ಬಸವರಾಜ ಹಿರೇಮಠ
ಆಗಿನ ಕೇಂದ್ರ ಮಂತ್ರಿಯಾಗಿದ್ದ ಆರ್.ಆರ್. ದಿವಾಕರ ಈ ಆಕಾಶವಾಣಿಯನ್ನು 1950ರ ಜ. 8ರಂದು ಉದ್ಘಾಟಿಸಿದ್ದು, ಭಾರತ ರತ್ನ ಭೀಮಸೇನ ಜೋಶಿ ಸಹಚರೊಡನೆ ವಂದೇಮಾತರಂ, ಉದಯವಾಗಲಿ ಚೆಲುವ ಕನ್ನಡ ನಾಡು ಹಾಡಿದ್ದು ಇತಿಹಾಸ. ಖ್ಯಾತನಾಮರಾದ ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ ಈ ವಾಣಿಯ ಸಲಹಾ ಮಂಡಳಿ ಸದಸ್ಯರಾಗಿದ್ದು ಮತ್ತೊಂದು ಇತಿಹಾಸ.
ಮಾಂತ್ರಿಕ ಪೆಟ್ಟಿಗೆಬೇಂದ್ರೆ ಅಜ್ಜ ಸಾಧನಕೇರಿಯ ಓಣಿಯಲ್ಲಿ ರಾತ್ರಿ ಊಟದ ನಂತರ ಬುಧವಾರ ವಾಕ್ ಮಾಡುತ್ತಲೇ ಎಲ್ಲರ ಮನೆಯಲ್ಲಿ ದೊಡ್ಡದಾಗಿ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ನಾಟಕ ಕೇಳಿಯೇ ಮನೆ ತಲುಪುತ್ತಿದ್ದರು. ವಂದನಾ ಚಿಂತನ ಕೇಳುವ ಜನರು ಇನ್ನೂ ಇದ್ದಾರೆ. ಅಂತಹ ಮಾಂತ್ರಿಕ ಪೆಟ್ಟಿಗೆಗೀಗ 75ರ ಹರೆಯ. ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಚೆನ್ನವೀರ ಕಣವಿ, ವಿ.ಕೃ. ಗೋಕಾಕ್, ಗಿರೀಶ್ ಕಾರ್ನಾಡ, ಬಾಳಪ್ಪ ಏಣಗಿ, ಗಂಗೂಬಾಯಿ ಹಾನಗಲ್ ಮೊದಲಾದವರ ನೆಚ್ಚಿನ ಮಾಧ್ಯಮ ಆಗಿ ಮೆರೆದದ್ದು ಇತಿಹಾಸ. ರೇಡಿಯೋ ಕಾಕಾ, ನಾನಿ ಕಾಕಾ, ಅಕ್ಕಮ್ಮ... ಒಂದೇ ಎರಡೇ, ಇನ್ನೂ ಹಲವರು ಹೋದಲ್ಲೆಲ್ಲ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಸ್ಟಾರ್ ಕಲಾವಿದರಾಗಿದ್ದರು. ರೇಡಿಯೋ ಸೆಲೆಬ್ರಿಟಿಗಳನ್ನು ಹುಟ್ಟು ಹಾಕಿದ ಧೀಮಂತ ವಾಣಿ ಆಕಾಶವಾಣಿ ಎನ್ನಬಹುದು.
