂಹಿಕ ಧಾರ್ಮಿಕ ಪೂಜೆ, ದೇಗುಲ ಜೀರ್ಣೋದ್ಧಾರದಿಂದ ಭಗವಂತ ತೃಪ್ತನಾಗಲಿದ್ದಾನೆ. ಗ್ರಾಮಗಳಲ್ಲಿ ಐಕ್ಯತೆ, ಸಾಮರಸ್ಯ ಮೂಡಲು, ಆರ್ಥಿಕ ಸಮಸ್ಯೆ ನಿವಾರಣೆ, ಸ್ವಾವಲಂಭನೆಗಾಗಿ ಆರ್ಥಿಕ ವಹಿವಾಟು, ಸಹಕಾರ ಬಲುಪಯೋಗಿಯಾಗಿದೆ ಎಂದರು.ಸಂಸ್ಥೆ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಸಂಘಟಿಕ ಬದುಕಿಗಾಗಿ ಸಂಘ ಸ್ಥಾಪಿಸಲಾಗಿದೆ. ನೊಂದವರನ್ನು ಮುಖ್ಯವಾಹಿನಿಗೆ ಕರೆತರಲು ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಶಿಕ್ಷಣ ಕಡ್ಡಾಯ ಕೊಡಿಸಿ ಸುಶಿಕ್ಷಿತರನ್ನಾಗಿಸಿ ಎಂದು ಸಂಸ್ಥೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ಉತ್ತಮ ಸಾಧನೆ ಮಾಡಿದ ಸಂಘಗಳಿಗೆ, ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಹಸ್ರ ಬಿಲ್ವಾರ್ಚನೆಯೊಂದಿಗೆ ಪೂಜಾಕೈಂಕರ್ಯ ನೆರವೇರಿಸಿ ಧಾರ್ಮಿಕಜಾಗೃತಿ ಮೂಡಿಸಲಾಯಿತು.ಈ ವೇಳೆ ಸಂಸ್ಥೆ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಗ್ರಾಪಂ ಅಧ್ಯಕ್ಷೆ ಅಂಬುಜಮ್ಮ, ಜನಜಾಗೃತಿ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಸ್ಥಳೀಯ ಒಕ್ಕೂಟ ಅಧ್ಯಕ್ಷ ಅವಿನಾಶ್, ರೇವಣ್ಣ, ಮೇಲ್ವಿಚಾರಕರಾದ ಕಾಂತಿಕಾಮಣಿ, ರೇಣುಕಾ, ಪ್ರವೀಣ, ಮಧುಸೂದನ್, ಸೇವಾ ಪ್ರತಿನಿಧಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.