ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಡಿ.3ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನಾಬಾಧಿತ ಸಂತ್ರಸ್ತರ ಹೋರಾಟ ಸಮಿತಿಯಿಂದ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯ ಸಂತ್ರಸ್ತರು ಅಂದು ಬೆಳಗ್ಗೆ 11 ಗಂಟೆಗೆ ನಗರದ ಕಾಳಿದಾಸ ಸರ್ಕಲ್‌ನಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿ/ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.
ಮುಖ್ಯಮಂತ್ರಿಗಳು ವಿಜಯಪುರದಲ್ಲಿ ಯುಕೆಪಿ ಸಮಾವೇಶದಲ್ಲಿ ನೀಡಿರುವ 6ನೇ ಗ್ಯಾರಂಟಿಯಾದ ನೀರಾವರಿ ಗ್ಯಾರಂಟಿ ಅನುಷ್ಠಾನಗೊಳಿಸಬೇಕು. ವರ್ಷಕ್ಕೆ ₹40,000 ಕೋಟಿಯಂತೆ ಐದು ವರ್ಷದಲ್ಲಿ ₹2 ಲಕ್ಷ ಕೋಟಿ ಹಣ ಒದಗಿಸಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಪೂರ್ಣಗೊಳಿಸಿ, 130 ಟಿಎಮ್‌ಸಿ ನೀರು ಬಳಸಿಕೊಂಡು 15 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸುವುದಾಗಿ ನೀಡಿರುವ ಭರವಸೆಯಂತೆ 2023ನೇ ಸಾಲಿನ ₹40000 ಕೋಟಿ ಹಾಗೂ 2024ನೇ ಸಾಲಿನ ₹40000 ಕೋಟಿ ಒಟ್ಟು ₹80000 ಕೋಟಿ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಒದಗಿಸಿ ನುಡಿದಂತೆ ನಡೆದು ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,000 ಎಕರೆ ಜಮೀನು ಹಾಗೂ ಮುಳುಗಡೆಯಾಗುವ 20 ಗ್ರಾಮಗಳ ಭೂ ಸ್ವಾಧೀನ ಪ್ರಕ್ರಿಯ ಚಾಲ್ತಿಯಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧ ಇರುವುದರಿಂದ ಯೋಜನಾ ಬಾಧಿತರು ತೀವ್ರ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಶೀಘ್ರವಾಗಿ ಈಗಾಗಲೇ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು 524.256 ಹಂತಕ್ಕೆ ಏಕಕಾಲಕ್ಕೆ ಸ್ವಾಧೀನಪಡಿಸಿಕೊಂಡು ಅತಂತ್ರ ಸ್ಥಿತಿ ಹೋಗಲಾಡಿಸಬೇಕು ಎಂದರು.
ಭೂಸ್ವಾಧೀನ ಪ್ರಕ್ರಿಯೆಯನ್ನು ಭೂ ಕಾಯ್ದೆಯ ನಿಯಮದಂತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹಾಗೂ ಈಗಾಗಲೇ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡುವುದು ಬಾಕಿ ಇದ್ದು ವಿಳಂಬ ಮಾಡದೆ ತಕ್ಷಣ ಬಿಡುಗಡೆ ಮಾಡಬೇಕು. ಭೂಮಿಯ ಮೂಲ ಬೆಲೆಗೆ ವಿಳಂಬದ ಅವಧಿಯಲ್ಲಿ ಶೇ.15 ಬಡ್ಡಿ ನೀಡಬೇಕಾಗುತ್ತದೆ. ವಿಳಂಬದಿಂದಾಗಿ ಮೂಲ ಬೆಲೆಗಿಂತ ಬಡ್ಡಿಯೇ ಹೆಚ್ಚಾಗುತ್ತಾ ಹೋಗುತ್ತಿದೆ. ಯೋಜನಾ ವೆಚ್ಚವು ಬಡ್ಡಿ ಕಾರಣದಿಂದ ದ್ವಿಗುಣವಾಗುತ್ತಾ ಹೋಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಆರಂಭದಿಂದ ಪರಿಹಾರ ದೊರೆಯುವ ನಿರ್ವಾತದ ಅವಧಿಯಲ್ಲಿ ಯೋಜನಾ ಬಾಧಿತರು ಸಾಲ ಮಾಡಿ ಬದುಕುತ್ತಿದ್ದಾರೆ. ನೀವು ನೀಡುವ ಬಡ್ಡಿಯ ಬ್ಯಾಂಕ್‌ಗಳ ಪಾಲಾಗುತ್ತಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣ ಗೊಳಿಸಿ ಯೋಜನಾ ಬಾಧಿತರು ಬೀದಿ ಪಾಲಾಗುವುದನ್ನು ತಡೆಗಟ್ಟಬೇಕು ಸೇರಿ ವಿವಿಧ ಬೇಡಿಕೆಗಳನ್ನು ತಕ್ಷಣವೇ ಸರ್ಕಾರ ಪರಿಹರಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.ಈ ಹೋರಾಟವು ಪಕ್ಷಾತೀತವಾಗಿದ್ದು, ಎಲ್ಲರೂ ಕೂಡಿಕೊಂಡು ಹೋರಾಟ ನಡೆಸುತ್ತೇವೆ. ರಾಜ್ಯದ ಒಟ್ಟು ಜಲಸಂಪನ್ಮೂ ಲದಲ್ಲಿ ಶೇ.68 ಜಲಸಂಪನ್ಮೂಲ ಉತ್ತರ ಕರ್ನಾಟಕದಲ್ಲಿದೆ. ಇಷ್ಟೊಂದು ಅಪಾರ ಪ್ರಮಾಣದ ಜಲಸಂಪನ್ಮೂಲ ಹೊಂದಿದ್ದರೂ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನಗೊಳ್ಳದ ಕಾರಣ ಉತ್ತರ ಕರ್ನಾಟಕ ಅಭಿವೃದ್ಧಿ ವಂಚಿತವಾಗಿ ಪ್ರಾದೇಶಿಕ ಅಸಮಾನತೆ ಉಂಟಾಗಿ ಬರದ ನಾಡು ಕೈಗಾರಿಕಾ ರಹಿತ ಪ್ರದೇಶವಾಗಿ ಗುಳೇ ಹೋಗುವರ ಬೀಡಾಗಿರುವುದು ದುರಾದೃಷ್ಟವಾಗಿದೆ. ಈ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಶಿವಾನಂದ ನಿಂಗನೂರ, ಅಶೋಕ ಲಾಗಲೋಟಿ. ಎನ್.ಎಂ. ಕೆಂಪಲಿಂಗನ್ನವರ, ಮಲ್ಲಪ್ಪ ಕೌಜಲಗಿ, ಹನಮಂತಪ್ಪ ಕೋರಡ್ಡಿ ಇದ್ದರು.