ಇದೀಗ 21ನೇ ಶತಮಾನದ ಮಾಧ್ಯಮಗಳ ಅಬ್ಬರ, ಫೇಸ್‌ಬುಕ್, ವಾಟ್ಸ್‌ಆ್ಯಪ್, ಯು ಟ್ಯೂಬ್‌ಗಳ ಅಬ್ಬರ ಟ್ಯೂನ್ ಮಾಡಲೂ ಕಷ್ಟ ಪಡುವ ರೇಡಿಯೋ ಮಂಕಾದಂತೆ ತೋರುತ್ತಿದೆ. ಗ್ರಾಮೀಣ ಭಾಗದ ಜನರ ಪ್ರೀತಿಯಿಂದ ವಂಚಿತವಾಗುತ್ತಿದೆ. ಜನರ ಕೈಯಲ್ಲಿದೆ ಮಾಯಾವಿ ಮೊಬೈಲ್. ಹೀಗಾಗಿ ಕಾಯಂ ಉದ್ಯೋಗಿಗಳ ಸಂಖ್ಯೆ 10 ದಾಟದು. ಇಷ್ಟಾಗಿಯೂ ಆಕಾಶವಾಣಿ ವಚನಾಮೃತ ಸರಣಿ 175 ವಾರದ ಸರಣಿ ದಾಟಿದೆ. ಸುಬೋಧ ಸಮಾಲೋಚನೆ 115 ವಾರದ ಸರಣಿ ದಾಟಿದೆ. ಕೃಷಿಶೋಧನೆ ಸಾಧನೆ 120ರ ಗಡಿಯಲ್ಲಿದೆ. ಅನೇಕ ವಿಶೇಷ ಸಂದರ್ಶನಗಳ ಜತೆಗೆ ಮಾಹಿತಿ ನೀಡುವ ಸುದ್ದಿ- ಸಮಾಚಾರ, ಚಿತ್ರಗೀತೆಗಳು, ಸಂಗೀತ ಭಕ್ತಿ -ಭಾವ -ಜನಪದ ಗೀತೆ ವಾದ್ಯ ಹೀಗೆ ವೈವಿಧ್ಯಮಯಿ ಕಾರ್ಯಕ್ರಮಗಳು ಧಾರವಾಡ ಆಕಾಶವಾಣಿಯ ಸ್ಥಾನವನ್ನು ಚಿರಸ್ಥಾಯಿಯಾಗಿಸಿವೆ.ಇವರ ಸೇವೆ ಸ್ಮರಣೀಯ:ಆಕಾಶವಾಣಿಗೆ 75 ತುಂಬಿದ್ದು ಉದ್ಯೋಗಿಗಳ ಕೊರತೆ ಕಾಣಲಾರಂಭಿಸಿದರೂ ಆಡಳಿತ ವಿಭಾಗಕ್ಕೆ ಹೊರಗುತ್ತಿಗೆಯ ಜನ ಆಸರೆಯಾಗಿದ್ದಾರೆ. ಕಾರ್ಯಕ್ರಮ ವಿಭಾಗಕ್ಕೆ ಕಾಯಕಲ್ಪ ನೀಡಿದವರು ತಾತ್ಕಾಲಿಕ ಉದ್ಘೋಷಕರು, ಪ್ರಸಾರ ಸಹಾಯಕರು, ಗ್ರಂಥಪಾಲಕ ಅಧಿಕಾರಿಗಳ ಸೇವೆ ಸ್ಮರಣೀಯ. ಲಕ್ಷಾಂತರ ಧ್ವನಿಮುದ್ರಿಕೆ ಡಿಜಿಟಲೀಕರಿಸಿ ಮುಂದಿನ ಪೀಳಿಗೆಗೆ ಅಮೂಲ್ಯ ಧ್ವನಿ ಸಂಪತ್ತು ಮುಟ್ಟಿಸುತ್ತಿರುವ ಕೈಂಕರ್ಯ ತೊಟ್ಟಿದ್ದಾರೆ ಎಂದೇ ಹೇಳಬಹುದು.
ಮಲಪ್ರಭೆಯಲ್ಲಿ ನೀರು ಹರಿದಷ್ಟು ಪ್ರಮಾಣದ ಜ್ಞಾನ, ಆಕಾಶವಾಣಿ ಮೂಲಕ ನಮ್ಮೆಲ್ಲರ ಕಿವಿ ತಲುಪಿದೆ. ಜ. 8ರಂದು ಆಕಾಶವಾಣಿ ಮಟ್ಟಿಗೆ ಕಾರ್ಯಕ್ರಮ ಜರುಗಿದರೆ, 75ರ ಸಂಭ್ರಮದ ವೇದಿಕೆ ಕಾರ್ಯಕ್ರಮ ಇದೇ ತಿಂಗಳ 3ನೇ ವಾರ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಾ. ಎಲ್. ಮುರುಗನ್ ಅತಿಥಿಗಳಾಗಿ ಭಾಗವಹಿಸುವರು. ಅಮೃತ ಮಹೋತ್ಸವ ಅಂಗವಾಗಿ ನೆನಪಿನ ಸುರುಳಿಯಿಂದ ಆಯ್ದ ಸ್ಮೃತಿ ಸಂಗೀತ, ಸ್ಮೃತಿ ಪಟಲದಿಂದ, ನೆನಪಿನಂಗಳ ಕಾರ್ಯಕ್ರಮಗಳು ಹಳೆಯ ಮಧುರ ನೆನಪುಗಳನ್ನು ಹೊತ್ತು ತರುತ್ತಿವೆ ಎನ್ನುತ್ತಾರೆ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕರಾದ ಶರಣಬಸವ ಚೋಳಿನ.